ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಜ ಟ್ರೋಫಿ ಕ್ರಿಕೆಟ್: ಕರುಣ್–ಕಾರ್ತಿಕ್ ಜೊತೆಯಾಟಕ್ಕೆ ಜಯ

ಮೈಸೂರು ತಂಡದ ಸೆಮಿ ಹಾದಿ ಸುಗಮ
Published 29 ಆಗಸ್ಟ್ 2024, 1:07 IST
Last Updated 29 ಆಗಸ್ಟ್ 2024, 1:07 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌.ಯು. ಕಾರ್ತಿಕ್ ಮತ್ತು ನಾಯಕ ಕರುಣ್ ನಾಯರ್ ಅವರಿಬ್ಬರ  ಶತಕದ ಜೊತೆಯಾಟದ ಬಲದಿಂದ ಮೈಸೂರು ವಾರಿಯರ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ ಆರಂಭವಾದ ಪಂದ್ಯದಲ್ಲಿ ಮೈಸೂರು ತಂಡವು 6 ವಿಕೆಟ್‌ಗಳಿಂದ ಮಂಗಳೂರು ಡ್ರ್ಯಾಗನ್ಸ್ ಎದುರು ಗೆದ್ದಿತು. ಮೈಸೂರು ತಂಡಕ್ಕೆ ಇದು ಲೀಗ್ ಹಂತದ ಕೊನೆಯ ಪಂದ್ಯವಾಗಿತ್ತು.  ಒಟ್ಟು 10 ಪಂದ್ಯಗಳಲ್ಲಿ ಸಾಧಿಸಿದ 6ನೇ ಜಯ ಇದಾಗಿದೆ. ನಾಲ್ಕರಲ್ಲಿ ಸೋತು 12 ಅಂಕ ಗಳಿಸಿದೆ. ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತವಾಗಿದೆ. ಆದರೆ ಮಂಗಳೂರು ತಂಡವು ಆಡಿರುವ 9 ಪಂದ್ಯಗಳಲ್ಲಿ 7ರಲ್ಲಿ ಸೋತಿದೆ. ಕೇವಲ ಒಂದರಲ್ಲಿ ಜಯಿಸಿದೆ. ಇನ್ನೊಂದು ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಸೆಮಿ ಹಾದಿಯಿಂದ ತಂಡವು ನಿರ್ಗಮಿಸಿದೆ.

ಟಾಸ್ ಗೆದ್ದ ಮೈಸೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಂಗಳೂರು ತಂಡವು ಕೃಷ್ಣಮೂರ್ತಿ ಸಿದ್ಧಾರ್ಥ್ (50; 36ಎ, 4X4, 6X2) ಅವರ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 178 ರನ್‌ ಗಳಿಸಿತು. ಇದಕ್ಕುತ್ತರವಾಗಿ ಮೈಸೂರು ತಂಡವು 18.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 179 ರನ್‌ ಗಳಿಸಿ ಜಯಿಸಿತು. 

ಆರಂಭಿಕ ಬ್ಯಾಟರ್ ಎಸ್‌.ಯು. ಕಾರ್ತಿಕ್  ಮತ್ತು ಸಿ.ಎ.ಕಾರ್ತಿಕ್ (14 ರನ್) ಅವರಿಬ್ಬರೂ ಮೊದಲ ವಿಕೆಟ್‌ಗೆ ತಾಳ್ಮೆಯ ಜೊತೆಯಾಟದ ಮೂಲಕ6.5 ಓವರ್‌ಗಳಲ್ಲಿ 42 ರನ್‌ ಸೇರಿಸಿದರು. ಸ್ಪಿನ್ನರ್ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಸಿ.ಎ. ಕಾರ್ತಿಕ್ ಔಟಾದರು. ಈ ಹಂತದಲ್ಲಿ ಎಸ್‌.ಯು. ಕಾರ್ತಿಕ್ (69; 52ಎ, 4X7, 6X2) ಅವರೊಂದಿಗೆ ಜೊತೆಗೂಡಿದ ಕರುಣ್  ಮಿಂಚಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 107 ರನ್‌ ಸೇರಿಸಿದರು. ಕರುಣ್ 31 ಎಸೆತಗಳಲ್ಲಿ 64 ರನ್‌ ಗಳಿಸಿದರು. 6 ಬೌಂರಿ ಮತ್ತು 4 ಸಿಕ್ಸರ್‌ಗಳನ್ನು ಗಳಿಸಿದರು. 206.45ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. ಇದರಿಂದಾಗಿ ತಂಡದ ಜಯ ಸುಲಭವಾಯಿತು. 

17ನೇ ಓವರ್‌ನಲ್ಲಿ ಅದ್ವೈತ್ ಶೆಟ್ಟಿ ಬೌಲಿಂಗ್‌ನಲ್ಲಿ ಕಾರ್ತಿಕ್ ಕ್ಲೀನ್‌ಬೌಲ್ಡ್ ಆದರು. ಇದರೊಂದಿಗೆ ಜೊತೆಯಾಟ ಮುರಿಯಿತು. ನಂತರದ ಓವರ್‌ನಲ್ಲಿ ಮೆಕ್ನಿಲ್ ನರೋನಾ ಹಾಕಿದ ಎಸೆತದಲ್ಲಿ ಕರುಣ್ ಅವರು ಲೋಚನ್‌ ಗೌಡಗೆ ಕ್ಯಾಚಿತ್ತರು. ಕ್ರೀಸ್‌ನಲ್ಲಿದ್ದ ಮನೋಜ್ ಭಾಂಡಗೆ (10; 6ಎ, 6X1) ತಂಡವನ್ನು ಗೆಲುವಿನ ದಡ ಸೇರಿಸಿದರು. 

ಸಂಕ್ಷಿಪ್ತ ಸ್ಕೋರು: ಮಂಗಳೂರು ಡ್ರ್ಯಾಗನ್ಸ್: 20 ಓವರ್‌ಗಳಲ್ಲಿ 9ಕ್ಕೆ178 (ತುಷಾರ್ ಸಿಂಗ್ 43, ಕೆ.ವಿ. ಸಿದ್ಧಾರ್ಥ್ 50, ಲೋಚನ್ ಗೌಡ 25, ಎಂ.ಬಿ. ದರ್ಶನ್ 18, ಸಿ.ಎ. ಕಾರ್ತಿಕ್ 37ಕ್ಕೆ2, ಕೆ. ಗೌತಮ್ 18ಕ್ಕೆ2, ಮನೋಜ್ ಬಾಂಢಗೆ 29ಕ್ಕೆ2)  ಮೈಸೂರು ವಾರಿಯರ್ಸ್: 18.4 ಓವರ್‌ಗಳಲ್ಲಿ 4ಕ್ಕೆ179 (ಎಸ್‌.ಯು. ಕಾರ್ತಿಕ್ 69, ಕರುಣ್ ನಾಯರ್ 64, ಮೆಕ್ನಿಲ್ ಹ್ಯಾಡ್ಲಿ ನರೋನಾ 10ಕ್ಕೆ2) ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ 6 ವಿಕೆಟ್‌ಗಳ ಜಯ.  ಪಂದ್ಯದ ಆಟಗಾರ: ಕರುಣ್ ನಾಯರ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT