ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಪೈರ್‌ ನಿರ್ಧಾರಕ್ಕೆ ಅಸಮ್ಮತಿ: ವಿರಾಟ್‌ ಕೊಹ್ಲಿಗೆ ದಂಡ

Published 22 ಏಪ್ರಿಲ್ 2024, 13:40 IST
Last Updated 22 ಏಪ್ರಿಲ್ 2024, 13:40 IST
ಅಕ್ಷರ ಗಾತ್ರ

ನವದೆಹಲಿ: ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದ ವೇಳೆ ಅಂಪೈರ್‌ ನಿರ್ಧಾರದ ವಿರುದ್ಧ ಅಸಮ್ಮತಿ ವ್ಯಕ್ತಪಡಿಸಿ, ಐಪಿಎಲ್ ನೀತಿ–ನಿಯಮ ಉಲ್ಲಂಘಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರಿಗೆ ಪಂದ್ಯ ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಗಿದೆ.

ಭಾನುವಾರ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಕೆಕೆಆರ್‌ ವಿರುದ್ಧ 1 ರನ್‌ಗಳಿಂದ ಸೋತಿತ್ತು. ಈ ಪಂದ್ಯದಲ್ಲಿ 7 ಎಸೆತಗಳಲ್ಲಿ 18 ರನ್‌ ಗಳಿಸಿದ್ದ ವಿರಾಟ್, ಮೂರನೇ ಓವರ್‌ನಲ್ಲಿ ಹರ್ಷಿತ್ ರಾಣಾ ಎಸೆತದಲ್ಲಿ ಬೌಲರ್‌ಗೇ ಕ್ಯಾಚ್‌ ಇತ್ತರು. ಆದರೆ, ಆ ಎಸೆತವು ಸ್ಲೋವರ್‌ ಫುಲ್‌ಟಾಸ್ ಇತ್ತು. ಅದು ನೋಬಾಲ್ ಆಗಬಹುದೆಂಬ ಅಂದಾಜಿನಲ್ಲಿ ವಿರಾಟ್ ಆಡಿದ್ದರು.

ಆದರೆ, ‌ಅಂಪೈರ್ ಔಟ್ ನೀಡಿದ್ದರಿಂದ ಇನ್ನೊಂದು ಬದಿಯಲ್ಲಿದ್ದ ಫಫ್ ಡುಪ್ಲೆಸಿ ಮತ್ತು ವಿರಾಟ್ ಅವರು ಡಿಆರ್‌ಎಸ್ ಮೊರೆ ಹೋದರು. ಟಿವಿ ಅಂಪೈರ್ ಮೈಕೆಲ್ ಗಾಫ್‌ ಕೂಡ ಚೆಂಡೆಸೆತದ ಎತ್ತರವನ್ನು ಪರಿಶೀಲಿಸಿ ಅದು ನೋಬಾಲ್ ಅಲ್ಲ, ವಿರಾಟ್ ಔಟ್ ಎಂದು ನಿರ್ಣಯ ನೀಡಿದ್ದರು. ಹಾಕ್ ಐ ಟ್ರ್ಯಾಕಿಂಗ್ ಪ್ರಕಾರ ಕೊಹ್ಲಿ ಅವರು ಕ್ರೀಸ್‌ನಲ್ಲಿ ನಿಂತಿದ್ದರೆ ಚೆಂಡು 0.92 ಮೀಟರ್ ಎತ್ತರದಲ್ಲಿ ಅವರ ಸೊಂಟದ ಮಟ್ಟ ಹಾದು ಹೋಗುತ್ತಿತ್ತು. ತೀರ್ಪಿನ ನಂತರ ಕೊಹ್ಲಿ ಅಂಪೈರ್‌ ಬಳಿ ಹೋಗಿ ಅಸಮಾಧಾನ ಸೂಚಿಸಿ ಹೊರನಡೆದಿದ್ದರು.

ಹತಾಶರಾದ ಕೊಹ್ಲಿ, ಸಿಟ್ಟಿನ ಭರದಲ್ಲಿ ಬ್ಯಾಟನ್ನು ನೆಲಕ್ಕೆ ಕುಕ್ಕಿದರಲ್ಲದೇ, ಡ್ರೆಸಿಂಗ್‌ ರೂಮ್ ಬಳಿಯಿದ್ದ ಕಸದ ತೊಟ್ಟಿಯನ್ನು ಕೈಯಿಂದ ಬೀಳಿಸಿದ್ದರು.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಐಪಿಎಲ್‌, ‘ಏಪ್ರಿಲ್ 21ರಂದು ಕೋಲ್ಕತ್ತ ನೈಟ್‌ ರೈಡರ್ಸ್ ತಂಡ ವಿರುದ್ಧ ನಡೆದ ಪಂದ್ಯದ ವೇಳೆ ಐಪಿಎಲ್‌ನ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಪಂದ್ಯದ ಒಟ್ಟು ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.8(ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ) ಅಡಿಯಲ್ಲಿ ಕೊಹ್ಲಿ ಅಪರಾಧ ಎಸಗಿದ್ದಾರೆ. ತಮ್ಮ ತಪ್ಪನ್ನು ಅವರು ಒಪ್ಪಿಕೊಂಡಿದ್ದು, ಮ್ಯಾಚ್‌ ರೆಫ್ರಿಯ ನಿರ್ಧಾರಕ್ಕೆ ಸಮ್ಮತಿಸಿದ್ದಾರೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT