ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

India vs Australia| ಬಾಕ್ಸಿಂಗ್ ಡೇ ಟೆಸ್ಟ್‌: ಹನುಮ ವಿಹಾರಿ ಬದಲಿಗೆ ಜಡೇಜ?

ಕ್ವಾರಂಟೈನ್‌ನಲ್ಲಿರುವ ರೋಹಿತ್ ಶರ್ಮಾ ಜನವರಿ ಮೂರರಿಂದ ಅಭ್ಯಾಸಕ್ಕೆ ಇಳಿಯುವ ಸಾಧ್ಯತೆ
Last Updated 21 ಡಿಸೆಂಬರ್ 2020, 13:23 IST
ಅಕ್ಷರ ಗಾತ್ರ

ಅಡಿಲೇಡ್‌: ತಲೆಗೆ ಪೆಟ್ಟುಬಿದ್ದು ಚಿಕಿತ್ಸೆ ಪಡೆದಿರುವ ಆಲ್‌ರೌಂಡರ್ ರವೀಂದ್ರ ಜಡೇಜ ಶೀಘ್ರ ಗುಣಮುಖರಾದರೆ ಆಸ್ಟ್ರೇಲಿಯಾ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಆಡುವ 11ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಭಾರತ ತಂಡದ ಆಡಳಿತವು ಜಡೇಜ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದು ಪಂದ್ಯಕ್ಕೆ ಅವರು ಲಭ್ಯವಾಗುವುದು ಖಚಿತವಾದರೆ ಹನುಮ ವಿಹಾರಿಗೆ ವಿಶ್ರಾಂತಿ ನೀಡಲಿದೆ.

ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಜಡೇಜ ಮೊದಲ ಟಿ20 ಪಂದ್ಯದಲ್ಲಿ ತಲೆಗೆ ಪೆಟ್ಟು ಬಿದ್ದು ಅಂಗಣ ತೊರೆದಿದ್ದರು.ಮಂಡಿರಜ್ಜು ನೋವು ಕೂಡ ಅವರನ್ನು ಕಾಡುತ್ತಿತ್ತು. ಆದ್ದರಿಂದ ಮೊದಲ ಟೆಸ್ಟ್‌ನಿಂದ ಕೈಬಿಡಲಾಗಿತ್ತು. ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳಿಂದ ಸೋತಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಕನಿಷ್ಟ ಮೊತ್ತ ಗಳಿಸಿ ಟೀಕೆಗೆ ಒಳಗಾಗಿತ್ತು.

ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದಾಗ ಜಡೇಜ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದಾರೆ. ಇದು ತಂಡದ ಆಡಳಿತದಲ್ಲಿ ಭರವಸೆ ಮೂಡಿಸಿದೆ. ಆದರೆ ಅವರು ಪಂದ್ಯದಲ್ಲಿ ಆಡುವಷ್ಟು ಫಿಟ್‌ ಆಗಿದ್ದಾರೆಯೋ ಇಲ್ಲವೋ ಎಂಬುದು ಇನ್ನೂ ನಿರ್ಧಾರವಾಗಲಿಲ್ಲ.

ಮೊದಲ ಟೆಸ್ಟ್‌ನಲ್ಲಿ ಹನುಮ ವಿಹಾರಿ ಅವರಿಗೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಜಡೇಜಗೆ ಅವಕಾಶ ಕೊಡುವುದಾದರೆ ಹನುಮ ವಿಹಾರಿ ಸ್ಥಾನಕ್ಕೆ ಧಕ್ಕೆಯಾಗಲಿದೆ. ಜಡೇಜ ಆಡಲು ಲಭ್ಯವಾದರೆ ಉತ್ತಮ ತಂಡವನ್ನು ಕಣಕ್ಕೆ ಇಳಿಸಲು ಸಾಧ್ಯ ಎಂಬುದು ಕೋಚ್ ರವಿಶಾಸ್ತ್ರಿ ಅವರ ಲೆಕ್ಕಾಚಾರ.

‘ಹೆಚ್ಚು ಓವರ್‌ಗಳನ್ನು ಹಾಕಲು ಜಡೇಜಗೆ ಸಾಧ್ಯವಾಗುತ್ತದೆ ಎಂದಾದರೆ ಹಿಂದೆ ಮುಂದೆ ನೋಡದೇ ಅವರಿಗೆ ಸ್ಥಾನ ನೀಡಲಾಗುವುದು. ಆಲ್‌ರೌಂಡ್ ಆಟವಾಡಲು ಸಾಧ್ಯವಾಗುವ ಕಾರಣ ವಿಹಾರಿ ಬದಲಿಗೆ ಜಡೇಜ ಉತ್ತಮ ಆಯ್ಕೆ. ಅವರು ಲಭ್ಯವಾದರೆ ಐವರು ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯುವ ಅವಕಾಶವೂ ತೆರೆದುಕೊಳ್ಳಲಿದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪದಾಧಿಕಾರಿಯೊಬ್ಬರು ತಿಳಿಸಿದರು.

49 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಜಡೇಜ 1869 ರನ್ ಕಲೆ ಹಾಕಿದ್ದು ಒಂದು ಶತಕ ಮತ್ತು 14 ಅರ್ಧಶತಕಗಳು ಅವರ ಖಾತೆಯಲ್ಲಿವೆ. ಕೊನೆಯದಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಅವರು ಅರ್ಧಶತಕ ಗಳಿಸಿದ್ದರು. ಹನುಮ ವಿಹಾರಿ ಆಡಿರುವುದು 10 ಟೆಸ್ಟ್ ಮಾತ್ರ. 576 ರನ್ ಗಳಿಸಿರುವ ಅವರು ವೆಸ್ಟ್ ಇಂಡೀಸ್ ವಿರುದ್ಧ ಶತಕ ಗಳಿಸಿದ್ದು ನಾಲ್ಕು ಅರ್ಧಶತಕಗಳು ಅವರ ಖಾತೆಯಲ್ಲಿವೆ. ಜಡೇಜ 35ರ ಸರಾಸರಿಯಲ್ಲಿ ರನ್ ಗಳಿಸಿದ್ದರೆ ಹನುಮ ವಿಹಾರಿ ಅವರ ಸರಾಸರಿ 33.

ಮಣಿಗಂಟಿನಲ್ಲಿ ಗಾಯವಾಗಿರುವ ಕಾರಣ ಮೊಹಮ್ಮದ್ ಶಮಿ ಅವರನ್ನು ಈಗಾಗಲೇ ಎರಡನೇ ಟೆಸ್ಟ್‌ನಿಂದ ಕೈಬಿಡಲಾಗಿದೆ. ಆದರೂ ಐವರು ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯಲು ಭಾರತ ತಂಡ ಚಿಂತನೆ ನಡೆಸಿದೆ. ಕೆಲವು ವರ್ಷಗಳಿಂದ ಭಾರತ ತಂಡ ನಾಲ್ವರು ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯುವುದನ್ನೇ ರೂಢಿಸಿಕೊಂಡಿದೆ.

ಅಭ್ಯಾಸಕ್ಕೆ ಮಳೆ ಅಡ್ಡಿ

ಅಡಿಲೇಡ್ ಓವಲ್‌ನಲ್ಲಿ ಸೋಮವಾರ ಭಾರತ ತಂಡ ಅಭ್ಯಾಸ ಮಾಡುವ ಯೋಜನೆ ಇತ್ತು. ಆದರೆ ಜಿಟಿಜಿಟಿ ಮಳೆ ಸುರಿದ ಕಾರಣ ಅದು ಸಾಧ್ಯವಾಗಲಿಲ್ಲ. ಗರ್ಭಿಣಿ ಪತ್ನಿಯ ಜೊತೆ ಇರುವುದಕ್ಕಾಗಿ ನಾಯಕ ವಿರಾಟ್ ಕೊಹ್ಲಿ ಮಂಗಳವಾರ ಭಾರತಕ್ಕೆ ವಾಪಸಾಗಲಿದ್ದು ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ತಡವಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿರುವ ರೋಹಿತ್ ಶರ್ಮಾ ಜನವರಿ ಮೂರರಿಂದ ಅಭ್ಯಾಸ ಮಾಡುವ ಸಾಧ್ಯತೆ ಇದೆ. ಸಿಡ್ನಿಯಲ್ಲಿ ಎರಡು ಕೊಠಡಿಗಳ ಫ್ಲ್ಯಾಟ್‌ನಲ್ಲಿ ಅವರು ಈಗ ಕ್ವಾರಂಟೈನ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT