ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇನ್ ವಿಲಿಯಮ್ಸನ್‌| ಸಂಯಮದಾಟದ ಸವ್ಯಸಾಚಿ

Last Updated 27 ಜೂನ್ 2019, 16:46 IST
ಅಕ್ಷರ ಗಾತ್ರ

‘ಅವನು ಸವ್ಯಸಾಚಿ. ಆಡಲು ನಿಂತನೆಂದರೆ ತಂಡವನ್ನು ಗೆಲ್ಲಿಸಿಕೊಂಡೇ ಬರಬೇಕು ಎಂಬ ಉಮೇದಿನಿಂದ ಕಣದಲ್ಲಿ ಕಾಣುತ್ತಾನೆ’ ಎಂದು ಮಾರ್ಟಿನ್‌ ಕ್ರೋವ್ ಹೊಗಳಿದ್ದರು. ಅಂಥದೊಂದು ಸರ್ಟಿಫಿಕೇಟ್‌ಗೆ ಪಕ್ಕಾದ ಕೇನ್ ವಿಲಿಯಮ್ಸನ್‌ ಈ ಸಲದ ವಿಶ್ವಕಪ್‌ನಲ್ಲಿ ತಮ್ಮ ತಂಡವನ್ನು ಗಮನಾರ್ಹ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಸ್ಕೋರ್ ಕಡಿಮೆ ಇರಲಿ, ಹೆಚ್ಚೇ ಇರಲಿ ಅವರ ಹೋರಾಟದ ತಂತ್ರ ಮಾತ್ರ ಮುಕ್ಕಾಗಿಲ್ಲ. ಈ ಸಲ ಈವರೆಗಿನ ವಿಶ್ವಕಪ್‌ ಪಂದ್ಯಗಳಲ್ಲಿ ಅತಿ ಹೆಚ್ಚು ಸರಾಸರಿಯಲ್ಲಿ (138) ರನ್‌ ಕಲೆಹಾಕಿರುವ ಬ್ಯಾಟ್ಸ್‌ಮನ್‌ ವಿಲಿಯಮ್ಸನ್‌.

ನ್ಯೂಜಿಲೆಂಡ್‌ನ ಟೌರಂಗ ಎಂಬ ಕೊಲ್ಲಿ ಪ್ರದೇಶದಲ್ಲಿ ಹುಟ್ಟಿದ ವಿಲಿಯಮ್ಸನ್‌ ರಕ್ತದಲ್ಲೇ ಆಟವಿದೆ. ಅಮ್ಮ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ಹೆಸರು ಮಾಡಿದ್ದರೆ, ಅಕ್ಕಂದಿರು ವಾಲಿಬಾಲ್‌ನಲ್ಲಿ ಛಾಪು ಮೂಡಿಸಿದ್ದರು. ಅಪ್ಪ ಬ್ರೆಟ್ ವಿಲಿಯಮ್ಸನ್‌ಗೆ ಖುಷಿಯೋ ಖುಷಿ. ಯಾಕೆಂದರೆ, ಮನೆಯಲ್ಲಿನ ಎಲ್ಲರೂ ಕ್ರಿಕೆಟ್‌ ಬೇಡ ಎನ್ನುತ್ತಿದ್ದರೆ, ಕೇನ್ ವಿಲಿಯಮ್ಸನ್‌ ಮಾತ್ರ ಅದೇ ಆಟದ ಕುರಿತು ಪ್ರೀತಿ ಬೆಳೆಸಿಕೊಂಡಿದ್ದರು. ಬ್ರೆಟ್‌ ಕೂಡ 17 ವರ್ಷದೊಳಗಿನವರ ತಂಡದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರಿಂದ ಮಗನ ಆಟವನ್ನು ಪೋಷಿಸಿದರು.


ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಬ್ಯಾಟಿಂಗ್ ಶೈಲಿ ಅನುಕರಿಸಲು ಹೋಗುತ್ತಿದ್ದ ಕೇನ್ ವಿಲಿಯಮ್ಸನ್ ಕ್ರಿಕೆಟ್‌ ಅಭ್ಯಾಸಕ್ಕೆಂದೇ ಅವರ ತಂದೆ ಅದೆಷ್ಟು ಹಣ ವ್ಯಯಿಸಿದರೋ?
ಮನೆಗೆ ಹೊಂದಿಕೊಂಡಂತೆ ಚೆಂದದ ಉದ್ಯಾನವಿತ್ತು. ಆದರೆ, ಮೈದಾನ ಇರಲಿಲ್ಲ. ನಾಲ್ಕೈದು ವರ್ಷದವರೆಗೆ ಅಲ್ಲಿಯೇ ಕ್ರಿಕೆಟ್ ಆಡಿ ಸಮಾಧಾನ ಪಡುತ್ತಿದ್ದ ಬಾಲಕ ಕೇನ್ ಆಮೇಲೆ ಮೈದಾನ ಇರುವ ಕಡೆ ಕರೆದುಕೊಂಡು ಹೋಗುವಂತೆ ದುಂಬಾಲು ಬೀಳುತ್ತಿದ್ದುದನ್ನು ನೋಡಿ ಅಪ್ಪ ಅಪ್ಪ ಒಂದಿಷ್ಟು ಹುಡುಗರನ್ನು ಕಲೆಹಾಕಿ ತಂಡ ಕಟ್ಟಿದರು. ಎಲ್ಲರೂ ಹಣ ಹಾಕಿ, ನೆಟ್ಸ್ ತಂದರು. ತಾತನ ಗಾಲ್ಫ್ ಬಾಲಿಗೆ ತೂತು ಕೊರೆದು, ಅದಕ್ಕೆ ದಾರ ಹಾಕಿ ಕೇನ್ ವಿಲಿಯಮ್ಸನ್ ಮನೆಯ ಗ್ಯಾರೇಜ್ ನಲ್ಲಿ ಇಳಿಬಿಟ್ಟ. ಗಾಲ್ಫ್ ಶಾಫ್ಟ್ ಅನ್ನೇ ಕತ್ತರಿಸಿ, ಕ್ರಿಕೆಟ್ ಬ್ಯಾಟ್ ಮಾಡಿಕೊಂಡ. ಮೈದಾನದಲ್ಲಿ ಆಡಿ ದಣಿದು ಬಂದಮೇಲೆ ಆ ಚೆಂಡಿಗೆ ಹೊಡೆಯುತ್ತಾ ಅಭ್ಯಾಸ ಮಾಡುತ್ತಿದ್ದುದನ್ನು ಅನೇಕರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಆಮೇಲೆ ಡೇವಿಡ್ ಜಾನ್ಸನ್ ಕೋಚ್ ಆಗಿ ಸಿಕ್ಕರು. ಕಾಲೇಜು ಟೂರ್ನಿಗಳಲ್ಲಿ ಒಂದು ಶತಕ ಹೊಡೆದರೆ ಕ್ರೀಡಾ ಮಳಿಗೆಯಲ್ಲಿ ಪರಿಕರಗಳನ್ನು ಖರೀದಿ ಮಾಡಬಹುದಾದ ಗಿಫ್ಟ್ ವೋಚರ್‌ಗಳು ಸಿಗುತ್ತಿದ್ದವು. ಅಂಥ ಒಂದು ಟೂರ್ನಿಯ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಶತಕ ಗಳಿಸಿದ ಕೇನ್‌ಗೆ ತನ್ನ ಹಾದಿ ಇನ್ನೂ ದೊಡ್ಡದಿರಬೇಕು ಎನಿಸತೊಡಗಿತು.

ವಿಲಿಯಮ್ಸನ್ ಸಂಯಮದ ಬ್ಯಾಟಿಂಗ್ ಶೈಲಿಯಿಂದಲೇ ಗುರುತಾದವರು. 20ನೇ ವಯಸ್ಸಿಗೆ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲೇ ಶತಕ ಗಳಿಸಿದ ಸಾಧನೆ ಮಾಡಿದ್ದು ಸ್ಮರಣೀಯ. ಟೆಸ್ಟ್ ಮಾದರಿಯಲ್ಲಿ 3000 ರನ್ ಗಡಿ ದಾಟಿದಾಗ ಅವರಿಗೆ 24 ವರ್ಷ 151 ದಿನ. ಅಷ್ಟು ಚಿಕ್ಕ ಪ್ರಾಯದಲ್ಲಿ ಆ ಮೈಲಿಗಲ್ಲನ್ನು ನ್ಯೂಜಿಲೆಂಡ್‌ನ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ದಾಟಿರಲಿಲ್ಲ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅವರು ಕಾಲಿಟ್ಟು ಒಂಬತ್ತು ವರ್ಷಗಳಾದವು. 2015ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಎದುರು ಸಿಕ್ಸರ್ ಹೊಡೆದು ಗೆಲುವು ತಂದುಕೊಟ್ಟಿದ್ದನ್ನೂ ಅಭಿಮಾನಿಗಳು ಮರೆತಿಲ್ಲ.

ಸಂಭ್ರಮ ವ್ಯಕ್ತಪಡಿಸುವಾಗಲೂ ತಣ್ಣಗೇ ಇರುವ ಅವರು ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. 2014ರ ಜೂನ್‌ನಲ್ಲಿ ನಿಯಮಬಾಹಿರ ಬೌಲಿಂಗ್ ಶೈಲಿಯ ಕಾರಣಕ್ಕೆ ಅವರ ಮೇಲೆ ನಿಷೇಧ ಹೇರಲಾಗಿತ್ತು. ಕ್ಷೇತ್ರರಕ್ಷಣೆಯಲ್ಲೂ ಅವರು ಚುರುಕು.

ಟೆಸ್ಟ್ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಕಲೆಹಾಕಿರುವ ಅವರು ಚುಟುಕು ಕ್ರಿಕೆಟ್‌ನ ಪರಿಸ್ಥಿತಿಗೂ ಚೆನ್ನಾಗಿಯೇ ಹೊಂದಿಕೊಂಡವರು.ಬಿಡುವಿದ್ದಾಗ ಜಾಕ್ ಕಾಲಿಸ್ ಆಟದ ವಿಡಿಯೊಗಳನ್ನು ನೋಡುವ ಅಭ್ಯಾಸ ಇಟ್ಟುಕೊಂಡಿದ್ದ ಅವರು ಅನೇಕ ಸಂದರ್ಶನಗಳಲ್ಲಿ ಅಪ್ಪ ಬೆಳೆಸಿದ ಆಟವನ್ನು ನೆನಪಿಸಿಕೊಳ್ಳುತ್ತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT