ವಿಂಡೀಸ್ ವಜ್ರಗಳ ಹೊಳಪು

ಶನಿವಾರ, ಏಪ್ರಿಲ್ 20, 2019
26 °C

ವಿಂಡೀಸ್ ವಜ್ರಗಳ ಹೊಳಪು

Published:
Updated:
Prajavani

ಬರೋಬ್ಬರಿ ನಾಲ್ಕು ದಶಕಗಳ ಹಿಂದೆ ಕೆರಿಬಿಯನ್ ದ್ವೀಪಗಳ ನಾಡು ಏಕದಿನ ವಿಶ್ವಕಪ್ ಗೆದ್ದು  ಸಂಭ್ರಮಿಸಿದ್ದು ಹೊಸ ತಲೆಮಾರಿನ ಕ್ರಿಕೆಟ್‌ ಪ್ರೇಮಿಗಳಿಗೆ ನೆನಪೆ ಇಲ್ಲ. ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಆಟಗಾರರ ಅಬ್ಬರದಲ್ಲಿ ವೆಸ್ಟ್‌ ಇಂಡೀಸ್ ಸಾಧನೆ ಮತ್ತೆ ಮರುಕಳಿಸಲೇ ಇಲ್ಲ. ಅದಕ್ಕೆ ಕಾರಣ ಅಲ್ಲಿಯ ಆಡಳಿತ ಮಂಡಳಿಯ ತಿಕ್ಕಾಟ ಮತ್ತು ಒಳರಾಜಕೀಯದಾಟ.

ಆದರೆ ಎರಡು ವರ್ಷಗಳ ಹಿಂದೆ ಟ್ವೆಂಟಿ–20 ಮಾದರಿಯಲ್ಲಿ ವಿಶ್ವಕಪ್ ಗೆದ್ದಾಗ ಮತ್ತೆ ವಿಂಡೀಸ್ ಅಭಿಮಾನಿಗಳ ಕಂಗಳಲ್ಲಿ ಆಸೆ ಇಣುಕಿದೆ. ಅದಕ್ಕೆ ಮತ್ತಷ್ಟು ಬಲ ತುಂಬುವಂತಹ ಸಾಧನೆಗಳು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿಯೂ ಕಾಣುತ್ತಿವೆ. ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲಿರುವ ಆಲ್‌ರೌಂಡರ್ ಆ್ಯಂಡ್ರೆ ರಸೆಲ್,  ಕಿಂಗ್ಸ್‌ ಇಲೆವನ್ ಪಂಜಾಬ್‌ನಲ್ಲಿ ರನ್‌ ಮಷೀನ್ ಕ್ರಿಸ್ ಗೇಲ್, ಚೆನ್ನೈ ಸೂಪರ್ ಕಿಂಗ್ಸ್‌ನ ಆಲ್‌ರೌಂಡರ್‌ ಡ್ವೇನ್ ಬ್ರಾವೊ, ರಾಜಸ್ಥಾನ್ ರಾಯಲ್ಸ್‌ ಮಧ್ಯಮವೇಗಿ ಜೋಫ್ರಾ ಆರ್ಚರ್, ಮುಂಬೈ ಇಂಡಿಯನ್ಸ್‌  ತಂಡದ ಅಲ್ಜಾರಿ ಜೋಸೆಫ್, ಮುಂಬೈ ತಂಡದ ಕೀರನ್ ಪೊಲಾರ್ಡ್ ಮತ್ತು ಕೋಲ್ಕತ್ತ ನೈಟ್‌ ರೈಡರ್ಸ್‌ನ ಸುನಿಲ್ ನಾರಾಯಣ್ ಅವರೇ ಈಗ ಗೇಮ್ ಚೇಂಜರ್ಸ್‌ ಆಗಿ ಮೆರೆಯುತ್ತಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಇವರದ್ದೇ ದರ್ಬಾರು. ಇವರದ್ದೇ ಹವಾ. ಅವರೆಲ್ಲರೂ ತಮ್ಮ ಶಕ್ತಿ ಮೀರಿ ಆಡುತ್ತಿರುವ ಹಿಂದಿನ ಕಾರಣ ವಿಶ್ವಕಪ್ ಟೂರ್ನಿಗೆ ತಂಡವನ್ನು ಆಯ್ಕೆ ಮಾಡುವವರ ಗಮನ ಸೆಳೆಯುವುದು.

‘ವಿಂಡೀಸ್‌ ಕ್ರಿಕೆಟ್‌ಗೆ ಮತ್ತೆ ವೈಭವದ ದಿನಗಳು ಮರಳುವ ಲಕ್ಷಣಗಳು ಗೋಚರಿಸುತ್ತಿವೆ. ನಮ್ಮ ಈ ಆಟಗಾರರು ವಿಂಡೀಸ್ ಕ್ರಿಕೆಟ್ ಸಂಸ್ಥೆಯ ಆಯ್ಕೆದಾರರ ಗಮನ ಸೆಳೆದರೆ ಸಾಕು. ಈ ಅವಕಾಶ ಸಿಗುವ ನಿರೀಕ್ಷೆ  ಇದೆ. ಯಾವಾಗ ಅವಕಾಶ ಸಿಕ್ಕರೂ ನನ್ನಲ್ಲಿರುವ ಸಂಪೂರ್ಣ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತೇನೆ’ ಎಂದು ಮುಂಬೈ ತಂಡದ ಕೀರನ್ ಪೊಲಾರ್ಡ್ ಹೇಳುತ್ತಾರೆ.

ಆದರೆ ವಿಶ್ವಕಪ್ ಟೂರ್ನಿಯಲ್ಲಿ ವಿಂಡೀಸ್  ಆಟಗಾರರು ಹೇಗೆ ಆಡುತ್ತಾರೆ ಎಂದು ನೋಡಲು ಇನ್ನೂ ಬಹಳ ಸಮಯ ಉಳಿದಿದೆ. ಆದರೆ, ಈ ಸಲದ ಐಪಿಎಲ್‌ನ ಮೊದಲ ಸುತ್ತಿನಲ್ಲಿ ಅವರ ಕೆಲವು ಪ್ರಮುಖ ಸಾಧನೆಗಳನ್ನು ನೋಡಿ ಆನಂದಿಸುವ ಅವಕಾಶವಂತೂ ಲಭಿಸಿದೆ. ಕ್ಲೈವ್ ಲಾಯ್ಡ್, ವಿವಿಯನ್ ರಿಚರ್ಡ್ಸ್‌, ಕಾರ್ಲ್ ಹೂಪರ್, ಮಾಲ್ಕಂ ಮಾರ್ಷಲ್, ಪ್ಯಾಟ್ರಿಕ್ ಪ್ಯಾಟರ್ಸನ್, ರಿಚಿ ರಿಚಿರ್ಡ್ಸನ್, ಬ್ರಯನ್ ಲಾರಾ ಅವರಂತಹ ಅನೇಕ ದಿಗ್ಗಜರು ಕ್ರಿಕೆಟ್ ಜಗತ್ತನ್ನು ಬೆಳಗಿದ್ದಾರೆ. ಅವರ ಸ್ಥಾನವನ್ನು ಮತ್ತೆ ತುಂಬುವ ಪ್ರತಿಭಾವಂತರೂ ಈಗಲೂ ಇದ್ದಾರೆ ಎನ್ನುವುದಂತೂ ದಿಟ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !