ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಏಕದಿನ ರ‍್ಯಾಂಕಿಂಗ್‌: ಅಗ್ರ ಸ್ಥಾನಕ್ಕೇರಿದ ಜೂಲನ್ ಗೋಸ್ವಾಮಿ

ಐಸಿಸಿ ಮಹಿಳೆಯರ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌: ಎರಡನೇ ಸ್ಥಾನದಲ್ಲಿ ಭಾರತ ತಂಡ
Last Updated 4 ಮಾರ್ಚ್ 2019, 12:15 IST
ಅಕ್ಷರ ಗಾತ್ರ

ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬೌಲರ್ ಜೂಲನ್ ಗೋಸ್ವಾಮಿ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಮುಂಬೈನಲ್ಲಿ ನಡೆದಿದ್ದ ಇಂಗ್ಲೆಂಡ್‌ ಎದುರಿನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ತೋರಿದ ಅಮೋಘ ಸಾಮರ್ಥ್ಯ ಅವರಿಗೆ ಈ ಸ್ಥಾನ ಗಳಿಸಿಕೊಟ್ಟಿದೆ. 36 ವರ್ಷದ ಜೂಲನ್‌ ಸರಣಿಯಲ್ಲಿ ಒಟ್ಟು ಎಂಟು ವಿಕೆಟ್ ಉರುಳಿಸಿದ್ದರು.

ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ 2–1ರ ಗೆಲುವು ಸಾಧಿಸಿದ ಭಾರತ ತಂಡ ಎರಡನೇ ಸ್ಥಾನ ಗಳಿಸಿದೆ. ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದೆ. ಈ ಮೂಲಕ ನ್ಯೂಜಿಲೆಂಡ್‌ ತಂಡ 2021ರ ವಿಶ್ವಕಪ್‌ ಟೂರ್ನಿಗೆ ನೇರವಾಗಿ ಅರ್ಹತೆ ಗಳಿಸಿದೆ.

‌2017ರ ಫೆಬ್ರುವರಿಯಲ್ಲಿ ಬೌಲರ್‌ಗಳ ಪಟ್ಟಿಯ ಅಗ್ರಸ್ಥಾನಕ್ಕೇರಿದ್ದ ಜೂಲನ್ ಒಟ್ಟು 218 ವಿಕೆಟ್ ಉರುಳಿಸಿದ್ದು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ರ‍್ಯಾಂಕಿಂಗ್ ಪಟ್ಟಿಯ ಅಗ್ರಸ್ಥಾನದಲ್ಲಿ ಅತಿ ಹೆಚ್ಚು ದಿನ ಉಳಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುವತ್ತ ಅವರು ಹೆಜ್ಜೆ ಇರಿಸಿದ್ದಾರೆ. ಈಗ ಅವರು ಒಟ್ಟು 1873 ದಿನಗಳ ಸಾಧನೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ನಿವೃತ್ತ ಆಟಗಾರ್ತಿ ಕ್ಯಾಥರಿನ್ ಫಿಟ್ಜ್‌ ಪ್ಯಾಟ್ರಿಕ್‌ ಇದ್ದಾರೆ. ಅವರು 2113 ದಿನ ಅಗ್ರಸ್ಥಾನದಲ್ಲಿದ್ದರು.

ಶಿಖಾ ಪಾಂಡೆ 12 ಸ್ಥಾನಗಳ ಏರಿಕೆ:ಭಾರತದ ಮತ್ತೊಬ್ಬರು ಮಧ್ಯಮ ಕ್ರಮಾಂಕದ ಬೌಲರ್‌ ಶಿಖಾ ಪಾಂಡೆ ಒಟ್ಟು 12 ಸ್ಥಾನಗಳ ಏರಿಕೆ ಕಂಡಿದ್ದು ಐದನೇ ಸ್ಥಾನಕ್ಕೇರಿದ್ದಾರೆ. ಭಾರತದ ಇಬ್ಬರು ಬೌಲರ್‌ಗಳು ಅಗ್ರ ಐದರಲ್ಲಿ ಸ್ಥಾನ ಗಳಿಸಿರುವುದು ಇದು ಎರಡನೇ ಬಾರಿ. 2010ರಲ್ಲಿ ಜೂಲನ್ ಮತ್ತು ರುಮೇಲಿ ಧರ್‌ ಈ ಸಾಧನೆ ಮಾಡಿದ್ದರು.

ಎಡಗೈ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಅವರು ಜೀವನಶ್ರೇಷ್ಠ 797 ಪಾಯಿಂಟ್‌ ಸಂಪಾದಿಸಿದ್ದಾರೆ. ಇಂಗ್ಲೆಂಡ್‌ನ ನತಾಲಿ ಶೀವರ್‌ 10 ಸ್ಥಾನಗಳ ಏರಿಕೆಯೊಂದಿಗೆ ಜೀವನಶ್ರೇಷ್ಠ ಐದನೇ ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT