ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವಕಪ್‌: ಸ್ಮೃತಿ, ಹರ್ಮನ್‌ಪ್ರೀತ್‌ ಕೌರ್ ಶತಕ, ಭಾರತಕ್ಕೆ ಜಯದ ಪುಳಕ

ದಾಖಲೆಯ ಜೊತೆಯಾಟ; ಗರಿಷ್ಠ ಮೊತ್ತದ ಸಾಧನೆ
Last Updated 12 ಮಾರ್ಚ್ 2022, 12:59 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್, ನ್ಯೂಜಿಲೆಂಡ್‌: ಮೊದಲ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲರಾದ ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್ ಶನಿವಾರ ಸೆಡಾನ್ ಪಾರ್ಕ್‌ನಲ್ಲಿ ಮಿಂಚಿದರು. ಅವರಿಬ್ಬರ ಶತಕದ ಜೊತೆಯಾಟದ ಬಲದಿಂದ ಭಾರತ ತಂಡ ಮಹಿಳೆಯರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಎದುರು ಭಾರಿ ಜಯ ಸಾಧಿಸಿತು.

ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದರೂ ನಂತರ ನ್ಯೂಜಿಲೆಂಡ್ ವಿರುದ್ಧ 62 ರನ್‌ಗಳ ಸೋಲುಂಡ ಮಿಥಾಲಿ ರಾಜ್ ಬಳಗ ಶನಿವಾರ 155 ರನ್‌ಗಳಿಂದ ಗೆದ್ದಿತು. ಇದು ವಿಶ್ವಕಪ್‌ನಲ್ಲಿ ತಂಡದ ಎರಡನೇ ಅತಿದೊಡ್ಡ ಗೆಲುವು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ತಂಡ ಅಗ್ರ ಸ್ಥಾನಕ್ಕೇರಿತು.

318 ರನ್‌ಗಳ ಜಯದ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಕೇವಲ 40.3 ಓವರ್‌ಗಳಲ್ಲಿ 162 ರನ್‌ಗಳಿಗೆ ಪತನ ಕಂಡಿತು. ಮೊದಲ ವಿಕೆಟ್‌ಗೆ 100 ರನ್‌ಗಳ ಜೊತೆಯಾಟವಾಡಿದ ಡಿಯಾಂಡ್ರ ದೊತಿನ್ ಮತ್ತು ಹೇಲಿ ಮ್ಯಾಥ್ಯೂಸ್ ವಿಂಡೀಸ್ ಬಳಗದಲ್ಲಿ ಭರವಸೆ ಮೂಡಿಸಿದ್ದರು. ದೊತಿನ್ ವಿಕೆಟ್ ಉರುಳಿಸುವ ಮೂಲಕ ಸ್ನೇಹ್ ರಾಣಾ ಭಾರತ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

ನಂತರ 12 ರನ್ ಸೇರಿಸುವಷ್ಟರಲ್ಲಿ ವೆಸ್ಟ್ ಇಂಡೀಸ್ ನಾಯಕಿ ಸ್ಟೆಫಾನಿ ಟೇಲರ್ ಸೇರಿದಂತೆ ಇಬ್ಬರ ವಿಕೆಟ್ ಕಳೆದುಕೊಂಡಿತು. ಈ ಎರಡೂ ವಿಕೆಟ್‌ಗಳು ಮೇಘನಾ ಸಿಂಗ್ ಅವರ ಪಾಲಾದವು. ಹೇಲಿ ಮ್ಯಾಥ್ಯೂ ಅವರ ವಿಕೆಟ್ ಕೂಡ ಕಬಳಿಸುವ ಮೂಲಕ ಸ್ನೇಹ್ ರಾಣಾ ವೆಸ್ಟ್ ಇಂಡೀಸ್‌ ತಂಡದ ಸಂಕಷ್ಟ ಮತ್ತಷ್ಟು ಹೆಚ್ಚಿಸಿದರು. ಮಧ್ಯಮ ಮತ್ತು ಕೆಳಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಆಗಲಿಲ್ಲ.

ಮಂದಾನ–ಹರ್ಮನ್‌ಪ್ರೀತ್ ದಾಖಲೆ ಜೊತೆಯಾಟ

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಸ್ಮೃತಿ ಮತ್ತು ಯಾಷ್ಟಿಕಾ ಭಾಟಿಯಾ ಉತ್ತಮ ಆರಂಭ ಒದಗಿಸಿದರು. ಆದರೆ ಯಾಷ್ಟಿಕಾ ಔಟಾದ ನಂತರ ಸತತವಾಗಿ ಮೂರು ವಿಕೆಟ್ ಉರುಳಿದವು. ಈ ಸಂದರ್ಭದಲ್ಲಿ ಜೊತೆಗೂಡಿದ ಸ್ಮೃತಿ ಮತ್ತು ಹರ್ಮನ್‌ಪ್ರೀತ್ ಕೌರ್ ಭರ್ಜರಿ ಆಟವಾಡಿದರು.

ಸ್ಮೃತಿ ವೈಯಕ್ತಿಕ ಐದನೇ ಶತಕ ಪೂರೈಸಿದರು. 123 ರನ್ ಗಳಿಸಲು ಅವರು ತೆಗೆದುಕೊಂಡದ್ದು ಕೇವಲ 119 ಎಸೆತ. 13 ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿದ ಅವರು ತಂಡದ ಮೊತ್ತ 250ರ ಗಡಿ ದಾಟಿದ ನಂತರ ಔಟಾದರು. 10 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 107 ಎಸೆತಗಳಲ್ಲಿ 109 ರನ್ ಗಳಿಸಿದ ಹರ್ಮನ್‌ಪ್ರೀತ್ ಕೌರ್ ನಾಲ್ಕನೇ ಶತಕದ ಸಾಧನೆ ಮಾಡಿದರು. 2017ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 171 ರನ್ ಗಳಿಸಿದ ನಂತರ ಕೌರ್ ಅವರ ಮೊದಲ ಶತಕ ಇದು.

ನಾಲ್ಕನೇ ವಿಕೆಟ್‌ಗೆ ಇವರಿಬ್ಬರು ಸೇರಿಸಿದ 184 ರನ್‌ಗಳು ವಿಶ್ವಕಪ್‌ನಲ್ಲಿ ಯಾವುದೇ ವಿಕೆಟ್‌ಗೆ ಭಾರತದ ಅತಿದೊಡ್ಡ ಜೊತೆಯಾಟವಾಗಿದೆ. 317 ರನ್‌ಗಳು ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಗರಿಷ್ಠ ಸ್ಕೋರ್ ಆಗಿದೆ.

ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್: ಜೂಲನ್ ದಾಖಲೆ

ವೆಸ್ಟ್ ಇಂಡೀಸ್‌ ತಂಡದ ಏಳನೇ ಕ್ರಮಾಂಕದ ಬ್ಯಾಟರ್ ಅನಿಸಾ ಮೊಹಮ್ಮದ್ ವಿಕೆಟ್ ಗಳಿಸುವ ಮೂಲಕ ಮಹಿಳೆಯರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಭಾರತದ ಜೂಲನ್ ಗೋಸ್ವಾಮಿ ತಮ್ಮದಾಗಿಸಿಕೊಂಡರು. ಇದು ವಿಶ್ವಕಪ್‌ನಲ್ಲಿ ಅವರ 40ನೇ ವಿಕೆಟ್‌.

ಆಸ್ಟ್ರೇಲಿಯಾದ ಲಿನೆಟ್ ಫುಲ್‌ಸ್ಟನ್ 39 ವಿಕೆಟ್‌ಗಳನ್ನು ಕಬಳಿಸಿ1988ರಲ್ಲಿ ದಾಖಲೆ ಬರೆದಿದ್ದರು. ಹಿಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಕ್ಯಾಟಿ ಮಾರ್ಟಿನ್ ವಿಕೆಟ್ ಗಳಿಸುವ ಮೂಲಕ ಜೂಲನ್ ಅವರು ಲಿನೆಟ್ ದಾಖಲೆಯನ್ನು ಸಮಗಟ್ಟಿದ್ದರು.

ಮಹಿಳಾ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದವರು

ಬೌಲರ್‌;ದೇಶ;ಪಂದ್ಯ;ವಿಕೆಟ್‌;ಆಡಿದ ಅವಧಿ

ಜೂಲನ್ ಗೋಸ್ವಾಮಿ;ಭಾರತ;31;40;2005-2022

ಲಿನೆಟ್ ಫುಲ್‌ಸ್ಟನ್;ಆಸ್ಟ್ರೇಲಿಯಾ;20;39;1982-1988

ಕರೋಲಿ ಹಾಜ್ಸ್‌;ಇಂಗ್ಲೆಂಡ್‌;24;37;1982-1993

ಕ್ಲೇರ್ ಟೇಲರ್;ಇಂಗ್ಲೆಂಡ್‌;26;36;1988-2005

ಕ್ಯಾಥ್ರಿನ್ ಫಿಜ್‌ಪ್ಯಾಟ್ರಿಕ್‌;ಆಸ್ಟ್ರೇಲಿಯಾ;25;33;1993-2005

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT