ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಕರುಣ್ ನಾಯರ್ ಶತಕ ಸೊಬಗು

ಜಮ್ಮು–ಕಾಶ್ಮೀರ ಎದುರಿನ ಪಂದ್ಯದಲ್ಲಿ ಕರ್ನಾಟಕದ ಗೌರವ ರಕ್ಷಿಸಿದ ಅನುಭವಿ ಬ್ಯಾಟರ್
Last Updated 24 ಫೆಬ್ರುವರಿ 2022, 21:01 IST
ಅಕ್ಷರ ಗಾತ್ರ

ಚೆನ್ನೈ: ಸರಿಯಾದ ಸಮಯಕ್ಕೆ ಲಯಕ್ಕೆ ಮರಳಿದ ಕರುಣ್ ನಾಯರ್ ಗುರುವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಶತಕ ದಾಖಲಿಸಿದರು. ಜೊತೆಗೆ ಕರ್ನಾಟಕ ತಂಡವು ಜಮ್ಮು–ಕಾಶ್ಮೀರದೆದುರು ಅಲ್ಪಮೊತ್ತಕ್ಕೆ ಕುಸಿಯುವ ಆತಂಕವನ್ನೂ ನಿವಾರಿಸಿದರು.

ಐಐಟಿ ಕೆಮ್‌ಪ್ಲಾಸ್ಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಎರಡನೇ ಓವರ್‌ನಲ್ಲಿಯೇ ದೇವದತ್ತ ಪಡಿಕ್ಕಲ್ ಔಟಾದರು. ಇದರಿಂದಾಗಿ ಆತಂಕ ತಲೆದೋರಿತು. ಮಯಂಕ್ ಅಗರವಾಲ್ ಅನುಪಸ್ಥಿತಿಯಲ್ಲಿ ಸ್ಥಾನ ಪಡೆದ ಕರುಣ್ ನಾಯರ್ (ಔಟಾಗದೆ 152; 267ಎ) ಆಟದ ಬಲದಿಂದ ತಂಡವು 90 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 268 ರನ್ ಗಳಿಸಿತು.

ಆರಂಭಿಕ ಬ್ಯಾಟರ್ ಸಮರ್ಥ್ ಮತ್ತು ಕರುಣ್ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 98 ರನ್‌ ಸೇರಿಸಿದರು. ಇದರಿಂದಾಗಿ ಮೊದಲ ಅವಧಿಯಲ್ಲಿ ಹೆಚ್ಚು ವಿಕೆಟ್‌ಗಳು ಪತನವಾಗಲಿಲ್ಲ.ಈ ಜೊತೆಯಾಟವನ್ನು 30ನೇ ಓವರ್‌ನಲ್ಲಿ ಕಾಶ್ಮೀರ ತಂಡದ ಅಬ್ದುಲ್ ಸಮದ್ ಮುರಿದರು. ಸಮರ್ಥ್‌ ವಿಕೆಟ್ ಕಬಳಿಸಿದ ಅವರು ಸಂಭ್ರಮಿಸಿದರು. ಕೇವಲ ಐದು ರನ್‌ಗಳ ಅಂತರದಿಂದ ಸಮರ್ಥ್ ಅರ್ಧಶತಕ ತಪ್ಪಿಸಿಕೊಂಡರು.

ಕ್ರೀಸ್‌ಗೆ ಬಂದ ಕೆ.ವಿ. ಸಿದ್ಧಾರ್ಥ್ (16 ರನ್) ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಕರುಣ್ ಜೊತೆಗೆ ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ 56 ರನ್ ಸೇರಿಸಿದರು.

ಆದರೆ ಐವತ್ತನೇ ಓವರ್‌ನಲ್ಲಿ ಉಮ್ರಾನ್ ಮಲೀಕ್ ಈ ಜೊತೆಯಾಟವನ್ನು ಮುರಿದರು. ಸಿದ್ಧಾರ್ಥ್ ಔಟಾಗಿ ನಿರ್ಗಮಿಸಿದರು. ಈ ಹಂತದಲ್ಲಿ ಕರ್ನಾಟಕ ತಂಡದ ಮಧ್ಯಮ ಕ್ರಮಾಂಕ ತಡಬಡಾಯಿಸಿತು.

ನಾಯಕ ಮನೀಷ್‌ ಪಾಂಡೆ ಕೂಡ ಉಮ್ರಾನ್ ಎಸೆತದಲ್ಲಿ ನಿರ್ಗಮಿಸಿದರು. ಬಿ.ಆರ್. ಶರತ್ ತಮಗೆ ಲಭಿಸಿದ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಅನುಭವಿ ಬವಲರ್ ಪರ್ವೇಜ್ ರಸೂಲ್ ಬೌಲಿಂಗ್‌ನಲ್ಲಿ ಆಲ್‌ರೌಂಡರ್‌ಗಳಾದ ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಔಟಾದರು.

ಕರುಣ್ ಏಕಾಂಗಿ ಹೋರಾಟ:ಆದರೆ, ಇದೆಲ್ಲದರ ನಡುವೆ ಇನ್ನೊಂದು ಬದಿಯಲ್ಲಿ ಕರುಣ್ ನಾಯರ್ ಗಟ್ಟಿಯಾಗಿ ನಿಂತರು. ಹೋದ ಬಾರಿಯ ಋತುವಿನಲ್ಲಿ ಫಾರ್ಮ್ ಕೊರತೆ ಎದುರಿಸಿದ್ದ ಕರುಣ್ ಇಲ್ಲಿ ಚೆಂದದ ಬ್ಯಾಟಿಂಗ್ ಮಾಡಿದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 15ನೇ ಶತಕ ದಾಖಲಿಸಿದರು. ಅವರು ಎದುರಿಸಿದ ಒಟ್ಟು 267 ಎಸೆತಗಳಲ್ಲಿ 194 ಡಾಟ್ ಬಾಲ್‌ಗಳಿದ್ದವು. ಇದು ಅವರ ತಾಳ್ಮೆ ಮತ್ತು ಅವಕಾಶ ಸಿಕ್ಕಾಗ ಚುರುಕಾಗಿ ರನ್ ಗಳಿಸಿದ ಆಟಕ್ಕೆ ಸಾಕ್ಷಿ.

ಫೀಲ್ಡರ್‌ಗಳ ಭದ್ರಕೋಟೆಯನ್ನು ಭೇದಿರಿ ಚೆಂಡನ್ನು 21 ಬಾರಿ ಬೌಂಡರಿಗೆರೆ ದಾಟಿಸುವಲ್ಲಿ ಯಶಸ್ವಿಯಾದರು. ಶತಕೋತ್ತರ ಅರ್ಧಶತಕ ಗಳಸಿದ ಕರುಣ್ ದಿನದಾಟದ ಕೊನೆಗೆ ಕ್ರೀಸ್‌ನಲ್ಲಿದ್ಧಾರೆ.

ಸ್ಕೋರ್ ಕಾರ್ಡ್

ಕರ್ನಾಟಕ

8ಕ್ಕೆ 268 (90 ಓವರ್‌ಗಳಲ್ಲಿ)

ಸಮರ್ಥ್‌ ಸಿ ಚೌಹಾಣ್ ಬಿ ಸಮದ್ 45 (74ಎ, 4X5), ದೇವದತ್ತ ಸಿ ಸಮದ್ ಬಿ ಯೂಸುಫ್ 8 (8ಎ, 4X2), ಕರುಣ್ ನಾಯರ್ ಔಟಾಗದೆ 152 (267ಎ, 4X21, 6X1), ಸಿದ್ಧಾರ್ಥ್ ಸಿ ಚೌಹಾನ್ ಬಿ ಮಲಿಕ್ 16 (62ಎ, 4X2), ಪಾಂಡೆ ಸಿ ಪಂಡೀರ ಬಿ ಮಲಿಕ್ 1 (9ಎ), ಶರತ್ ಎಲ್‌ಬಿಡಬ್ಲ್ಯು ನಬಿ 11 (33ಎ, 4X1), ಶ್ರೇಯಸ್ ಸಿ ರಶೀದ್ ಬಿ ರಸೂಲ್ 7 (18ಎ, 4X1), ಗೌತಮ್ ಸಿ ಸಮದ್ ಬಿ ರಸೂಲ್ 2 (10ಎ), ರೋನಿತ್ ಎಲ್‌ಬಿಡಬ್ಲ್ಯು ಯೂಸುಫ್ 23 (59ಎ, 4X2)

ಇತರೆ: 3 (ಲೆಗ್‌ಬೈ 1, ವೈಡ್ 2)

ವಿಕೆಟ್ ಪತನ: 1–10 (ದೇವದತ್ತ ಪಡಿಕ್ಕಲ್; 1.6), 2–108 (ಸಮರ್ಥ್; 29.4), 3–164 (ಸಿದ್ಧಾರ್ಥ್; 49.4), 4–166 (ಮನೀಷ್ ಪಾಂಡೆ; 51.2), 5–190 (ಬಿ.ಆರ್. ಶರತ್; 61.4), 6–205 (ಶ್ರೇಯಸ್ ಗೋಪಾಲ್; 66.2), 7–209 (ಕೃಷ್ಣಪ್ಪ ಗೌತಮ್; 68.5), 8–268 (ರೋನಿತ್ ಮೋರೆ; 89.6)

ಬೌಲಿಂಗ್

ಅಕೀಬ್ ನಬಿ 18–4–52–1, ಮುಜ್ತಾಬಾ ಯೂಸುಫ್ 15–2–44–2, ಉಮ್ರಾನ್ ಮಲಿಕ್ 12–1–35–2, ಅಬಿದ್ ಮುಷ್ತಾಕ್ 14–5–53–0, ಪರ್ವೇಜ್ ರಸೂಲ್ 25–9–51–2, ಅಬ್ದುಲ್ ಸಮದ್ 6–0–32–1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT