ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ಸೆಮಿಫೈನಲ್‌ಗೆ

ವಿಜಯ್ ಹಜಾರೆ ಟ್ರೋಫಿ: ಸಮರ್ಥ್ ದಾಖಲೆಯ ಶತಕ; ದೇವದತ್ತ ದ್ವಿಶತಕದ ಜೊತೆಯಾಟ
Last Updated 8 ಮಾರ್ಚ್ 2021, 14:45 IST
ಅಕ್ಷರ ಗಾತ್ರ

ದೆಹಲಿ: ಕರ್ನಾಟಕದ ಆರಂಭಿಕ ಜೋಡಿ ಮತ್ತೊಮ್ಮೆ ಮಿಂಚಿನ ಬ್ಯಾಟಿಂಗ್ ಮಾಡಿ ಎದುರಾಳಿಗಳನ್ನು ಕಂಗೆಡಿಸಿತು. ಇಲ್ಲಿನ ಪಾಲಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರ್‌.ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್ ಅವರ ಅಮೋಘ ಆಟದಿಂದಾಗಿ ಕರ್ನಾಟಕ 80 ರನ್‌ಗಳಿಂದ ಕೇರಳವನ್ನು ಮಣಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ, ನಾಯಕ ಸಮರ್ಥ್‌ (192; 158 ಎಸೆತ, 22 ಬೌಂಡರಿ 3 ಸಿಕ್ಸರ್) ಮತ್ತು ಪಡಿಕ್ಕಲ್ (101; 119ಎ, 10 ಬೌಂ, 2 ಸಿ) ಅವರ ದ್ವಿಶತಕದ ಜೊತೆಯಾಟದ ನೆರವಿನಿಂದ ಮೂರು ವಿಕೆಟ್‌ಗೆ 338 ರನ್ ಗಳಿಸಿತು. ಗುರಿ ಬೆನ್ನತ್ತಿದ ಕೇರಳದ ಪರ ವತ್ಸಲ್ ಗೋವಿಂದ್ (92; 96 ಎ, 6 ಬೌಂ, 3 ಸಿ) ಮತ್ತು ಮೊಹಮ್ಮದ್ ಅಜರುದ್ದೀನ್ (52; 34 ಎ, 5 ಬೌಂ, 2 ಸಿ) ಹೋರಾಡಿದರು. ಆದರೆ ರೋನಿತ್ ಮೋರೆ, ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಅವರ ದಾಳಿಗೆ ನಲುಗಿ 44ನೇ ಓವರ್‌ನಲ್ಲಿ 258 ರನ್‌ಗಳಿಗೆ ಪತನ ಕಂಡಿತು.

ಟಾಸ್ ಗೆದ್ದರೂ ಎದುರಾಳಿಗಳನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿ ಕೇರಳ ಕೈಸುಟ್ಟುಕೊಂಡಿತು. ಸಮರ್ಥ್ ಮತ್ತು ಪಡಿಕ್ಕಲ್ ನಿರಾಯಾಸವಾಗಿ ಬ್ಯಾಟ್ ಬೀಸಿ ರನ್ ಗಳಿಸತೊಡಗಿದರು. ಎಸ್‌.ಶ್ರೀಶಾಂತ್‌ ಮತ್ತು ಬಾಸಿಲ್ ತಂಬಿ ಅವರಂಥ ಶ್ರೇಷ್ಠ ಬೌಲರ್‌ಗಳಿದ್ದರೂ ಸಮರ್ಥ್ ಮತ್ತು ಪಡಿಕ್ಕಲ್ ಅವರನ್ನು ನಿಯಂತ್ರಿಸಲು ಕೇರಳಕ್ಕೆ ಸಾಧ್ಯವಾಗಲಿಲ್ಲ. ಇವರಿಬ್ಬರ ಜೊತೆಯಾಟ 43ನೇ ಓವರ್‌ ವರೆಗೆ ಮುಂದುವರಿದಾಗ ಕರ್ನಾಟಕದ ಮೊತ್ತ 249 ಆಯಿತು. ದೇವದತ್ತ ಸತತ ನಾಲ್ಕನೇ ಶತಕ ಗಳಿಸಿದರು. ಲಿಸ್ಟ್ ‘ಎ’ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡರು. ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡುವಾಗ ತಮ್ಮ ಹೆಸರು ನೆನಪಿನಲ್ಲಿರಲಿ ಎಂಬ ಸಂದೇಶವನ್ನೂ ಅವರು ಆಯ್ಕೆ ಸಮಿತಿಗೆ ರವಾನಿಸಿದರು.

ಸಮರ್ಥ್ ದ್ವಿಶತಕದಿಂದ ವಂಚಿತರಾದರೂ ವಿಜಯ್ ಹಜಾರೆ ಟೂರ್ನಿಯ ನಾಕ್ ಔಟ್ ಹಂತದಲ್ಲಿ ಅತಿಹೆಚ್ಚು ವೈಯಕ್ತಿಕ ಮೊತ್ತ ಗಳಿಸಿದ ಆಟಗಾರ ಎಂಬ ಶ್ರೇಯ ತಮ್ಮದಾಗಿಸಿಕೊಂಡರು. 170 ರನ್ ಗಳಿಸಿದ ವಾಸಿಂ ಜಾಫರ್ ಅವರ ಹೆಸರಿನಲ್ಲಿ ಇಲ್ಲಿಯ ವರೆಗೆಈ ದಾಖಲೆ ಇತ್ತು.

112 ಎಸೆತಗಳಲ್ಲಿ ಶತಕ ಪೂರೈಸಿದ ಅವರು ನಂತರವೂ ಅಮೋಘ ಬ್ಯಾಟಿಂಗ್ ಮುಂದುವರಿಸಿದರು. ಪಡಿಕ್ಕಲ್ ಔಟಾದ ನಂತರ ಮನೀಷ್ ಪಾಂಡೆ ಜೊತೆ 68 ರನ್‌ ಸೇರಿಸಿದ ಸಮರ್ಥ್ 49ನೇ ಓವರ್‌ನಲ್ಲಿ ವಾಪಸಾದರು. ಅಷ್ಟರಲ್ಲಿ ತಂಡದ ಮೊತ್ತ 315 ರನ್ ದಾಟಿತ್ತು. ಇನಿಂಗ್ಸ್‌ನಲ್ಲಿ ಉರುಳಿದ ಮೂರೂ ವಿಕೆಟ್‌ಗಳು ಮಧ್ಯಮ ವೇಗಿ ನಡುಮಂಗುಳಿ ಬಾಸಿಲ್ ಅವರ ಪಾಲಾದವು.

ಮತ್ತೆ ವೈಫಲ್ಯ ಕಂಡ ಉತ್ತಪ್ಪ

ಕರ್ನಾಟಕದ ಎದುರಿನ ಲೀಗ್ ಪಂದ್ಯದಲ್ಲಿ ವಿಫಲರಾಗಿದ್ದ ರಾಬಿನ್ ಉತ್ತಪ್ಪ ಈ ಪಂದ್ಯದಲ್ಲೂ ಬೇಗನೇ ಔಟಾದರು. ತಂಡದ ಮೊತ್ತ 13 ಆಗಿದ್ದಾಗ ರೋನಿತ್ ಮೋರೆ ಅವರ ಎಲ್‌ಬಿಡಬ್ಲ್ಬು ಬಲೆಯಲ್ಲಿ ಬಿದ್ದು ಉತ್ತಪ್ಪ ವಾಪಸಾದರು. ಈ ಆಘಾತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ರೋಹನ್ ಕುನ್ನುಮ್ಮಲ್ ಮತ್ತು ವಿಷ್ಣು ವಿನೋದ್ ಅವರ ವಿಕೆಟ್ ಕೂಡ ಉರುಳಿತು. ಈ ಸಂದರ್ಭದಲ್ಲಿ ವತ್ಸಲ್ ಗೋವಿಂದ್ ಮತ್ತು ನಾಯಕ ಸಚಿನ್ ಬೇಬಿ ಜೊತೆಗೂಡಿ ಮೊತ್ತವನ್ನು 100ರ ಗಡಿ ದಾಟಿಸಿದರು. ಸಚಿನ್ ಔಟಾದ ನಂತರ ಮೊಹಮ್ಮದ್ ಅಜರುದ್ದೀನ್ ಕೂಡ ಭರವಸೆ ಮೂಡಿಸಿದರು. ಆದರೂ ಸೋಲಿನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ.

ಪಾಂಚಾಲ್ ಶತಕ; ಗುಜರಾತ್‌ ಜಯಭೇರಿ

ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ 117 ರನ್‌ಗಳಿಂದ ಆಂಧ್ರವನ್ನು ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ನಾಯಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಪ್ರಿಯಾಂಕ್ ಪಾಂಚಾಲ್ (134; 131 ಎಸೆತ, 10 ಬೌಂಡರಿ, 2 ಸಿಕ್ಸರ್) ಅವರ ಅಮೋಘ ಆಟದ ನೆರವಿನಿಂದ 7ಕ್ಕೆ 299 ರನ್ ಗಳಿಸಿತು. ಉತ್ತರವಾಗಿ ಆಂಧ್ರ 42ನೇ ಓವರ್‌ನಲ್ಲಿ 182 ರನ್‌ಗಳಿಗೆ ಆಲೌಟಾಯಿತು. ಮಧ್ಯಮ ಕ್ರಮಾಂಕದ ರಿಕಿ ಭುಯಿ (67; 76 ಎ, 3 ಬೌಂ, 4 ಸಿ) ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು.

ಸಂಕ್ಷಿಪ್ತ ಸ್ಕೋರು: ಗುಜರಾತ್: 50 ಓವರ್‌ಗಳಲ್ಲಿ 7ಕ್ಕೆ 299: (ಪ್ರಿಯಾಂಕ್ ಪಾಂಚಾಲ್ 134, ರಾಹುಲ್ ಶಾ 36; ಹರಿಶಂಕರ್ ರೆಡ್ಡಿ 60ಕ್ಕೆ3, ಲಲಿತ್ ಮೋಹನ್ 55ಕ್ಕೆ2); ಆಂಧ್ರ: 41.2 ಓವರ್‌ಗಳಲ್ಲಿ 182 (ರಿಕಿ ಭುಯಿ 67; ಅರ್ಜಾನ್ ನಾಗ್ವಸ್ವಾಲ 28ಕ್ಕೆ4, ಪೀಯೂಷ್ ಚಾವ್ಲಾ 33ಕ್ಕೆ3). ಫಲಿತಾಂಶ: ಗುಜರಾತ್‌ಗೆ 117 ರನ್‌ಗಳ ಜಯ; ಸೆಮಿಫೈನಲ್‌ಗೆ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT