ದೀರ್ಘ ಮಾದರಿಯಲ್ಲಿ ಹೆಜ್ಜೆಯೂರುವತ್ತ ಕಾರ್ಯಪ್ಪ ಚಿತ್ತ

7
ಕ್ರಿಕೆಟ್

ದೀರ್ಘ ಮಾದರಿಯಲ್ಲಿ ಹೆಜ್ಜೆಯೂರುವತ್ತ ಕಾರ್ಯಪ್ಪ ಚಿತ್ತ

Published:
Updated:
Deccan Herald

‘ಈ ಮ್ಯಾಚ್‌ನಲ್ಲಿ ಕಾರ್ಯಪ್ಪ 14 ವಿಕೆಟ್‌ ತೊಗೊಂಡ್ರಾ? ಬರೀ ಟ್ವೆಂಟಿ–20 ಸ್ಟಾರ್ ಅನ್ಕೊಂಡಿದ್ವಿ...’

ಹೋದ ವಾರ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕ್ಯಾಪ್ಟನ್‌ ತಿಮ್ಮಪ್ಪಯ್ಯ ಅಖಿಲ ಭಾರತ ಕ್ರಿಕೆಟ್ ಟೂರ್ನಿಯ ಪಂದ್ಯವನ್ನು ನೋಡಿ ಮರಳುತ್ತಿದ್ದ ಪ್ರೇಕ್ಷಕರ ಗುಂಪಿನಿಂದ ಕೇಳಿಬಂದ ಮಾತುಗಳಿವು.

ಕೋಂಗಂಡ ಚಾರಮಣ್ಣ ಕಾರಿಯಪ್ಪ ಅವರ ಹೆಸರು ಕ್ರಿಕೆಟ್‌ಪ್ರೇಮಿಗಳಿಗೆ ಪರಿಚಿತವಾಗಿದ್ದೇ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಕರ್ನಾಟಕ ಪ್ರೀಮಿಯರ್‌ ಲೀಗ್‌ ಟೂರ್ನಿಗಳಿಂದಾಗಿ. ಕೊಡಗಿನ ಹುಡುಗನನ್ನು  2015ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವು ₹ 2.4 ಕೋಟಿಗೆ  ಖರೀದಿಸಿತ್ತು. ಆಗ ಕ್ರಿಕೆಟ್‌ಪ್ರೇಮಿಗಳ ಅಚ್ಚರಿ ತುಂಬಿದ ಕಣ್ಣುಗಳು ಈ ಚಿಗುರುಮೀಸೆಯ ಹುಡುಗನತ್ತ ಹೊರಳಿದವು. ಸುಮಾರು ಐದು ವರ್ಷಗಳಿಂದ ಬಿಜಾಪುರ ಬುಲ್ಸ್‌ ತಂಡದಲ್ಲಿ ಆಡುತ್ತಿರುವ ಕಾರ್ಯಪ್ಪ ಈಗ ‘ದೀರ್ಘ ಮಾದರಿ’ಯ ಕ್ರಿಕೆಟ್‌ನತ್ತ ಒಲವು ಬೆಳೆಸಿಕೊಂಡಿದ್ದಾರೆ.  ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾಗುವ ಮೊದಲ ಗುರಿಯೊಂದಿಗೆ ಬೆವರು ಹರಿಸುತ್ತಿದ್ದಾರೆ. ತಿಮ್ಮಪ್ಪಯ್ಯ ಕ್ರಿಕೆಟ್ ಟೂರ್ನಿಯಲ್ಲಿ ಅಧ್ಯಕ್ಷರ ಇಲೆವನ್ ತಂಡದಲ್ಲಿ ಆಡಿದ್ದ ಅವರು ಬಂಗಾಳ ತಂಡದ ಎದುರು ಒಂದೇ ಪಂದ್ಯದಲ್ಲಿ 14 ವಿಕೆಟ್‌ಗಳನ್ನು ಗಳಿಸಿದ್ದರು. ಆ ಯ್ಕೆಗಾರರ ಗಮನ ಸೆಳೆದಿದ್ದಾರೆ. ತಮ್ಮ ಕ್ರಿಕೆಟ್‌ ಒಲವು–ನಿಲುವುಗಳ ಕುರಿತು ’ಪ್ರಜಾವಾಣಿ’ ಗೆ ನೀಡಿದ ಸಂದರ್ಶನ ಇಲ್ಲಿದೆ.

* ನೀವು ‘ಚುಟುಕು ಕ್ರಿಕೆಟ್‌’ ಆಟಗಾರ ಎಂಬ ಭಾವನೆ ಕ್ರಿಕೆಟ್‌ಪ್ರಿಯರಲ್ಲಿ ಬೇರೂರಿದೆ. ಅದು ನಿಜವೇ? 
ಅದು ಸುಳ್ಳಲ್ಲ. ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಮೂಲಕವೇ ಜನರಿಗೆ ನಾನು ಪರಿಚಿತ. ಆದರೆ ನಾನು ಅಷ್ಟಕ್ಕೇ ಸೀಮಿತವಾಗುವುದಿಲ್ಲ. ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದು ನನ್ನ ಗುರಿ. ರಣಜಿ ಟೂರ್ನಿ, ಟೆಸ್ಟ್‌ ಪಂದ್ಯಗಳಲ್ಲಿ ಆಡಬೇಕು. ಕರ್ನಾಟಕದ ಭವ್ಯವಾದ ಕ್ರಿಕೆಟ್‌ ಪರಂಪರೆಯಲ್ಲಿ ಗುರುತಿಸಿಕೊಳ್ಳಬೇಕೆಂಬುದೇ ಗುರಿ. ಅದಕ್ಕಾಗಿ ಸತತ ಪರಿಶ್ರಮಪಡುತ್ತಿದ್ದೇನೆ. ಸಂಪೂರ್ಣವಾಗಿ ಸಮರ್ಪಿಸಿಕೊಂಡು ಬಿಟ್ಟಿದ್ದೇನೆ. ಅದರ ಫಲವಾಗಿ ತಿಮ್ಮಪ್ಪಯ್ಯ ಟೂರ್ನಿಯಲ್ಲಿ ಚೆನ್ನಾಗಿ ಬೌಲಿಂಗ್ ಮಾಡಲು ಸಾಧ್ಯವಾಯಿತು. ಬಂಗಾಳ ಎದುರಿನ ಎರಡೂ ಇನಿಂಗ್ಸ್‌ಗಳಲ್ಲಿ ಸೇರಿ 14 ವಿಕೆಟ್‌ಗಳನ್ನು ಗಳಿಸಿದೆ.  ಇದು ಅಖಿಲ ಭಾರತಮಟ್ಟದ ಮತ್ತು ಕೆಎಸ್‌ಸಿಎ ಸಂಘಟಿಸುತ್ತಿರುವ ಪ್ರತಿಷ್ಠಿತ ಟೂರ್ನಿಯೂ ಹೌದು. ಈ ಬಾರಿ ರಾಜ್ಯ ತಂಡದಲ್ಲಿ ಆಡುವ ಅವಕಾಶ ಸಿಗುವ ವಿಶ್ವಾಸ ಇದೆ.

* ಟ್ವೆಂಟಿ–20, ಏಕದಿನ ಮತ್ತು ಟೆಸ್ಟ್‌ ಮಾದರಿಗಳಲ್ಲಿ ಆಡುವ ವ್ಯತ್ಯಾಸ ಮತ್ತು ಮೂರು ಮಾದರಿಗಳಿಗೂ ಹೊಂದಿಕೊಳ್ಳಲು ಎದುರಿಸುತ್ತಿರುವ ಸವಾಲುಗಳು? 
ಕ್ರಿಕೆಟ್‌ನಲ್ಲಿ ಇವತ್ತು ಎರಡು ಗುಣಗಳು ಮುಖ್ಯವಾಗಿ ಬೇಕು. ಮೊದಲನೆಯದ್ದು ಫಿಸಿಕಲ್ ಫಿಟ್‌ನೆಸ್‌. ಯಾವುದೇ ಮಾದರಿಯಲ್ಲಿ ಆಡಲೂ ಸಿದ್ಧವಾಗಿರಬೇಕು. ಅದಕ್ಕಾಗಿ ದೈಹಿಕ ಕ್ಷಮತೆಯನ್ನು ನಿರಂತರ ಅಭ್ಯಾಸದಿಂದ ಕಾಪಾಡಿಕೊಳ್ಳಬೇಕು. ಎರಡನೇಯದಾಗಿ ಕ್ರಿಕೆಟ್‌ ಎನ್ನುವುದೀಗ ಮೈಂಡ್‌ ಗೇಮ್. ಮಾನಸಿಕವಾಗಿ ನಾವು ಎಷ್ಟು ಹೊತ್ತು ಕ್ರೀಡಾಂಗಣದಲ್ಲಿ ಛಲ ಬಿಡದೇ ಹೋರಾಟ ಮಾಡುತ್ತೇವೆ ಎನ್ನುವುದು ಮುಖ್ಯ. ಅದಕ್ಕಾಗಿ ಚಾಣಾಕ್ಷತೆ, ತಾಳ್ಮೆ ಮತ್ತು ಛಲದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಟ್ವೆಂಟಿ–20 ಮಾದರಿಯಲ್ಲಿ ಬೌಲರ್‌ಗೆ ನಾಲ್ಕು ಓವರ್‌ಗಳನ್ನು ಮಾಡುವ ಅವಕಾಶ ಇರುತ್ತದೆ. ಅದರಲ್ಲಿಯೇ ವಿಕೆಟ್‌ಗಳನ್ನು ಪಡೆದು ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುವ ಕೌಶಲ ಬೆಳೆಸಿಕೊಳ್ಳಬೇಕು. ಆದರೆ, ಮೂರು, ನಾಲ್ಕು ಮತ್ತು ಐದು ದಿನಗಳ  ಆಟದಲ್ಲಿ ಹೆಚ್ಚು ಓವರ್‌ಗಳನ್ನು ಬೌಲಿಂಗ್ ಮಾಡಬೇಕಾಗುತ್ತದೆ. ಬ್ಯಾಟ್ಸ್‌ಮನ್‌ಗಳೂ ತಾಳ್ಮೆಯಿಂದ ಆಡುತ್ತಾರೆ. ಬೌಲರ್‌ ಸಹನೆ ಕಳೆದುಕೊಂಡರೆ ಅವರಿಗೆ ಅನುಕೂಲ. ಆದ್ದರಿಂದ ನಾವು ಯಾವುದೇ ಹಂತದಲ್ಲಿಯೂ ದೃತಿಗೆಡಬಾರದು. ಗಟ್ಟಿಯಾಗಿ ಆಡುವ ಛಲ ಬೆಳೆಸಿಕೊಳ್ಳಬೇಕು. ಹೆಚ್ಚು ಓವರ್‌ಗಳವರೆಗೆ ವಿಕೆಟ್‌ ಬೀಳದಿದ್ದರೂ ಪ್ರಯತ್ನ ಬಿಡಬಾರದು. ಹೊಸ  ತಂತ್ರಗಳನ್ನು ಪ್ರಯೋಗಿಸುವ ಧೈರ್ಯವನ್ನೂ ತೋರಿಸಬೇಕು.

* ಕ್ರಿಕೆಟ್‌ ಆಡಲು ಶುರು ಮಾಡಿದ್ದು ಯಾವಾಗ? 
ನಮ್ಮದು ಕೊಡವ ಕುಟುಂಬ. ಹಾಕಿ ಕ್ರೀಡೆ ಆಡಬೇಕು ಎಂಬ ಒತ್ತಾಯ ನಮ್ಮ ಅಪ್ಪ–ಅಮ್ಮನದ್ದಾಗಿತ್ತು. 15 ವರ್ಷದವರೆಗೂ ನಾನು ಮತ್ತು ನನ್ನಣ್ಣ ಹಾಕಿ ಆಡುತ್ತಿದ್ದೆವು. ಅಪ್ಪ ಬೆಂಗಳೂರಿನ ಕೊಡವ ಸಮಾಜದಲ್ಲಿ ಕಾರ್ಯನಿರ್ವಹಿಸಲು ವರ್ಗಾವಣೆಗೊಂಡು ಬಂದ ಮೇಲೆ ಇಲ್ಲಿ ನೆಲೆಸಿದೆವು. ಆಗ ಕ್ರಿಕೆಟ್ ಆಕರ್ಷಣೆ ಶುರುವಾಯಿತು. ಮಲ್ಲೇಶ್ವರಂನ ಜವಾಹರ್ಸ್‌ ಕ್ರಿಕೆಟ್‌ ಕ್ಲಬ್‌ನಲ್ಲಿ ನಡೆಯುತ್ತಿದ್ದ ಶಿಬಿರ ಸೇರಿಕೊಂಡೆ. ಮೊದಲಿಗೆ ಮಧ್ಯಮವೇಗದ ಬೌಲರ್ ಆಗಿ ಆಡಿದೆ. ಆದರೆ ಅದು ಕೈಗೂಡಲಿಲ್ಲ. ಆಗ ಶ್ರೀಲಂಕಾದ ಅಜಂತಾ ಮೆಂಡಿಸ್‌ ಅವರ ಬೌಲಿಂಗ್ ನೋಡಿ ಮಾರುಹೋದೆ. ಅವರನ್ನ ಕಾಪಿ ಮಾಡಿದೆ. ಸ್ಪಿನ್ ಬೌಲಿಂಗ್‌ನಲ್ಲಿ ಯಶಸ್ಸು ಕಾಣತೊಡಗಿದೆ. ಅದು ನನ್ನ ಜೀವನಕ್ಕೆ ಸಿಕ್ಕ ಮಹತ್ವದ ತಿರುವು. ಆಮೇಲೆ ಕರ್ನಾಟಕದ ಹಿರಿಯ ಸ್ಪಿನ್ನರ್ ರಘುರಾಮ್ ಭಟ್ ಅವರ ಮಾರ್ಗದರ್ಶನ ಲಭಿಸಿತು  ಹಿರಿಯ ಕ್ರಿಕೆಟಿಗ ದೊಡ್ಡ ಗಣೇಶ್ ಅವರ ತರಬೇತಿ ಶಿಬಿರದಲ್ಲಿಯೂ ಆಡಿದ್ದೆ. ಅವರ ಮಾರ್ಗದರ್ಶನವೂ ಬಹಳ ಉಪಯುಕ್ತವಾಯಿತು.

* ಇವತ್ತಿನ ಕ್ರಿಕೆಟ್‌ನಲ್ಲಿರುವ ಸ್ಪರ್ಧೆಯನ್ನು ಎದುರಿಸಲು ನಿಮ್ಮ ತಂತ್ರವೇನು? 
ಕರ್ನಾಟಕದಲ್ಲಿ ಬಹಳಷ್ಟು ಪ್ರತಿಭಾವಂತರಿದ್ದಾರೆ. ಯಾವುದೇ ತಂಡದಲ್ಲಿ ಆಯ್ಕೆಯಾಗಬೇಕಾದರೂ ಅಪಾರ ಸ್ಪರ್ಧೆಯಿದೆ. ಅದಕ್ಕಾಗಿ  ಆಲ್‌ರೌಂಡರ್‌ ಆಗುವತ್ತ ಪ್ರಯತ್ನ ಆರಂಭಿಸಿದ್ದೇನೆ. ಕ್ರಿಕೆಟ್‌ಗೆ ಕಾಲಿಟ್ಟಾಗ ಬ್ಯಾಟಿಂಗ್ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ ಈಗ ಅದಕ್ಕೂ ಮಹತ್ವ ಕೊಡುತ್ತಿದ್ದೇನೆ. ಕೊನೆಯ ಓವರ್‌ಗಳಲ್ಲಿ ಒಂದಿಷ್ಟು ರನ್‌ಗಳನ್ನು ಗಳಿಸಿದರೆ ತಂಡಕ್ಕೆ ದೊಡ್ಡ ಕಾಣಿಕೆ ನೀಡಿದಂತಾಗುತ್ತದೆ. ಆಲ್‌ರೌಂಡರ್‌ ಆದರೆ ಅವಕಾಶಗಳೂ ಹೆಚ್ಚು.

* ಕೆಪಿಎಲ್‌ ನಲ್ಲಿ ಆಡಿದ್ದು ನಿಮಗೆ ಯಾವ ರೀತಿ ನೆರವಾಗಿದೆ? 
ಕೆಪಿಎಲ್‌ನಿಂದ ಬಹಳಷ್ಟು ಕಲಿಯಲು ಅವಕಾಶ ಸಿಕ್ಕಿದೆ. ಐದು ವರ್ಷಗಳಿಂದ ಬಿಜಾಪುರ ಬುಲ್ಸ್‌ ತಂಡದಲ್ಲಿ ಆಡುತ್ತಿದ್ದೇನೆ. ಒಂದು ಬಾರಿ ಪ್ರಶಸ್ತಿ ಮತ್ತು ಇನ್ನೊಂದು ಬಾರಿ ರನ್ನರ್ಸ್ ಅಪ್ ಆಗಿದ್ದೆವು. ಈ ಬಾರಿಯೂ ಜಯಿಸುವ ವಿಶ್ವಾಸ ಇದೆ. ಪ್ರತಿವರ್ಷವೂ ಹೊಸ ಹುಡುಗರು ತಂಡಕ್ಕೆ ಬರುತ್ತಿದ್ದಾರೆ. ಅವರಿಂದಲೂ ಹೊಸ ಕೌಶಲಗಳ ಪರಿಚಯವಾಗುತ್ತಿದೆ. ಸ್ಪರ್ಧೆ ಹೆಚ್ಚಿದಂತೆ ಆಟದ ಗುಣಮಟ್ಟವೂ ಹೆಚ್ಚುತ್ತದೆ. ನಮ್ಮ ಫ್ರ್ಯಾಂಚೈಸ್‌ ಮಾಲೀಕರಾದ ಕಿರಣ್ ಕಟ್ಟಿಮನಿ ಅವರು ಕ್ರಿಕೆಟ್‌ ಪ್ರೀತಿ ದೊಡ್ಡದು. ಈ ತಂಡದ ಮೂಲಕ ನಮ್ಮಂತಹ ಹಲವು ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.  ಈಗ ವಿಜಯಪುರದಲ್ಲಿಯೂ ಮೂಲಸೌಲಭ್ಯಗಳನ್ನು ನಿರ್ಮಿಸಿದ್ದಾರೆ. ಅಲ್ಲಿಯ ಸುತ್ತಮುತ್ತಲಿನ ಪ್ರತಿಭಾವಂತರನ್ನು ಸೇರಿಸಿ ತರಬೇತಿ ನೀಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಆ ಭಾಗದಿಂದ ಹೆಚ್ಚು ಆಟಗಾರರು ಬೆಳಕಿಗೆ ಬರುವುದು ಖಚಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !