ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ವಿದರ್ಭ- ಕರ್ನಾಟಕ ಪಂದ್ಯ ಡ್ರಾ

ವಿದರ್ಭ ದಿಟ್ಟ ಹೋರಾಟ; ಮೈಸೂರು ಹುಡುಗ ಸುಚೇತ್‌ಗೆ ಒಟ್ಟು 9 ವಿಕೆಟ್
Last Updated 15 ನವೆಂಬರ್ 2018, 16:43 IST
ಅಕ್ಷರ ಗಾತ್ರ

ನಾಗಪುರ: ಜಮ್ತಾ ಕ್ರೀಡಾಂಗಣದಲ್ಲಿ ಗುರುವಾರ ‘ಹಾಲಿ ಚಾಂಪಿಯನ್‌’ ತಂಡಕ್ಕೆ ತಕ್ಕ ಆಟವಾಡಿದ ವಿದರ್ಭವುಎದುರಾಳಿ ಕರ್ನಾಟಕ ತಂಡದ ಗೆಲುವಿನ ಕನಸಿಗೆ ಅಡ್ಡಗಾಲು ಹಾಕಿತು.

ಆದಿತ್ಯ ಸರ್ವಟೆ ಮತ್ತು ಲಲಿತ್ ಯಾದವ್ ಅವರ ದಾಳಿಗೆ ಬಿಸಿಯನ್ನು ಅನುಭವಿಸಿದ ವಿನಯಕುಮಾರ್ ಬಳಗವು ‘ಡ್ರಾ’ ಮಾಡಿಕೊಂಡು ನಿಟ್ಟುಸಿರುಬಿಟ್ಟಿತು.

ಕರ್ನಾಟಕವು ಮೊದಲ ಇನಿಂಗ್ಸ್‌ನಲ್ಲಿ ಪಡೆದಿದ್ದ 71 ರನ್‌ಗಳ ಲೆಕ್ಕವನ್ನು ಬುಧವಾರ ಸಂಜೆಯೇ ಚುಕ್ತಾ ಮಾಡಿದ್ದ ವಿದರ್ಭ ತಂಡವು ಎಡಗೈ ಸ್ಪಿನ್ನರ್ ಜೆ.ಸುಚಿತ್ (70ಕ್ಕೆ5) ಸ್ಪಿನ್ ಮೋಡಿಯ ನಡುವೆಯೂ 228 ರನ್‌ಗಳನ್ನು ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿಯೂ ಅರ್ಧಶತಕ ಹೊಡೆದಿದ್ದ ಕನ್ನಡದ ಹುಡುಗ ಗಣೇಶ್ ಸತೀಶ್ (79; 164ಎಸೆತ, 10ಬೌಂಡರಿ) ಎರಡನೇ ಇನಿಂಗ್ಸ್‌ನಲ್ಲಿಯೂ ಕರ್ನಾಟಕ ಬಳಗವನ್ನು ಕಾಡಿದರು. ಅವರು ಅಕ್ಷಯ್ ವಾಂಖೆಡೆ ( 51; 75ಎಸೆತ, 7ಬೌಂಡರಿ) ಅವರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 64 ರನ್‌ಗಳನ್ನು ಗಳಿಸಿದರು.

ಚಹಾ ವಿರಾಮಕ್ಕೆ ಕರ್ನಾಟಕವು ಗೆಲುವಿಗೆ 157 ರನ್‌ಗಳ ಗುರಿ ಬೆನ್ನಟ್ಟಿತು. ಆದರೆ ವಿದರ್ಭ ಸ್ಪಿನ್ನರ್‌ಗಳನ್ನು ಎದುರಿಸಿ ನಿಲ್ಲುವಲ್ಲಿ ದಿಟ್ಟತನ ತೋರಲಿಲ್ಲ. ಗುರಿ ಸಣ್ಣದಿದ್ದರೂ, ಚೆಂಡು ತಿರುಗುತ್ತಿದ್ದ ಪಿಚ್‌ನಲ್ಲಿ ಸುಲಭದ್ದಾಗಿರಲಿಲ್ಲ.

ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಬಿ.ಆರ್. ಶರತ್ ಅವರನ್ನು ಸಮರ್ಥ್ ಜೊತೆಗೆ ಇನಿಂಗ್ಸ್‌ ಆರಂಭಿಸಲು ಕ್ರೀಸ್‌ಗೆ ಕಳಿಸಿದ ನಾಯಕ ವಿನಯ್ ಯೋಜನೆ ವಿಫಲವಾಯಿತು. ಎರಡನೇ ಓವರ್‌ನಲ್ಲಿಯೇ ಶರತ್ ಔಟಾದರು. ಲಲಿತ್ ಯಾದವ್ ವಿಕೆಟ್ ಗಳಿಸಿದರು.

ನಂತರ ಮಿಂಚಿದ ಆದಿತ್ಯ ಸರ್ವಟೆ ಕರುಣ್ ನಾಯರ್ ಅವರನ್ನು ಪೆವಿಲಿಯನ್‌ಗೆ ಕಳಿಸಿದರು. ಡಿ. ನಿಶ್ಚಲ್ ಅವರನ್ನು ಲಲಿತ್ ಔಟ್ ಮಾಡಿದರು. ಪದಾರ್ಪಣೆ ಪಂದ್ಯ ಆಡಿದ ಕೆ.ವಿ. ಸಿದ್ಧಾರ್ಥ್ (16 ರನ್), ಹೋರಾಟ ನಡೆಸಿದ್ದ ಆರ್. ಸಮರ್ಥ್ (30ರನ್), ಸ್ಟುವರ್ಟ್ ಬಿನ್ನಿ ಅವರ ವಿಕೆಟ್‌ಗಳನ್ನು ಸರ್ವಟೆ ಕಬಳಿಸಿದರು. ಇದರಿಂದಾಗಿ ಕರ್ನಾಟಕ ತಂಡವು ಸೋಲಿನ ಭೀತಿ ಎದುರಿಸಿತ್ತು.

ಆದರೆ ನೂರನೇ ರಣಜಿ ಪಂದ್ಯವಾಡಿದ ನಾಯಕ ವಿನಯ್ ಮತ್ತು ಆಲ್‌ರೌಂಡರ್‌ ಶ್ರೇಯಸ್‌ ಗೋ ಪಾಲ್ ವಿಕೆಟ್ ಪತನ ತಡೆದರು. ಇದರಿಂದಾಗಿ ಪಂದ್ಯ ಡ್ರಾ ದತ್ತ ಸಾಗಿತು. ಆದರೆ ‘ಶತಕ’ದ ಪಂದ್ಯಕ್ಕೆ ಗೆಲುವಿನ ಮೆರುಗು ನೀಡುವ ವಿನಯ್ ಆಸೆ ಈಡೇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT