ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಿಂಕ್ಯ ಬಳಗದ ಅಂಗಳದಲ್ಲಿ ‘ಚೆಂಡು’

ಇರಾನಿ ಕಪ್ ಕ್ರಿಕೆಟ್ ಪಂದ್ಯ; ಎರಡನೇ ಇನಿಂಗ್ಸ್‌ನಲ್ಲೂ ವಿಹಾರಿ ಶತಕ; ರಹಾನೆ, ಅಯ್ಯರ್‌ ಮಿಂಚು
Last Updated 15 ಫೆಬ್ರುವರಿ 2019, 16:49 IST
ಅಕ್ಷರ ಗಾತ್ರ

ನಾಗಪುರ: ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಶತಕ ಗಳಿಸಿ ಮಿಂಚಿದ್ದ ಹನುಮ ವಿಹಾರಿ ಎರಡನೇ ಇನಿಂಗ್ಸ್‌ನಲ್ಲೂ ಮೂರಂಕಿ ಮೊತ್ತ ಗಳಿಸಿ ಅಜೇಯರಾಗಿ ಉಳಿದರು. ಅವರ ಆಟಕ್ಕೆ ನಾಯಕ ಅಜಿಂಕ್ಯ ರಹಾನೆ ಮತ್ತು ಐದನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್ ಅಯ್ಯರ್‌ ಬಲ ತುಂಬಿದರು. ಈ ಮೂವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ಇತರೆ ತಂಡ ಇರಾನಿ ಕಪ್‌ ಕ್ರಿಕೆಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.

ಪಂದ್ಯದ ನಾಲ್ಕನೇ ದಿನವಾದ ಶುಕ್ರವಾರ 374 ರನ್‌ಗಳಿಗೆ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿದ ಭಾರತ ಇತರೆ ತಂಡ ಆತಿಥೇಯ ವಿದರ್ಭದ ಗೆಲುವಿಗೆ 280 ರನ್‌ಗಳ ಗುರಿ ನೀಡಿತು. ವಿದರ್ಭ ಮೊದಲ ಓವರ್‌ನಲ್ಲೇ ನಾಯಕ ಫೈಜ್ ಫಜಲ್‌ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ದಿನದಾಟದ ಮುಕ್ತಾಯಕ್ಕೆ ತಂಡ 37 ರನ್‌ ಗಳಿಸಿದ್ದು ಕೊನೆಯ ದಿನವಾದ ಶನಿವಾರ ಗೆಲುವಿಗೆ ಇನ್ನೂ 243 ರನ್‌ ಗಳಿಸಬೇಕಾಗಿದೆ. ಪಿಚ್‌, ಬೌಲರ್‌ಗಳ ಕೈ ಹಿಡಿಯುವ ಸಾಧ್ಯತೆ ಇರುವುದರಿಂದ ಭಾರತ ಇತರೆ ತಂಡ ಭರವಸೆಯಲ್ಲಿದೆ.

ಗುರುವಾರ ಕ್ರಮವಾಗಿ 40 ಮತ್ತು 25 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಹನುಮ ವಿಹಾರಿ ಹಾಗೂ ಅಜಿಂಕ್ಯ ರಹಾನೆ ಶುಕ್ರವಾರ ನಿರಾಯಾಸವಾಗಿ ಬ್ಯಾಟ್ ಬೀಸಿದರು. ಆಕರ್ಷಕ ಶಾಟ್‌ಗಳೊಂದಿಗೆ ಮಿಂಚಿದ ಇಬ್ಬರು ಮೂರನೇ ವಿಕೆಟ್‌ಗೆ 229 ರನ್‌ ಸೇರಿಸಿದರು. ಈ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.

300 ಎಸೆತಗಳಲ್ಲಿ 180 ರನ್ ಗಳಿಸಿದ ಹನುಮ ವಿಹಾರಿ ನಾಲ್ಕು ಭರ್ಜರಿ ಸಿಕ್ಸರ್‌ಗಳು ಮತ್ತು 19 ಬೌಂಡರಿ ಗಳಿಸಿದರು. ಈ ಶತಕದೊಂದಿಗೆ ಇರಾನಿ ಕಪ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಮೂರಂಕಿ ದಾಟಿದ ಎರಡನೇ ಆಟಗಾರ ಎನಿಸಿಕೊಂಡರು. 2011ರಲ್ಲಿ ಭಾರತ ಇತರ ತಂಡದ ಪರ ಆಡಿದ್ದ ಶಿಖರ್‌ ಧವನ್‌ ಈ ಸಾಧನೆ ಮಾಡಿದ್ದರು.

ಗುರುವಾರ ಎರಡು ವಿಕೆಟ್ ಕಳೆದುಕೊಂಡು 102 ರನ್‌ ಗಳಿಸಿದ್ದ ಭಾರತ ಇತರೆ ತಂಡದ ಮೊತ್ತಕ್ಕೆ ಹನುಮ ಮತ್ತು ಅಜಿಂಕ್ಯ ಶುಕ್ರವಾರ ಬೆಳಿಗ್ಗಿನ ಅವಧಿಯಲ್ಲಿ 110 ರನ್ ಸೇರಿಸಿದರು. ಭೋಜನ ವಿರಾಮದ ನಂತರ 63 ರನ್ ಸೇರಿಸಿ ರಹಾನೆ ಔಟಾದರು.

ಶ್ರೇಯಸ್‌ ಅಯ್ಯರ್ ಸ್ಫೋಟಕ ಬ್ಯಾಟಿಂಗ್: ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಗಳಿಸಿದ್ದ ಭಾರತ ಇತರ ತಂಡ ಪಂದ್ಯದಲ್ಲಿ ಗೆಲ್ಲುವ ಕನಸು ಕಾಣಬೇಕಾದರೆ ವೇಗವಾಗಿ ರನ್ ಗಳಿಸಬೇಕಾದ ಅಗತ್ಯವಿತ್ತು. ಈ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್ ಯಶಸ್ವಿಯಾಗಿ ನಿಭಾಯಿಸಿದರು. ಚಹಾ ವಿರಾಮದ ವರೆಗೆ ತಾಳ್ಮೆಯಿಂದ ಆಡಿದ ಅವರು ನಂತರ ಭರ್ಜರಿ ಬ್ಯಾಟಿಂಗ್ ಮೂಲಕ ರಂಜಿಸಿದರು. ಎಡಗೈ ಸ್ಪಿನ್ನರ್ ಆದಿತ್ಯ ಸರವಟೆ ಅವರ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಗಳಿಸಿದ ಅವರು ಆಕ್ರಮಣಕಾರಿ ಆಟಕ್ಕೆ ನಾಂದಿ ಹಾಡಿದರು. ಮುಂದಿನ ಓವರ್‌ನಲ್ಲಿ ರಜನೀಶ್ ಗುರುಬಾನಿ ಅವರನ್ನೂ ಸಿಕ್ಸರ್ ಮತ್ತು ಬೌಂಡರಿಗೆ ಅಟ್ಟಿದರು. ಸ್ಪಿನ್ನರ್ ಅಕ್ಷಯ್‌ ಕರ್ನೇವರ್‌ ಓವರ್‌ನಲ್ಲಿ 10 ರನ್ ಕಬಳಿಸಿ ವೈಯಕ್ತಿಕ ಅರ್ಧಶತಕ (45 ಎಸೆತಗಳಲ್ಲಿ) ಪೂರೈಸಿದರು.

ಚಹಾ ವಿರಾಮಕ್ಕೆ ಹೋಗುವಾಗ 150 ರನ್ ಪೂರೈಸಿದ್ದ ಹನುಮ ವಿಹಾರಿ, ನಂತರ ವೇಗವಾಗಿ ಆಡಲು ಮುಂದಾದರು. ದಿನದಾಟ ಮುಕ್ತಾಯಕ್ಕೆ ಒಂದು ತಾಸು ಬಾಕಿ ಇರುವಾಗ ಅಜಿಂಕ್ಯ ರಹಾನೆ ಇನಿಂಗ್ಸ್ ಡಿಕ್ಲೇರ್ ಮಾಡಿದರು. ಈ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್‌ 61 ರನ್ ಗಳಿಸಿದ್ದರು. ಕೇವಲ 52 ಎಸೆತ ಎದುರಿಸಿದ ಅವರ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್ ಮತ್ತು ಐದು ಬೌಂಡರಿಗಳು ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT