ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಟ್‌ ರನ್‌ ತೀರ್ಪಿಗೆ ಆಕ್ರೋಶ; ವ್ಯಂಗ್ಯ

ತಂತ್ರಜ್ಞಾನ ಬಳಸಿ ತಪ್ಪು ಮರುಗಳಿಸದಂತೆ ಮಾಡಲು ಒತ್ತಾಯ; ರೆಫರಿಗೆ ಕಿಂಗ್ಸ್ ಇಲೆವನ್ ದೂರು
Last Updated 21 ಸೆಪ್ಟೆಂಬರ್ 2020, 13:42 IST
ಅಕ್ಷರ ಗಾತ್ರ

ದುಬೈ: ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದ ಸಂದರ್ಭದಲ್ಲಿ ಅಂಪೈರ್‌ ’ಶಾರ್ಟ್‌ ರನ್‌’ ತೀರ್ಪು ನೀಡಿದ್ದನ್ನು ಪ್ರಶ್ನಿಸಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ದೂರು ದಾಖಲಿಸಿದೆ.

ಭಾನುವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ ಎರಡನೇ ಪಂದ್ಯ ಟೈ ಆಗಿದ್ದು ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜಯ ದಾಖಲಿಸಿತ್ತು. ಪಂದ್ಯದ 19ನೇ ಓವರ್‌ನಲ್ಲಿ ಕ್ರಿಸ್ ಜೋರ್ಡಾನ್ ಎರಡನೇ ರನ್‌ಗಾಗಿ ಪ್ರಯತ್ನಿಸಿ ಓಟ ಪೂರ್ಣಗೊಳಿಸಲಿಲ್ಲ ಎಂದು ಅಂಪೈರ್ ನಿತಿನ್ ಮೇನೋನ್ ತೀರ್ಪು ನೀಡಿದ್ದರು. ಆದರೆ ಜೋರ್ಡಾನ್ ಅವರು ಕ್ರೀಸ್‌ನ ಒಳಗೆ ಬ್ಯಾಟ್‌ ಸರಿಯಾಗಿ ಊರಿದ್ದು ಟಿವಿ ರೀಪ್ಲೇಗಳಲ್ಲಿ ಖಚಿತವಾಗಿತ್ತು. ತೀರ್ಪನ್ನು ಪರಿಶೀಲಿಸಿ ಸರಿಪಡಿಸಲು ಮೂರನೇ ಅಂಪೈರ್‌ಗೆ ನಿಯಮದಲ್ಲಿ ಅವಕಾಶ ಇರಲಿಲ್ಲ.

’ತೀರ್ಪಿನ ವಿರುದ್ಧ ದೂರು ದಾಖಲಿಸಲಾಗಿದೆ. ಇಂಥ ತಪ್ಪುಗಳು ಆಗದಂತೆ ತಡೆಯಲು ಸೂಕ್ತ ತಂತ್ರಜ್ಞಾನವನ್ನು ಅಳವಡಿಸಬೇಕು ಎಂದು ಕೋರಲಾಗಿದೆ. ಅಂಪೈರ್ ಆ ರೀತಿ ತೀರ್ಪು ಕೊಡದೇ ಇದ್ದಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು’ ಎಂದು ಕಿಂಗ್ಸ್ ಇಲೆವನ್‌ನ ಮೂಲಗಳು ಹೇಳಿವೆ. ಈ ಪಂದ್ಯಕ್ಕೆ ರೆಫರಿಯಾಗಿದ್ದ ಜಾವಗಲ್ ಶ್ರೀನಾಥ್ ಅವರಿಗೆ ದೂರು ಸಲ್ಲಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಎಂಟು ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವನ್‌ಗೆ ಆರಂಭಿಕ ಜೋಡಿ ಕೆ.ಎಲ್‌.ರಾಹುಲ್ (21) ಮಯಂಕ್ ಅಗರವಾಲ್ (89; 60 ಎಸೆತ, 4 ಸಿಕ್ಸರ್‌, 7 ಬೌಂಡರಿ) 30 ರನ್ ಸೇರಿಸಿದರು. ರಾಹುಲ್ ಔಟಾದ ನಂತರ ಕಗಿಸೊ ರಬಾಡ, ರವಿಚಂದ್ರನ್ ಅಶ್ವಿನ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರ ದಾಳಿಯಿಂದ ತಂಡ ದಿಢೀರ್ ಕುಸಿತ ಕಂಡಿತು.

ಸರ್ಫರಾಜ್ ಖಾನ್ (12) ಮತ್ತು ಕೃಷ್ಣಪ್ಪ ಗೌತಮ್ (20) ಅವರ ಜೊತೆಗೂಡಿ ಮಯಂಕ್ ಅವರು ಅಮೋಘ ಆಟವಾಡಿದರು. ಕೊನೆಯ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಕ್ರಮವಾಗಿ ಮಯಂಕ್ ಮತ್ತು ಕ್ರಿಸ್ ಜೋರ್ಡಾನ್ ವಿಕೆಟ್ ಕಬಳಿಸಿದ ಸ್ಟೋಯಿನಿಸ್ ಪಂದ್ಯ ಟೈ ಆಗುವಂತೆ ಮಾಡಿದರು.

ಸೂಪರ್ ಓವರ್‌ನಲ್ಲಿ ಎರಡು ರನ್ ಗಳಿಸುವಷ್ಟರಲ್ಲಿ ಕಿಂಗ್ಸ್ ಇಲೆವನ್‌ನ ಎರಡೂ ವಿಕೆಟ್‌ಗಳನ್ನು ರಬಾಡ ಕಬಳಿಸಿದರು. ಗೆಲುವಿಗೆ ಬೇಕಾದ ಮೂರು ರನ್‌ಗಳನ್ನು ಡೆಲ್ಲಿ ಸುಲಭವಾಗಿ ಗಳಿಸಿತು.

ಆಟಗಾರರಿಂದ ಆಕ್ರೋಶ; ವ್ಯಂಗ್ಯ

ನಿತಿನ್ ಮೇನೋನ್ ಅವರ ತೀರ್ಪಿಗೆ ಆಟಗಾರರು, ಕ್ರಿಕೆಟ್ ಪ್ರಿಯರು ಮತ್ತು ಇತರರಿಂದ ಆಕ್ರೋಶ ವ್ಯಕ್ತವಾಗಿದೆ. ಕೆಲವು ವ್ಯಂಗ್ಯದ ನುಡಿಗಳನ್ನು ಆಡಿದ್ದಾರೆ.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ’ಈ ಪಂದ್ಯದಲ್ಲಿ ನಿಜಕ್ಕೂ ಪಂದ್ಯಶ್ರೇಷ್ಠ ಪ್ರಶಸ್ತಿ ದಕ್ಕಬೇಕಾಗಿರುವುದು ಆ ತೀರ್ಪು ನೀಡಿದ ಅಂಪೈರ್‌ಗೆ’ ಎಂದು ಟ್ವೀಟ್ ಮಾಡಿದ್ದರು. ’ಅದು ನಿಜಕ್ಕೂ ಶಾರ್ಟ್ ರನ್ ಆಗಿರಲಿಲ್ಲ. ಇಂಥ ತಪ್ಪುಗಳು ಆಗದಂತೆ ನೋಡಿಕೊಳ್ಳಲು ತಂತ್ರಜ್ಞಾನದ ನೆರವು ಪಡೆದುಕೊಳ್ಳಬೇಕು’ ಎಂದು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT