ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐರ್ಲೆಂಡ್‌ ವಿರುದ್ಧ ಟಿ20 ಕ್ರಿಕೆಟ್ ಪಂದ್ಯ: ಬೂಮ್ರಾ ಮೇಲೆ ಎಲ್ಲರ ಚಿತ್ತ

Published 17 ಆಗಸ್ಟ್ 2023, 23:30 IST
Last Updated 17 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಡಬ್ಲಿನ್‌: ಭಾರತ –ಐರ್ಲೆಂಡ್‌ ನಡುವಣ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಹಣಾಹಣಿ ಶುಕ್ರವಾರ ನಡೆಯಲಿದ್ದು, ಹನ್ನೊಂದು ತಿಂಗಳ ಬಳಿಕ ಕಣಕ್ಕಿಳಿಯುತ್ತಿರುವ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಐಪಿಎಲ್‌ನಲ್ಲಿ ಮಿಂಚಿದ್ದ ಋತುರಾಜ್‌ ಗಾಯಕವಾಡ್, ರಿಂಕು ಸಿಂಗ್‌ ಮತ್ತು ಜಿತೇಶ್‌ ಶರ್ಮಾ ಅವರಂತಹ ಹೊಸಬರು ಈ ಸರಣಿಯಲ್ಲಿ ಆಡುತ್ತಿದ್ದಾರೆಯಾದರೂ, ಭಾರತ ತಂಡದ ವ್ಯವಸ್ಥಾಪನ ಮಂಡಳಿಯು ಬೂಮ್ರಾ ಅವರ ಪ್ರದರ್ಶನವನ್ನು ಮುಖ್ಯವಾಗಿ ಗಮನಿಸಲಿದೆ. ಏಕೆಂದರೆ ಎರಡು ತಿಂಗಳ ಬಳಿಕ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅವರು ಭಾರತ ತಂಡದ ಸಂಯೋಜನೆಯಲ್ಲಿ ಪ್ರಮುಖರಾಗಿದ್ದಾರೆ.

29 ವರ್ಷದ ಬೂಮ್ರಾ, 2022ರ ಸೆಪ್ಟೆಂಬರ್‌ನಲ್ಲಿ ಕೊನೆಯದಾಗಿ ಅಂತರರಾಷ್ಟ್ರೀಯ ಪಂದ್ಯ ಆಡಿದ್ದರು. ಬೆನ್ನಿಗೆ ಆದ ಗಾಯದ ಶಸ್ತ್ರಚಿಕಿತ್ಸೆಯಿಂದ ದೀರ್ಘ ಕಾಲ ವಿಶ್ರಾಂತಿಯಲ್ಲಿದ್ದರು. ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅವರು ಈ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಐರ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳಲ್ಲಿ ಅವರು ಗರಿಷ್ಠ 12 ಓವರ್‌ಗಳನ್ನು ಮಾತ್ರ ಬೌಲಿಂಗ್‌ ಮಾಡಬಲ್ಲರು. ಆದರೆ ಈ ಸರಣಿಯು ಗುಜರಾತ್‌ ವೇಗಿಯ ‘ಮ್ಯಾಚ್‌ ಫಿಟ್‌ನೆಸ್‌’ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಅವಕಾಶವನ್ನು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌, ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ ಮತ್ತು ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ಕಲ್ಪಿಸಲಿದೆ.

ಬೂಮ್ರಾ, ಕಳೆದ ದಿನ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಿದ್ದ ವಿಡಿಯೊ ತುಣುಕುಗಳನ್ನು ಬಿಸಿಸಿಐ ಪ್ರಕಟಿಸಿತ್ತು. ಅವರು ಬೌನ್ಸರ್‌ ಮತ್ತು ಯಾರ್ಕರ್‌ ಎಸೆತಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದ್ದು ವಿಡಿಯೊದಲ್ಲಿ ಕಾಣಬಹುದಿತ್ತು. ಆದರೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವುದು ಮತ್ತು ಪಂದ್ಯದ ಪರಿಸ್ಥಿತಿಯಲ್ಲಿ ಬೌಲಿಂಗ್‌ ಮಾಡುವುದು ತೀರಾ ಭಿನ್ನ. ಆದ್ದರಿಂದ ಬೂಮ್ರಾ ನೀಡುವ ಪ್ರದರ್ಶನವು ಸಾಕಷ್ಟು ಕುತೂಹಲ ಮೂಡಿಸಿದೆ.

ಬೂಮ್ರಾ ಅವರಂತೆಯೇ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಕೂಡಾ ಗಾಯದ ಕಾರಣ ಹಲವು ತಿಂಗಳ ಬಿಡುವಿನ ಬಳಿಕ ತಂಡಕ್ಕೆ ಮರಳಿದ್ದಾರೆ. ಏಷ್ಯಾ ಕಪ್‌ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆಯಲು ಅವರು ಈ ಸರಣಿಯಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡುವುದು ಅಗತ್ಯ.

ಐಪಿಎಲ್‌ನಲ್ಲಿ ಗಮನ ಸೆಳೆದಿದ್ದ ರಿಂಕು ಸಿಂಗ್‌ ಮತ್ತು ಜಿತೇಶ್‌ ಅವರು ಈ ಸರಣಿ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.

ಐರ್ಲೆಂಡ್‌ ತಂಡ ಇದುವರೆಗೂ ಭಾರತದ ವಿರುದ್ಧ ಯಾವುದೇ ಪಂದ್ಯ ಜಯಿಸಿಲ್ಲ. ಆದರೂ ಆ್ಯಂಡ್ರ್ಯೂ ಬಲ್ಬರ್ನಿ ನೇತೃತ್ವದ ಬಳಗವು ಪ್ರವಾಸಿ ತಂಡಕ್ಕೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಹ್ಯಾರಿ ಟೆಕ್ಟರ್‌, ಲೋರ್ಕನ್‌ ಟಕರ್‌ ಮತ್ತು ಎಡಗೈ ಸ್ಪಿನ್ನರ್‌ ಜಾರ್ಜ್‌ ಡಾಕ್ರೆಲ್‌ ಅವರಂತಹ ಆಟಗಾರರು ತಂಡದಲ್ಲಿದ್ದಾರೆ. ಐಪಿಎಲ್‌ನಲ್ಲಿ ಗುಜರಾತ್‌ ಟೈಟನ್ಸ್‌ ತಂಡಕ್ಕೆ ಆಡುವ ಜೋಶ್‌ ಲಿಟ್ಲ್‌ ಅವರು ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

ತಂಡಗಳು:

ಭಾರತ: ಜಸ್‌ಪ್ರೀತ್‌ ಬೂಮ್ರಾ (ನಾಯಕ), ಋತುರಾಜ್‌ ಗಾಯಕವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್‌ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್‌), ಜಿತೇಶ್‌ ಶರ್ಮಾ (ವಿಕೆಟ್ ಕೀಪರ್‌), ಶಿವಂ ದುಬೆ, ವಾಷಿಂಗ್ಟನ್‌ ಸುಂದರ್, ಶಹಬಾಜ್‌ ಅಹ್ಮದ್, ರವಿ ಬಿಷ್ಣೋಯಿ, ಪ್ರಸಿದ್ಧ ಕೃಷ್ಣ, ಆರ್ಷದೀಪ್‌ ಸಿಂಗ್, ಮುಕೇಶ್‌ ಕುಮಾರ್, ಆವೇಶ್ ಖಾನ್

ಐರ್ಲೆಂಡ್‌: ಆ್ಯಂಡ್ರ್ಯೂ ಬಲ್ಬರ್ನಿ (ನಾಯಕ), ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ರಾಸ್‌ ಅಡೇರ್, ಕರ್ಟಿಸ್‌ ಕ್ಯಾಂಫರ್, ಗ್ಯಾರೆತ್‌ ಡಿಲೇನಿ, ಜಾರ್ಜ್‌ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್‌ ಲಿಟ್ಲ್, ಬ್ಯಾರಿ ಮೆಕಾರ್ಥಿ, ಬೆನ್‌ ವೈಟ್, ಕ್ರೇಗ್ ಯಂಗ್, ಥಿಯೊ ವ್ಯಾನ್ ವೋರ್ಕಮ್

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೊ ಸಿನೆಮಾ ಆ್ಯಪ್

ಟಿಕೆಟ್‌ ‘ಸೋಲ್ಡ್‌ ಔಟ್’

ಭಾರತ ಮತ್ತು ಐರ್ಲೆಂಡ್‌ ನಡುವಣ ಮೊದಲ ಎರಡು ಟಿ20 ಪಂದ್ಯಗಳ ಎಲ್ಲ ಟಿಕೆಟ್‌ಗಳೂ ಮಾರಾಟವಾಗಿವೆ ಎಂದು ಕ್ರಿಕೆಟ್‌ ಐರ್ಲೆಂಡ್‌ ತಿಳಿಸಿದೆ. ಈ ಸರಣಿಯ ಮೂರೂ ಪಂದ್ಯಗಳು 11500 ಆಸನ ಸಾಮರ್ಥ್ಯದ ಮ್ಯಾಲಹೈಡ್ ಕ್ರಿಕೆಟ್‌ ಕ್ಲಬ್‌ ಮೈದಾನದಲ್ಲಿ ನಡೆಯಲಿದೆ. ‘ಮೊದಲ ಎರಡು ಪಂದ್ಯಗಳ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದ್ದು ಮೂರನೇ ಪಂದ್ಯದ ಎಲ್ಲ ಟಿಕೆಟ್‌ಗಳೂ ಮಾರಾಟವಾಗುವ ನಿರೀಕ್ಷೆಯಿದೆ’ ಎಂದು ಐರ್ಲೆಂಡ್‌ ಕ್ರಿಕೆಟ್‌ ಸಂಸ್ಥೆ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT