ಜೆಮಿಮಾ ಉತ್ತಮ ಸಾಧನೆ

7
ಐಸಿಸಿ ಮಹಿಳೆಯರ ಟ್ವೆಂಟಿ–20 ರ‍್ಯಾಂಕಿಂಗ್‌: ಸ್ಮೃತಿ ಮಂದಾನಗೆ ಆರನೇ ಸ್ಥಾನ

ಜೆಮಿಮಾ ಉತ್ತಮ ಸಾಧನೆ

Published:
Updated:
Prajavani

ದುಬೈ : ನ್ಯೂಜಿಲೆಂಡ್ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ ಭಾರತದ ಬ್ಯಾಟ್ಸ್‌ವುಮನ್‌ ಜೆಮಿಮಾ ರಾಡ್ರಿಗಸ್‌ ಐಸಿಸಿ ಮಹಿಳೆಯರ ಟ್ವೆಂಟಿ–20 ರ‍್ಯಾಂಕಿಂಗ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಸ್ಫೋಟಕ ಬ್ಯಾಟ್ಸ್‌ವುಮನ್ ಸ್ಮೃತಿ ಮಂದಾನ ಕೂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮಿಂಚಿದ್ದಾರೆ. ಇಬ್ಬರೂ ತಲಾ ನಾಲ್ಕು ಸ್ಥಾನಗಳ ಏರಿಕೆ ಕಂಡಿದ್ದು ಕ್ರಮವಾಗಿ ಎರಡು ಮತ್ತು ಆರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 0–3ರಿಂದ ಸೋತಿತ್ತು. ಆದರೂ ಈ ಇಬ್ಬರು ಆಟಗಾರ್ತಿಯರು ಗಮನ ಸೆಳೆದಿದ್ದರು. ಜೆಮಿಮಾ ಒಟ್ಟು 132 ರನ್‌ ಕಲೆ ಹಾಕಿದ್ದರೆ, ಸ್ಮೃತಿ 180 ರನ್‌ ಗಳಿಸಿದ್ದರು. ಎರಡು ಅರ್ಧಶತಕ ಗಳಿಸಿದ ಅವರು ಸರಣಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂದೆನಿಸಿಕೊಂಡಿದ್ದರು.

ರಾಧಾ ಯಾದವ್‌ಗೆ 10ನೇ ಸ್ಥಾನ:ಸ್ಪಿನ್ನರ್ ರಾಧಾ ಯಾದವ್‌ 18 ಸ್ಥಾನಗಳ ಏರಿಕೆಯೊಂದಿಗೆ ಬೌಲರ್‌ಗಳ ಪಟ್ಟಿಯಲ್ಲಿ 10ನೆಯವರಾಗಿದ್ದಾರೆ. ಸರಣಿಯಲ್ಲಿ ಅವರು ನಾಲ್ಕು ವಿಕೆಟ್ ಕಬಳಿಸಿದ್ದರು. ಐದು ಸ್ಥಾನಗಳ ಬಡ್ತಿ ಪಡೆದಿರುವ ದೀಪ್ತಿ ಶರ್ಮಾ 14ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಭಾರತ ಎದುರಿನ ಸರಣಿಯಲ್ಲಿ ಒಟ್ಟು 153 ರನ್ ಗಳಿಸಿರುವ ನ್ಯೂಜಿಲೆಂಡ್‌ನ ಸೋಫಿ ಡಿವೈನ್‌ 11ನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೆ ಏರಿದ್ದು ನಾಯಕಿ ಆ್ಯಮಿ ಸಟರ್‌ವೇಟ್‌ 23ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಬೌಲರ್‌ಗಳ ಪೈಕಿ ಲೀ ತಹುಹು ಗಮನಾರ್ಹ ಸಾಧನೆ ಮಾಡಿದ್ದಾರೆ. 11ನೇ ಸ್ಥಾನದಲ್ಲಿದ್ದ ಅವರು ಈಗ ಐದನೇ ಸ್ಥಾನಕ್ಕೆ ತಲುಪಿದ್ದಾರೆ.

ಆಲ್‌ರೌಂಡರ್‌ಗಳ ‍ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಡಿಯಾಂಡ್ರ ದೊತಿನ್‌ ಅಗ್ರ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಎದುರಿನ ಸರಣಿಯಲ್ಲಿ ಅವರು 158 ರನ್‌ ಗಳಿಸಿದ್ದು ಮೂರು ವಿಕೆಟ್ ಪಡೆದಿದ್ದರು. ಬ್ಯಾಟಿಂಗ್ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕಿ ಬಿಸ್ಮಾ ಮರೂಫ್‌ ಅವರು ಜವೇರಿಯಾ ಖಾನ್‌ ಜೊತೆ 15ನೇ ಸ್ಥಾನ ಹಂಚಿಕೊಂಡಿದ್ದಾರೆ.‌

ತಂಡಗಳ ಪೈಕಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲೇ ಉಳಿದಿದ್ದು ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !