ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಲ್ಲಿ ತಂಡಗಳ ಹೆಚ್ಚಳಕ್ಕೆ ಸಕಾಲ, ಪ್ರತಿಭೆಗಳಿಗೆ ಕೊರತೆಯಿಲ್ಲ: ದ್ರಾವಿಡ್

Last Updated 13 ನವೆಂಬರ್ 2020, 15:47 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕ್ರಿಕೆಟ್‌ ಪ್ರತಿಭೆಗಳ ದೊಡ್ಡ ಕಣಜವೇ ಈಗ ಇದೆ. ಆದ್ದರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಇದು ಸಕಾಲ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಮುಂದಿನ ವರ್ಷದ ಐಪಿಎಲ್‌ನಲ್ಲಿ ತಂಡಗಳ ಸಂಖ್ಯೆಯನ್ನು ಒಂಬತ್ತಕ್ಕೇರಿಸಲು ಮತ್ತು 2023ರ ವೇಳಿಗೆ 10ಕ್ಕೇರಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ರಾಜಸ್ಥಾನ ರಾಯಲ್ಸ್ ತಂಡದ ಸಹಮಾಲೀಕ ಮನೋಜ್ ಬದಳೆ ಮತ್ತು ಇಂಗ್ಲೆಂಡ್ ಕ್ರಿಕೆಟಿಗ ಸೈಮನ್ ಹ್ಯೂಗ್ಸ್‌ ಸೇರಿ ಬರದ ’ಎ ನ್ಯೂ ಇನಿಂಗ್ಸ್‘ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ತಂಡಗಳ ಸಂಖ್ಯೆ ಹೆಚ್ಚಳವಾದರೆ ಬಹಳಷ್ಟು ಆಟಗಾರರಿಗೆ ಅವಕಾಶ ಸಿಗುತ್ತದೆ. ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಕ್ರಿಕಟ್ ಬೆಳೆಯುತ್ತಿರುವುದರಿಂದ ಬಹಳಷ್ಟು ಸಂಖ್ಯೆಯಲ್ಲಿ ಉತ್ತಮ ಆಟಗರರು ಸಿದ್ಧಗೊಳ್ಳುತ್ತಿದ್ದಾರೆ. ಅವರಿಗೆ ಒಂದು ವೇದಿಕೆಯ ಅಗತ್ಯ ಖಂಡಿತವಾಗಯೂ ಇದೆ‘ ಎಂದು ದ್ರಾವಿಡ್ ಹೇಳಿದರು.

’ಐಪಿಎಲ್ ಟೂರ್ನಿಯ ವಿಸ್ತರಣೆಯಿಂದ ಬಹಳಷ್ಟು ಜನರಿಗೆ ನೆರವಾಗುತ್ತದೆ. ಆಟದ ಗುಣಮಟ್ಟವೂ ಹೆಚ್ಚುತ್ತದೆ‘ ಎಂದು ಅಭಿಪ್ರಾಯಪಟ್ಟರು.

ಯುಎಇಯಲ್ಲಿ ನಡೆದ 13ನೇ ಆವೃತ್ತಿಯ ಟೂರ್ನಿಯಲ್ಲಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ತಂಡದ ಸಾಧನೆಯನ್ನು ದ್ರಾವಿಡ್ ಶ್ಲಾಘಿಸಿದರು.

’ಆಟಗಾರರ ಆಯ್ಕೆ ಮಾಡಲು ಈ ಹಿಂದೆ ಕೆಲವೇ ಕೆಲವು ರಾಜ್ಯ ಸಂಸ್ಥೆಗಳ ಮೇಲೆ ಅವಲಂಬನೆ ಇತ್ತು. ಈಗ ಹಾಗಿಲ್ಲ ಹರಿಯಾಣದಿಂದ ಯಜುವೇಂದ್ರ ಚಾಹಲ್, ರಾಹುಲ್ ತೆವಾಟಿಯಾ ಅವರಂತಹ ಆಟಗಾರರು ಬೆಳಕಿಗೆ ಬರುತ್ತಿದ್ದಾರೆ. ಕೋಚಿಂಗ್ ಸೌಲಭ್ಯ ಅಭಿವೃದ್ಧಿಯಾದಂತೆ ಯುವ ಆಟಗಾರರಿಗೆ ಹೆಚ್ಚು ಪ್ರಯೋಜನವಾಗುತ್ತಿದೆ. ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರು ಇದಕ್ಕೆ ಉತ್ತಮ ಉದಾಹರಣೆ‘ ಎಂದು ದ್ರಾವಿಡ್ ಹೇಳಿದರು.

ಈ ಸಂದರ್ಭದಲ್ಲಿ ದ್ರಾವಿಡ್ ಮಾತಿಗೆ ಸಹಮತ ವ್ಯಕ್ತಪಡಿಸಿದ ಬದಳೆ, ’ಈ ಕುರಿತು ಬಿಸಿಸಿಐ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಪೂರ್ಣ ರೂಪುರೇಷೆ ಸಿದ್ಧವಾದ ಮೇಲಷ್ಟೇ ಸಾಧಕ–ಬಾಧಕಗಳನ್ನು ಯೋಚಿಸಲು ಸಾಧ್ಯ‘ ಎಂದರು.

’2021ರಲ್ಲಿ ಒಂದು ಹೊಸ ತಂಡವನ್ನು ಸೇರ್ಪಡೆ ಮಾಡುವುದು ಸಾಧ್ಯವಿದೆ. ಆದರೆ ಇದರಿಂದಾಗಿ ಟೂರ್ನಿಯ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆ ಅಗತ್ಯವಾಗುತ್ತದೆ. ಡಬಲ್ ಹೆಡರ್‌ (ದಿನಕ್ಕೆರಡು ಪಂದ್ಯ) ಹೆಚ್ಚಬಹುದು. ಇದರಿಂದ ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳಲು ಸಾದ್ಯವಾಗುತ್ತದೆ‘ ಎಂದು ಬದಾಳೆ ಅಭಿಪ್ರಾಯಪಟ್ಟರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT