ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಬೌನ್ಸರ್‌.. ಯಾರ್ಕರ್‌..

ಸುಮಾರು 11 ತಿಂಗಳುಗಳ ನಂತರ ಜಸ್‌ಪ್ರೀತ್ ಬೂಮ್ರಾ ಭಾರತ ತಂಡದ ನೆಟ್ಸ್‌ಗೆ ಮರಳಿದರು.
Published 16 ಆಗಸ್ಟ್ 2023, 14:50 IST
Last Updated 16 ಆಗಸ್ಟ್ 2023, 14:50 IST
ಅಕ್ಷರ ಗಾತ್ರ

ಡಬ್ಲಿನ್, ಐರ್ಲೆಂಡ್: ಸುಮಾರು 11 ತಿಂಗಳುಗಳ ನಂತರ ಜಸ್‌ಪ್ರೀತ್ ಬೂಮ್ರಾ ಭಾರತ ತಂಡದ ನೆಟ್ಸ್‌ಗೆ ಮರಳಿದರು.

ಬುಧವಾರ ಇಲ್ಲಿಯ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ ಬೂಮ್ರಾ ತಮ್ಮ ದೈಹಿಕ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಿದರು. 2022ರ ಸೆಪ್ಟೆಂಬರ್‌ 25ರಂದು ಹೈದರಾಬಾದ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾದ ಎದುರಿನ ಟಿ20 ಪಂದ್ಯದಲ್ಲಿ ಆಡಿದ್ದ ಅವರು ನಂತರ ಕಣಕ್ಕಿಳಿದಿರಲಿಲ್ಲ.

ಬೆನ್ನಿಗೆ ಆದ ಗಾಯದ ಶಸ್ತ್ರಚಿಕಿತ್ಸೆಯಿಂದಾಗಿ ದೀರ್ಘ ಕಾಲ ವಿಶ್ರಾಂತಿ ಮತ್ತು ಪುನಶ್ಚೇತನ ಪ್ರಕ್ರಿಯೆಯಲ್ಲಿ ಅವರಿದ್ದರು. ಇದೀಗ ಐರ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸುವರು.

29 ವರ್ಷದ ಬೂಮ್ರಾ ಮುಂಬರುವ ಏಷ್ಯಾ ಕಪ್ ಮತ್ತು ವಿಶ್ವಕಪ್ ಟೂರ್ನಿಗಳಲ್ಲಿ ಆಡಲು ಸಮರ್ಥರಾಗುವರೇ ಎಂಬ ಕುತೂಹಲ ಈಗ ಇದೆ. ಆದರಿಂದಾಗಿ ಈ ಟೂರ್ನಿಯು ಮಹತ್ವದ್ದಾಗಿದೆ.  ಅವರು ತಂಡಕ್ಕೆ ಮರಳುವುದರಿಂದ ಬೌಲಿಂಗ್ ವಿಭಾಗವು ಬಲಿಷ್ಠವಾಗುವ ನಿರೀಕ್ಷೆ ಇದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಬೂಮ್ರಾ ಅಭ್ಯಾಸದ ವಿಡಿಯೊ ತುಣುಕುಗಳನ್ನು ಪ್ರಕಟಿಸಿದೆ.

ಅವರು ಬಲಗೈ ಬ್ಯಾಟರ್‌ಗೆ ಉತ್ತಮ  ಬೌನ್ಸರ್ ಪ್ರಯೋಗಿಸಿದರು. ಎಡಗೈ ಬ್ಯಾಟರ್‌ಗೆ ತಮ್ಮ ನೆಚ್ಚಿನ ಯಾರ್ಕರ್‌ ಎಸೆತವನ್ನೂ ಪ್ರಯೋಗಿಸುವಲ್ಲಿ ಯಶಸ್ವಿಯಾದರು. 

ಇದೇ ತಂಡದಲ್ಲಿ ಕನ್ನಡಿಗ, ವೇಗಿ ಪ್ರಸಿದ್ಧಕೃಷ್ಣ ಕೂಡ ಇದ್ದಾರೆ. ಅವರು ಕೂಡ ದೀರ್ಘ ಸಮಯದಿಂದ ಕಣದಿಂದ ಹೊರಗಿದ್ದರು. ಬೆನ್ನಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಪಡೆದ ನಂತರ ಕಣಕ್ಕೆ ಮರಳಿದ್ದಾರೆ.

ಸಂಜುಗೆ ಜಿತೇಶ್ ಸ್ಪರ್ಧೆ: ಉದಯೋನ್ಮುಖ ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಅವರು ಬೂಮ್ರಾ ಬಳಗದಲ್ಲಿದ್ದಾರೆ. ಅನುಭವಿ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಅವರೂ ಇದ್ದಾರೆ. ಇವರಿಬ್ಬರ ಸಾಮರ್ಥ್ಯ ಪರೀಕ್ಷೆಗೆ ಈ ಟೂರ್ನಿ ವೇದಿಕೆಯಾಗಲಿದೆ.

ಕೇರಳದ ಸಂಜು ಈಚೆಗೆ  ಆಡಿದ ಮೂರು ಟಿ20 ಪಂದ್ಯಗಳಲ್ಲಿ (12, 7 ಮತ್ತು 13 ರನ್) ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು. ಇದರಿಂದಾಗಿ ಜಿತೇಶ್ ಅವರಿಗೆ ಐರ್ಲೆಂಡ್‌ನಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಮಹಾರಾಷ್ಟ್ರದ ಅಮರಾವತಿಯ 29 ವರ್ಷದ ಕ್ರಿಕೆಟಿಗ ಶರ್ಮಾ ಏಷ್ಯನ್ ಗೇಮ್ಸ್‌ನಲ್ಲಿ ಆಡುವ ತಂಡದಲ್ಲಿಯೂ ಇದ್ದಾರೆ. ಅದಲ್ಲಿರುವ ಪ್ರಭಸಿಮ್ರನ್ ಸಿಂಗ್ ಅವರೂ ಇದ್ದಾರೆ. ಆದರೆ ಶರ್ಮಾ ಅವರಿಗೆ ಆದ್ಯತೆ ದೊರೆಯುವುದು ಖಚಿತ.

‌ಅದರಿಂದಾಗಿ ಪೂರ್ವಭಾವಿ ಸಿದ್ಧತೆಗಾಗಿ ಐರ್ಲೆಂಡ್‌ನಲ್ಲಿ ಅವರಿಗೆ ಹೆಚ್ಚು ಪ್ರಾಶಸ್ತ್ಯ ಸಿಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT