ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಕಿರಿಯರ ವಿಶ್ವಕಪ್‌ ತಂಡದಲ್ಲಿ ಇಬ್ಬರು ಕನ್ನಡಿಗರು

Last Updated 2 ಡಿಸೆಂಬರ್ 2019, 19:14 IST
ಅಕ್ಷರ ಗಾತ್ರ

ಮುಂಬೈ: ಆಲ್‌ರೌಂಡರ್‌ ಶುಭಾಂಗ್‌ ಹೆಗ್ಡೆ ಮತ್ತು ಮಧ್ಯಮ ವೇಗಿ ವಿದ್ಯಾಧರ ಪಾಟೀಲ ಅವರು ಮುಂದಿನ ತಿಂಗಳ ಮಧ್ಯದಲ್ಲಿ ಆರಂಭವಾಗುವ 19 ವರ್ಷದೊಳಗಿನವರ ಐಸಿಸಿ ವಿಶ್ವಕಪ್‌ನಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉತ್ತರ ಪ್ರದೇಶದ ಬ್ಯಾಟ್ಸ್‌ಮನ್‌ ಪ್ರಿಯಂ ಗರ್ಗ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಈ ವಿಶ್ವಕಪ್‌ ದಕ್ಷಿಣ ಆಫ್ರಿಕದಲ್ಲಿ ಜನವರಿ 17 ರಿಂದ ಫೆಬ್ರುವರಿ 9ರವರೆಗೆ ನಡೆಯಲಿದೆ. ಭಾನುವಾರ ಜೂನಿಯರ್‌ ತಂಡದ ಆಯ್ಕೆಗಾರರು 15 ಆಟಗಾರರ ತಂಡವನ್ನು ಪ್ರಕಟಿಸಿದ್ದು, ಇಬ್ಬರು ಕನ್ನಡಿಗರು ಅವಕಾಶ ಪಡೆದಿದ್ದಾರೆ.

ದೇವಧರ್‌ ಟ್ರೋಫಿ ಟೂರ್ನಿಯಲ್ಲಿ ಗರ್ಗ್‌ ಭಾರತ ‘ಸಿ’ ತಂಡವನ್ನು ಮುನ್ನಡೆಸಿದ್ದರು. ಈ ತಂಡ ರನ್ನರ್ ಅಪ್ ಸ್ಥಾನ ಗಳಿಸಿತ್ತು. ಭಾರತ ‘ಬಿ’ ವಿರುದ್ಧ ಫೈನಲ್‌ನಲ್ಲಿ 74 ರನ್ ಹೊಡೆದಿದ್ದರು.

ವಿಶ್ವಕಪ್‌ನಲ್ಲಿ 16 ತಂಡಗಳಿದ್ದು, ನಾಲ್ಕು ಗುಂಪುಗಳನ್ನಾಗಿ ವಿಂಗಡಿಸ ಲಾಗಿದೆ. ಭಾರತವು, ಜಪಾನ್‌, ನ್ಯೂಜಿ ಲೆಂಡ್‌ ಮತ್ತು ಶ್ರೀಲಂಕಾ ಜೊತೆ ‘ಎ’ ಗುಂಪಿನಲ್ಲಿದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್‌ಲೀಗ್‌ನಲ್ಲಿ ಆಡಲಿವೆ.

ಭಾರತ ನಾಲ್ಕು ಬಾರಿ ಜೂನಿಯರ್‌ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಕಳೆದ ವರ್ಷ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು.

ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಭಾರತ ದಕ್ಷಿಣ ಆಫ್ರಿಕ ಪ್ರವಾಸ ಕೈಗೊಳ್ಳಲಿದ್ದು, ದಕ್ಷಿಣ ಆಫ್ರಿಕ ಕಿರಿಯರ ತಂಡದ ವಿರುದ್ಧ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಇದರ ನಂತರ ನಾಲ್ಕು ರಾಷ್ಟ್ರಗಳ ಸರಣಿಯಲ್ಲೂ ಆಡಲಿದೆ. ದಕ್ಷಿಣ ಆಫ್ರಿಕ, ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್‌ 19 ವರ್ಷದೊಳಗಿನವರ ತಂಡಗಳೂ ಈ ಸರಣಿಯಲ್ಲಿ ಆಡಲಿವೆ.

ಹೈದರಾಬಾದ್‌ನ ಸಿ.ಟಿ.ಎಲ್‌. ರಕ್ಷಣ್‌ ಅವರು ದಕ್ಷಿಣ ಆಫ್ರಿಕ ವಿರುದ್ಧ ಸರಣಿಯಲ್ಲಿ ಆಡಲಿದ್ದಾರೆ. ಅವರಿಗೆ ವಿಶ್ವಕಪ್‌ ತಂಡದಲ್ಲಿ ಸ್ಥಾನ ಕಲ್ಪಿಸಿಲ್ಲ.

19 ವರ್ಷದೊಳಗಿನವರ ವಿಶ್ವಕಪ್‌ಗೆ ತಂಡ: ಪ್ರಿಯಂ ಗರ್ಗ್‌ (ನಾಯಕ), ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮಾ, ದಿವ್ಯಾಂಶ್‌ ಸಕ್ಸೇನಾ, ಧ್ರುವ್‌ ಚಂದ್ರ ಜುರೆಲ್‌ (ಉಪನಾಯಕ–ವಿಕೆಟ್‌ ಕೀಪರ್‌), ಶಾಶ್ವತ್‌ ರಾವತ್‌, ದಿವ್ಯಾಂಶ್‌ ಜೋಶಿ, ಶುಭಾಂಗ್ ಹೆಗ್ಡೆ, ರವಿ ಬಿಷ್ಣೋಯಿ, ಆಕಾಶ್‌ ಸಿಂಗ್‌, ಕಾರ್ತಿಕ್‌ ತ್ಯಾಗಿ, ಆಥರ್ವ ಅಂಕೋಲೇಕರ್‌, ಕುಮಾರ್‌ ಕುಶಾಗ್ರ (ವಿಕೆಟ್‌ ಕೀಪರ್‌), ಸುಶಾಂತ್‌ ಮಿಶ್ರಾ ಮತ್ತು ವಿದ್ಯಾಧರ ಪಾಟೀಲ.

***

ಭಾರತ ತಂಡಕ್ಕೆ ಆಡಬೇಕು ಎಂಬುದು ನನ್ನ ಕನಸಾಗಿತ್ತು. ಈಗ ಅದು ಈಡೇರಿದ್ದು, ಖುಷಿ ಯಾಗಿದೆ. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕಠಿಣ ಅಭ್ಯಾಸ ಮಾಡುತ್ತೇನೆ.

- ವಿದ್ಯಾಧರ ಪಾಟೀಲ, ಕ್ರಿಕೆಟಿಗ, ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT