ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀರ್ಷಿಕೆಯಲ್ಲಿಯೇ ಸಸ್ಪೆನ್ಸ್‌!

Last Updated 8 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಗುಳ್ಟು’‌
ಹೀಗೊಂದು ವಿಚಿತ್ರ ಹೆಸರಿಟ್ಟುಕೊಂಡು ಸಸ್ಪೆನ್ಸ್‌ ಚಿತ್ರವೊಂದನ್ನು ರೂಪಿಸಿದೆ ಯುವ ಉತ್ಸಾಹಿ ತಂಡ. ಎಂಜಿನಿಯರಿಂಗ್‌ ಪದವಿ ಮುಗಿಸಿ, ಕ್ಯಾಂಪಸ್‌ ಇಂಟರ್‌ವ್ಯೂಗೆ ಹೋಗದೆ ಗಾಂಧಿನಗರದ ದಿಕ್ಕಿಗೆ ಮುಖಮಾಡಿದ ಜನಾರ್ದನ್‌ ಈ ಚಿತ್ರದ ನಿರ್ದೇಶಕ. ಅವರ ಕನಸಿನ ಕಥೆಗೆ ಅವರ ಸ್ನೇಹಿತ ಪ್ರಶಾಂತ್‌ ರೆಡ್ಡಿ ಮತ್ತು ದೇವರಾಜ್‌ ಚಿಕ್ಕಣ್ಣ ಆರ್ಥಿಕ ಇಂಧನ ಎರೆದಿದ್ದಾರೆ. ನವೀನ್‌ ನಾಯಕನಾಗಿ ನಟಿಸುತ್ತಿದ್ದಾರೆ. ಸೋನು ಗೌಡ ನಾಯಕಿ. ಈ ಹೊಸಬರ ಪ್ರಯತ್ನಕ್ಕೆ ಹಿರಿಯ ನಟರಾದ ಅವಿನಾಶ್‌ ಮತ್ತು ರಂಗಾಯಣ ರಘು ತುಂಬು ಖುಷಿಯಿಂದಲೇ ಬೆಂಬಲ ನೀಡಿದ್ದಾರೆ.

‘ಗುಳ್ಟು’ ಎಂದರೇನು? ಇದು ಯಾವ ಭಾಷೆಯ ಚಿತ್ರ? ಈ ಚಿತ್ರದ ಕಥೆಗೂ ಶೀರ್ಷಿಕೆಗೂ ಏನು ಸಂಬಂಧ?

ಈ ಎಲ್ಲ ಪ್ರಶ್ನೆಗಳಿಗೂ ಒಂದು ನಗುವಿನ ಉತ್ತರ ಎಸೆದು ಸುಮ್ಮನಾಗುತ್ತಾರೆ ನಿರ್ದೇಶಕರು. ಇನ್ನೂ ಕೆದಕ ಹೊರಟರೆ ‘ಗುಳ್ಟು’ ಅಂತ ಒಂದು ಶಬ್ದ ಇಲ್ಲ. ಅದಕ್ಕೆ ಇಂಥದ್ದೇ ಅಂತ ಅರ್ಥ ಇಲ್ಲ, ಆದರೆ ಈ ಚಿತ್ರಕ್ಕೆ ಯಾಕೆ ಈ ಹೆಸರಿಟ್ಟಿದ್ದೇವೆ ಎನ್ನುವುದಕ್ಕೆ ಸಿನಿಮಾದಲ್ಲಿ ತಕ್ಕ ಸಮರ್ಥನೆ ಇದೆ. ಚಿತ್ರದ ಶೀರ್ಷಿಕೆಯಿಂದಲೇ ಸಸ್ಪೆನ್ಸ್‌ ಶುರುಮಾಡುವುದು ನಮ್ಮ ಉದ್ದೇಶ’ ಎಂದು ಹುಳ ಬಿಡುತ್ತಾರೆ ಜನಾರ್ದನ್‌.

‘ಹಣ ಇದೆ ಎನ್ನುವ ಕಾರಣಕ್ಕೇ ಸಿನಿಮಾ ಮಾಡುವುದಕ್ಕಾಗುವುದಿಲ್ಲ. ಕಥೆ, ಪ್ರತಿಭೆ ಇವುಗಳು ಇವೆ ಎಂದಾಕ್ಷಣವೂ ಸಿನಿಮಾ ಮಾಡುವುದು ಸಾಧ್ಯವಿಲ್ಲ. ಈ ಎಲ್ಲವೂ ಒಟ್ಟಿಗೆ ಸೇರಿದಾಗ ಒಂದು ಒಳ್ಳೆಯ ಸಿನಿಮಾ ನಿರ್ಮಾಣವಾಗುತ್ತದೆ. ಗುಳ್ಟು ಸಿನಿಮಾದಲ್ಲಿ ಹೀಗೆಯೇ ಆಗಿದೆ’ ಎಂದರು ನಿರ್ಮಾಪಕ ಪ್ರಶಾಂತ್‌.

‘ಗುಳ್ಟು’ ಸಿನಿಮಾ ಪ್ರಕ್ರಿಯೆ ಶುರುವಾಗಿ ಎರಡು ವರ್ಷಗಳಾಗಿವೆ. ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾ. ನಿರೂಪಣೆಯಲ್ಲಿ ಹೊಸತನವಿದೆ’ ಎಂದು ನಿರ್ದೇಶಕರು ಸ್ಪಷ್ಟಪಡಿಸಿದರು.

‘ಕನ್ನಡ ಚಿತ್ರರಂಗದಲ್ಲಿ ಎಷ್ಟೊಂದು ಹೊಸ ಬಗೆಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ನಾನೇಕೆ ಅಂಥ ಪ್ರಯೋಗದ ಭಾಗವಾಗಬಾರದು ಎಂದು ಅನಿಸಿತು. ಆದ್ದರಿಂದಲೇ ಈ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಆರಂಭದಲ್ಲಿ ಇಂಥದ್ದೊಂದು ಪಾತ್ರದಲ್ಲಿ ನಾನು ನಟಿಸಬಲ್ಲೆನಾ ಎಂಬ ಅನುಮಾನ, ಆತಂಕ ಇದ್ದೇ ಇತ್ತು. ಆದರೆ, ಕಲಾವಿದೆಯಾಗಿ ನನಗೆ ತುಂಬ ಖುಷಿಕೊಟ್ಟ ಪಾತ್ರ ಇದು’ ಎಂದು ಖುಷಿಯಿಂದ ಹೇಳಿಕೊಂಡರು ಸೋನು ಗೌಡ.

ರಂಗಾಯಣ ರಘು ಈ ಚಿತ್ರದ ಅರ್ಥದ ಬಗ್ಗೆ ವಿವರಣೆ ಕೇಳಿದಾಗ ‘ಅದು ಕಂಪ್ಯೂಟರ್‌ ಭಾಷೆ ಸರ್‌’ ಎಂದುಬಿಟ್ಟಿದ್ದರಂತೆ ನಿರ್ದೇಶಕರು. ‘ಇದ್ಯಾವ್ದೋ ನನಗೆ ಅರ್ಥವಾಗದ ಭಾಷೆ ಎಂದು ಕೊಂಡು ಸುಮ್ಮನಾದೆ’ ಎಂದರು ಅವರು. ಪತ್ರಕರ್ತನಾಗಿ ಕೆಲಸ ಮಾಡಿಯೂ ಅನುಭವ ಇರುವ ನವೀನ್‌ ಶಂಕರ್‌ ಈ ಚಿತ್ರದ ಮೂಲಕ ನಾಯಕ ನಟನಾಗಿ ಪರಿಚಿತರಾಗುತ್ತಿದ್ದಾರೆ.

ಹೊಸ ಹುಡುಗರ ತಂಡದ ಕುರಿತು ಮೆಚ್ಚುಗೆಯಿಂದಲೇ ಮಾತನಾಡಿದರು ನಟ ಅವಿನಾಶ್‌. ಅಮಿತ್‌ ಆನಂದ ಸಂಗೀತ, ಶಾಂತಿಸಾಗರ್‌ ಛಾಯಾಗ್ರಹಣ ಈ ಚಿತ್ರಕ್ಕಿದೆ.


-ಜನಾರ್ದನ್‌

*


-ನವೀನ್‌ ಶಂಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT