ಅಶ್ವಿನ್‌–ಬಟ್ಲರ್‌ ಮುಖಾಮುಖಿ

ಮಂಗಳವಾರ, ಏಪ್ರಿಲ್ 23, 2019
27 °C
ಮೊಹಾಲಿಯಲ್ಲಿ ಇಂದು ಕಿಂಗ್ಸ್‌ ಇಲೆವನ್‌–ರಾಜಸ್ಥಾನ್‌ ರಾಯಲ್ಸ್‌ ಪೈಪೋಟಿ

ಅಶ್ವಿನ್‌–ಬಟ್ಲರ್‌ ಮುಖಾಮುಖಿ

Published:
Updated:
Prajavani

ಮೊಹಾಲಿ: ಮಂಕಡಿಂಗ್ ರನ್‌ಔಟ್‌ ನಂತರ ಸಾಕಷ್ಟು ಸುದ್ದಿಯಾಗಿದ್ದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ನಾಯಕ ಆರ್‌.ಅಶ್ವಿನ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡದ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌, ಈಗ ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದಾರೆ.

ಐ.ಎಸ್‌.ಬಿಂದ್ರಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಹೋರಾಟದಲ್ಲಿ ಕಿಂಗ್ಸ್‌ ಇಲೆವನ್‌ ಮತ್ತು ರಾಜಸ್ಥಾನ್‌ ‍ಪೈಪೋಟಿ ನಡೆಸಲಿದ್ದು, ಅಶ್ವಿನ್‌ ಮತ್ತು ಬಟ್ಲರ್‌ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ.

ಮಾರ್ಚ್‌ 25ರಂದು ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಅಶ್ವಿನ್‌, ಬಟ್ಲರ್‌ ಅವರನ್ನು ಮಂಕಡಿಂಗ್‌ ರೀತಿಯಲ್ಲಿ ರನ್‌ಔಟ್‌ ಮಾಡಿದ್ದರು. ಆ ಬಗ್ಗೆ ಪರ, ವಿರೋಧದ ಚರ್ಚೆಗಳೂ ನಡೆದಿದ್ದವು. ಮೊಹಾಲಿ ಅಂಗಳದಲ್ಲಿ ಅಶ್ವಿನ್‌ ಬೌಲ್‌ ಮಾಡಲು ಬಂದಾಗ ಒಂದೊಮ್ಮೆ ಬಟ್ಲರ್‌ ನಾನ್‌ಸ್ಟ್ರೈಕ್‌ನಲ್ಲಿದ್ದರೆ, ಅವರು ಕ್ರೀಸ್‌ ಬಿಟ್ಟು ಮುಂದೆ ಬರುತ್ತಾರೆಯೇ, ಎದುರಾಳಿ ತಂಡದ ನಾಯಕನಿಗೆ ಅವರು ಹೇಗೆ ಪ್ರತ್ಯುತ್ತರ ನೀಡುತ್ತಾರೆ ಎಂಬುದು ಸದ್ಯದ ಕುತೂಹಲ.

ಲೀಗ್‌ನ ಆರಂಭಿಕ ಪಂದ್ಯಗಳಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿ ಗಮನ ಸೆಳೆದಿದ್ದ ಕಿಂಗ್ಸ್‌ ಇಲೆವನ್‌ ಸತತ ಎರಡು ಸೋಲುಗಳಿಂದ ಕಂಗೆಟ್ಟಿದೆ. ಮುಂಬೈ ಇಂಡಿಯನ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಮಣಿದಿದ್ದ ಈ ತಂಡ, ರಾಜಸ್ಥಾನ್‌ ಎದುರು ಗೆದ್ದು ಹಿಂದಿನ ನಿರಾಸೆಗಳನ್ನು ಮರೆಯಲು ತಯಾರಾಗಿದೆ.

ಮುಂಬೈ ಮತ್ತು ಆರ್‌ಸಿಬಿ ಎದುರು ಅಶ್ವಿನ್‌ ಪಡೆ ಬೌಲಿಂಗ್‌ನಲ್ಲಿ ವೈಫಲ್ಯ ಕಂಡಿತ್ತು. ಮೊಹಮ್ಮದ್‌ ಶಮಿ, ಆ್ಯಂಡ್ರ್ಯೂ ಟೈ ಮತ್ತು ಸ್ಯಾಮ್‌ ಕರನ್‌ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚು ದಂಡನೆಗೆ ಒಳಗಾಗಿದ್ದರು. ನಾಯಕ ಅಶ್ವಿನ್ ಮತ್ತು ಸ್ಪಿನ್ನರ್‌ ಮುರುಗನ್‌ ಅಶ್ವಿನ್‌ ಅವರ ಜಾದೂ ಕೂಡಾ ನಡೆದಿರಲಿಲ್ಲ.

ಮೊಹಾಲಿ ಅಂಗಳದಲ್ಲಿ ಗೆಲುವಿನ ತೋರಣ ಕಟ್ಟಬೇಕಾದರೆ, ಆತಿಥೇಯರು ಪರಿಣಾಮಕಾರಿ ಬೌಲಿಂಗ್ ನಡೆಸುವುದು ಅಗತ್ಯ.

ಕಿಂಗ್ಸ್‌ ಇಲೆವನ್‌ನ ಬ್ಯಾಟಿಂಗ್‌ ವಿಭಾಗ ಬಲಶಾಲಿಯಾಗಿದೆ. ಕ್ರಿಸ್‌ ಗೇಲ್‌ ಮತ್ತು ಕೆ.ಎಲ್‌.ರಾಹುಲ್‌ ತಂಡಕ್ಕೆ ಅಬ್ಬರದ ಆರಂಭ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

ಕರ್ನಾಟಕದ ರಾಹುಲ್‌, ಮುಂಬೈ ಎದುರು ಶತಕ ಸಿಡಿಸಿದ್ದರು. ಆರ್‌ಸಿಬಿ ಎದುರು ಗೇಲ್‌ ಗರ್ಜಿಸಿದ್ದರು. ಅವರು 99ರನ್‌ ಗಳಿಸಿ ಅಜೇಯವಾಗಿ ಉಳಿದಿದ್ದರು. ಉತ್ತಮ ಲಯದಲ್ಲಿರುವ ಈ ಜೋಡಿ ರಾಜಸ್ಥಾನ್ ವಿರುದ್ಧವೂ ರನ್‌ ಮಳೆ ಸುರಿಸುವ ಸಾಧ್ಯತೆ ಇದೆ.

ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಮಯಂಕ್‌ ಅಗರವಾಲ್, ಡೇವಿಡ್‌ ಮಿಲ್ಲರ್‌, ಸ್ಯಾಮ್‌ ಕರನ್‌ ಮತ್ತು ಮನದೀಪ್‌ ಸಿಂಗ್‌ ಅವರೂ ತವರಿನ ಅಂಗಳದಲ್ಲಿ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ. ಇವರು ಜೋಫ್ರಾ ಆರ್ಚರ್‌ ದಾಳಿಯನ್ನು ಹೇಗೆ ಎದುರಿಸುತ್ತಾರೆ ಎಂಬ ಕುತೂಹಲವೂ ಗರಿಗೆದರಿದೆ.

ಹಿಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿರುವ ರಹಾನೆ ಪಡೆ ಈಗ ಮತ್ತೊಂದು ಜಯದ ಮೇಲೆ ಕಣ್ಣಿಟ್ಟಿದೆ. ಹಿಂದಿನ ಗೆಲುವು ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ಬಟ್ಲರ್‌, ರಾಜಸ್ಥಾನ್ ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಅವರು ಏಳು ಪಂದ್ಯಗಳಿಂದ 288ರನ್‌ ಗಳಿಸಿದ್ದು, ಲೀಗ್‌ನಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದವರ ಪಟ್ಟಿಯಲ್ಲಿ ಆರನೇ ಸ್ಥಾನ ಹೊಂದಿದ್ದಾರೆ. ಸಂಜು ಸ್ಯಾಮ್ಸನ್‌, ರಹಾನೆ ಮತ್ತು ಬೆನ್‌ ಸ್ಟೋಕ್ಸ್‌ ಅವರ ಬಲವೂ ತಂಡಕ್ಕಿದೆ.

ಕನ್ನಡಿಗರಾದ ಶ್ರೇಯಸ್‌ ಗೋಪಾಲ್‌ ಮತ್ತು ಕೆ.ಗೌತಮ್‌ ಅವರೂ ರಾಜಸ್ಥಾನ್‌ ತಂಡದಲ್ಲಿದ್ದು, ಆಲ್‌ರೌಂಡ್‌ ಆಟದ ಮೂಲಕ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ.

ವೇಗದ ಬೌಲರ್‌ಗಳಾದ ಜಯದೇವ್‌ ಉನದ್ಕತ್‌ ಮತ್ತು ಧವಳ್ ಕುಲಕರ್ಣಿ ಅವರೂ ಪಂಜಾಬ್‌ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಲು ಕಾಯುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !