ಶನಿವಾರ, ಮಾರ್ಚ್ 6, 2021
32 °C
ಇಂದಿನಿಂದ ಕನ್ನಡ ಚಲನಚಿತ್ರ ಕಪ್‌ ಕ್ರಿಕೆಟ್‌ ಟೂರ್ನಿ

ಟ್ರೋಫಿಗಾಗಿ ‘ತಾರೆ’ಗಳ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೋಘ ಅಭಿನಯ, ನೃತ್ಯ ಮತ್ತು ಮೈನವಿರೇಳಿಸುವ ಸಾಹಸಗಳ ಮೂಲಕ ಬೆಳ್ಳಿ ಪರದೆಯಲ್ಲಿ ಮಿನುಗುವ ಚಂದನವನದ ತಾರೆಯರು ಈಗ ಕ್ರಿಕೆಟ್‌ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ.

ಉದ್ಯಾನನಗರಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆಯುವ ಕನ್ನಡ ಚಲನಚಿತ್ರ ಕಪ್‌, ಸಿನಿಮಾ ಮತ್ತು ಕ್ರಿಕೆಟ್‌ ತಾರೆಗಳ ಸಮಾಗಮಕ್ಕೆ ಸಾಕ್ಷಿಯಾಗಲಿದೆ.

ಕ್ರಿಕೆಟ್‌ ಲೋಕದ ದಿಗ್ಗಜರಾದ ವೀರೇಂದ್ರ ಸೆಹ್ವಾಗ್‌, ತಿಲಕರತ್ನೆ ದಿಲ್ಶಾನ್‌, ಹರ್ಷಲ್‌ ಗಿಬ್ಸ್‌, ಆ್ಯಡಂ ಗಿಲ್‌ಕ್ರಿಸ್ಟ್‌, ಲ್ಯಾನ್ಸ್‌ ಕ್ಲೂಸ್ನರ್‌ ಮತ್ತು ಒವೈಸ್‌ ಶಾ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಮತ್ತು ‘ದಿಲ್‌ ಸ್ಕೂಪ್‌’ ಹೊಡೆತಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕ್ರಿಕೆಟ್‌ ಪ್ರಿಯರಿಗೆ ಸಿಗಲಿದೆ. ಕರ್ನಾಟಕದ ಯುವ ಆಟಗಾರರೂ ಸ್ಫೋಟಕ ಆಟ ಆಡಿ ಟೂರ್ನಿಗೆ ಇನ್ನಷ್ಟು ರಂಗು ತುಂಬಲು ಕಾತರರಾಗಿದ್ದಾರೆ.

10 ಓವರ್‌ಗಳ ಪಂದ್ಯದಲ್ಲಿ ರನ್‌ ಮಳೆ ಸುರಿಯುವ ನಿರೀಕ್ಷೆ ಇದ್ದು, ಒಟ್ಟು ಆರು ತಂಡಗಳು ‍ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಶಿವರಾಜ್‌ಕುಮಾರ್‌ ಸಾರಥ್ಯದ ವಿಜಯನಗರ ಪೇಟ್ರಿಯಾಟ್ಸ್‌ ತಂಡದಲ್ಲಿ ಆಸ್ಟ್ರೇಲಿಯಾದ ಗಿಲ್‌ಕ್ರಿಸ್ಟ್‌ ಆಡಲಿದ್ದಾರೆ. ಕಿಚ್ಚ ಸುದೀಪ್‌ ನಾಯಕತ್ವದ ಕದಂಬ ಲಯನ್ಸ್‌ನಲ್ಲಿ ‘ಸಿಡಿಲ ಮರಿ’ ಸೆಹ್ವಾಗ್‌ ಇದ್ದಾರೆ. ಪುನೀತ್‌ರಾಜ್‌ಕುಮಾರ್‌ ನೇತೃತ್ವದ ಗಂಗಾ ವಾರಿಯರ್ಸ್‌ ತಂಡಕ್ಕೆ ಕ್ಲೂಸ್ನರ್‌ ಬಲವಿದೆ.

ಉಪೇಂದ್ರ ಮುಂದಾಳತ್ವದ ಹೊಯ್ಸಳ ಈಗಲ್ಸ್‌ ತಂಡದಲ್ಲಿ ದಕ್ಷಿಣ ಆಫ್ರಿಕಾದ ಗಿಬ್ಸ್‌ ಆಡಲಿದ್ದಾರೆ. ಇಂಗ್ಲೆಂಡ್‌ನ ಒವೈಸ್‌ ಶಾ ಅವರು ರಾಕಿಂಗ್‌ ಸ್ಟಾರ್‌ ಯಶ್‌ ನಾಯಕರಾಗಿರುವ ರಾಷ್ಟ್ರಕೂಟ ಪ್ಯಾಂಥರ್ಸ್‌ ತಂಡದಲ್ಲಿ ಕಣಕ್ಕಿಳಿಯಲಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಾರಥ್ಯದ ಒಡೆಯರ್‌ ಚಾರ್ಜರ್ಸ್‌ ಕೂಡಾ ಗೆಲುವಿನ ಹುಮ್ಮಸ್ಸಿನಲ್ಲಿದೆ. ಶ್ರೀಲಂಕಾದ ದಿಲ್ಶಾನ್‌ ಈ ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು