ಮೆಲ್ಬರ್ನ್: ಅಕ್ಟೋಬರ್ 27ರಂದು ಆರಂಭವಾಗಲಿರುವ ಮಹಿಳೆಯರ ಬಿಗ್ ಬ್ಯಾಶ್ ಲೀಗ್‌ಗೆ (ಡಬ್ಲ್ಯುಬಿಬಿಎಲ್) ಭಾರತದ ಮಹಿಳೆಯರ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಸೇರಿ 6 ಮಂದಿ ಭಾರತೀಯ ಆಟಗಾರ್ತಿಯರನ್ನು ವಿವಿಧ ತಂಡಗಳಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಅಡಿಲೇಡ್ ಸ್ಟ್ರೈಕರ್ ತಂಡದ ಜೊತೆ ಸ್ಮೃತಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ದಯಾಳನ್ ಹೇಮಲತಾ ಇದೇ ಮೊದಲ ಬಾರಿಗೆ ಬಿಗ್ ಬ್ಯಾಶ್ ಆಡುತ್ತಿದ್ದು, ಆರಂಭಿಕ ಬ್ಯಾಟರ್ ಕೈಬಿಟ್ಟಿರುವುದರಿಂದ ಪರ್ತ್ ಸ್ಕಾರ್ಚರ್ಸ್ ತಂಡ ಇವರಿಗೆ ಅವಕಾಶ ನೀಡಿದೆ.
ವಿಕೆಟ್‌ಕೀಪರ್ ಯಸ್ತಿಕಾ ಭಾಟಿಯಾ ಸಹ ಡಬ್ಲ್ಯುಬಿಬಿಎಲ್‌ಗೆ ಪದಾರ್ಪಣೆ ಮಾಡುತ್ತಿದ್ದು, ಮೆಲ್ಬರ್ನ್ ಸ್ಟಾರ್ಸ್ ತಂಡದ ಪರ ಆಡಲಿದ್ದಾರೆ. ಭಾರತ ರಾಷ್ಟ್ರೀಯ ತಂಡದ ಸಹ ಆಟಗಾರ್ತಿ ದೀಪ್ತಿ ಶರ್ಮಾ ಸಹ ಇದೇ ತಂಡದಲ್ಲಿದ್ದಾರೆ.
ಬ್ರಿಸ್ಬೇನ್ ಹೀಟ್ ತಂಡ ಭಾರತದ ಆಲ್ರೌಂಡರ್ ಶಿಖಾ ಪಾಂಡೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಬ್ರಿಸ್ಬೇನ್ ತಂಡದ ವೇಗದ ಬೌಲಿಂಗ್ ಪಡೆಗೆ ಬಲ ತುಂಬಲಿರುವ ಶಿಖಾ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಹ ಮಾಡಲಿದ್ದಾರೆ.
ಮಹಿಳೆಯರ ಟಿ20–ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯದ ಶಿಖಾ, ಸಂಪೂರ್ಣ ಬಿಗ್ ಬ್ಯಾಶ್ ಟೂರ್ನಿಯಲ್ಲಿ ಆಡಲಿದ್ದಾರೆ. ಇದೇ ತಂಡದಲ್ಲಿ ಜೆಮಿಮಾ ರಾಡ್ರಿಗಸ್ ಸಹ ಇದ್ದಾರೆ.
ಅಕ್ಟೋಬರ್ 27ರಂದು ಬ್ರಿಸ್ಬೇನ್‌ನಲ್ಲಿ ಬಿಗ್ ಬ್ಯಾಶ್ ಟೂರ್ನಿಗೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಬ್ರಿಸ್ಬೇನ್ ಹೀಟ್ ತಂಡಗಳು ಸೆಣಸಲಿವೆ.