ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ನನಗಿಂತಲೂ ಹೆಚ್ಚು ಕೌಶಲ್ಯಯುತ ಆಟಗಾರ: ಗಂಗೂಲಿ

Last Updated 10 ಸೆಪ್ಟೆಂಬರ್ 2022, 16:07 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನ ವಿರುದ್ಧದ ಏಷ್ಯಾ ಕಪ್ ಟಿ–20 ಕ್ರಿಕೆಟ್ ಸರಣಿಯ ಸೂಪರ್–4 ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊಂಡಾಡಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ನನಗಿಂತಲೂ ಹೆಚ್ಚು ಕೌಶಲ್ಯ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ

ಗಂಗೂಲಿ ಮತ್ತು ಕೊಹ್ಲಿ ಇಬ್ಬರೂ ಆಕ್ರಮಣಕಾರಿ ನಾಯಕತ್ವದ ಮೂಲಕ ಹೆಸರಾಗಿದ್ದರು. ಆದರೆ, ಕೌಶಲ್ಯದ ವಿಚಾರಕ್ಕೆ ಬಂದರೆ ಕೊಹ್ಲಿ ನನಗಿಂತಲೂ ಮುಂದಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.

'ನಾಯಕತ್ವ ಹೋಲಿಕೆ ಬೇಕೆಂದು ನನಗೆ ಅನಿಸುವುದಿಲ್ಲ. ಆಟಗಾರನಾಗಿ ಕೌಶಲ್ಯದ ವಿಷಯದಲ್ಲಿ ಹೋಲಿಕೆ ಇರಬೇಕು. ಅವರು(ಕೊಹ್ಲಿ) ನನಗಿಂತ ಹೆಚ್ಚು ಕೌಶಲ್ಯ ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ’ಎಂದು ಯೂಟ್ಯೂಬ್‌ನ ರಣವೀರ್ ಶೋನಲ್ಲಿ ಗಂಗೂಲಿ ಹೇಳಿದ್ದಾರೆ.

ಒಂದು ತಿಂಗಳ ವಿರಾಮದ ನಂತರ ಹಿಂದಿರುಗಿದ ಕೊಹ್ಲಿ, 1,020 ದಿನಗಳ ದೀರ್ಘ ಅಂತರದ ಬಳಿಕ ಶತಕ ದಾಖಲಿಸಿದರು. ಏಷ್ಯಾ ಕಪ್ ಟಿ–20 ಸರಣಿಯ ಅಫ್ಗಾನಿಸ್ತಾನ ವಿರುದ್ಧದ ಸೂಪರ್–4 ಪಂದ್ಯದಲ್ಲಿ 61 ಎಸೆತಗಳಲ್ಲಿ ಸ್ಫೋಟಕ 122 ರನ್ ಗಳಿಸಿದರು.

ಕೊಹ್ಲಿ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದ ಗಂಗೂಲಿ, ‘ನಾವು ಬೇರೆ ಬೇರೆ ತಲೆಮಾರುಗಳಲ್ಲಿ ಆಡಿದ್ದೇವೆ ಮತ್ತು ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ನಾನು ನನ್ನ ಪೀಳಿಗೆಯಲ್ಲಿ ಆಡಿದ್ದೇನೆ ಮತ್ತು ಅವರು ಆಡುವುದನ್ನು ಮುಂದುವರಿಸುತ್ತಿದ್ದಾರೆ. ಬಹುಶಃ ನನಗಿಂತ ಹೆಚ್ಚು ಪಂದ್ಯಗಳಲ್ಲಿ ಅವರು ಆಡುತ್ತಾರೆ’ ಎಂದು ಹೇಳಿದ್ದಾರೆ.

‘ಪ್ರಸ್ತುತ, ನಾನು ಅವರಿಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಆದರೆ, ಅವರು ಖಂಡಿತಾ ಅದನ್ನು ಮೀರಿಸುತ್ತಾರೆ. ಅವರೊಬ್ಬ ಅದ್ಭುತ ಆಟಗಾರ’ ಎಂದು ಗಂಗೂಲಿ ಹೇಳಿದ್ದಾರೆ.

ಕ್ರಿಕೆಟ್ ವೃತ್ತಿ ಜೀವನ ಈಗ ಹೆಚ್ಚು ಒತ್ತಡಕಾರಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕ್ವಾರಂಟೈನ್ ಮತ್ತು ಇವೇ ಮುಂತಾದ ಕಾರಣಗಳಿಂದ ಮತ್ತಷ್ಟು ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾಗ ಏನಾದರೂ ಸಲಹೆ ನೀಡಿದ್ದೀರಾ ಎಂಬ ಪ್ರಶ್ನೆಗೆ, ಅವರ ಭೇಟಿಯಾಗಿಲ್ಲ. ಆದರೆ, ಅವರು ಬಹಳಷ್ಟು ಶ್ರಮಪಟ್ಟಿದ್ದಾರೆ ಎಂದು ಗಂಗೂಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT