ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಲನ್ ಬೌಲಿಂಗ್‌ಗೆ ಒಲಿದ ಜಯ; ಭಾರತಕ್ಕೆ ಒಂಬತ್ತು ವಿಕೆಟ್‌ಗಳ ಭರ್ಜರಿ ಗೆಲುವು

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯ
Last Updated 9 ಮಾರ್ಚ್ 2021, 12:52 IST
ಅಕ್ಷರ ಗಾತ್ರ

ಲಖನೌ: ಅನುಭವಿ ವೇಗದ ಬೌಲರ್‌ ಜೂಲನ್ ಗೋಸ್ವಾಮಿ (42ಕ್ಕೆ 4) ಹಾಗೂ ಸ್ಮೃತಿ ಮಂದಾನ (ಔಟಾಗದೆ 80, 64 ಎಸೆತ) ಅವರ ಅಮೋಘ ಆಟ ಭಾರತಕ್ಕೆ ಗೆಲುವು ತಂದುಕೊಟ್ಟಿತು. ದಕ್ಷಿಣ ಆಫ್ರಿಕಾ ಎದುರು ಇಲ್ಲಿನ ಏಕಾನ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳ ಜಯಭೇರಿ ಮೊಳಗಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿದೆ.

ಮಿಥಾಲಿ ರಾಜ್‌ ನೇತೃತ್ವದ ಭಾರತ ತಂಡ ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ ಮಾಡಿದ ಪ್ರವಾಸಿ ಪಡೆ ಕೇವಲ 157 ರನ್‌ಗಳಿಗೆ ಸರ್ವಪತನವಾಯಿತು. 38 ವರ್ಷದ ಜೂಲನ್‌, ವೇಗಿ ಮಾನಸಿ ಜೋಷಿ (23ಕ್ಕೆ 2) ಹಾಗೂ ಸ್ಪಿನ್ನರ್‌ ರಾಜೇಶ್ವರಿ ಗಾಯಕವಾಡ್‌ (37ಕ್ಕೆ 3) ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಸಾಧಾರಣ ಗುರಿ ಪಡೆದ ಆತಿಥೇಯ ತಂಡದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಹಾಗೂ ಪೂನಂ ರಾವತ್ (ಔಟಾಗದೆ 62, 89 ಎಸೆತ, 8 ಬೌಂಡರಿ) ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 138 ರನ್ ಸೇರಿಸಿದರು. 29ನೇ ಓವರ್‌ನಲ್ಲಿ ಭಾರತ ಗೆಲುವಿನ ದಡ ಸೇರಿ ಸಂಭ್ರಮಿಸಿತು. ಇದರೊಂದಿಗೆ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತು.

ಸ್ಫೋಟಕ ಬ್ಯಾಟಿಂಗ್ ಮಾಡಿದ ಸ್ಮೃತಿ ಅವರ ಇನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್‌ಗಳಿದ್ದವು. ತಾವೆದುರಿಸಿದ ಮೊದಲ ಎರಡು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಅವರು ಎದುರಾಳಿ ತಂಡಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು.

ಭಾರತ ಇನಿಂಗ್ಸ್‌ನ ಐದನೇ ಓವರ್‌ನಲ್ಲಿ ಜೆಮಿಮಾ ರಾಡ್ರಿಗಸ್‌ (9) ವಿಕೆಟ್ ಕೈಚೆಲ್ಲಿದರು. ಈ ಹಂತದಲ್ಲಿ ಜೊತೆಗೂಡಿದ ಸ್ಮೃತಿ ಹಾಗೂ ಪೂನಂ ಸೊಗಸಾದ ಇನಿಂಗ್ಸ್ ಕಟ್ಟಿದರು. ಆಟಕ್ಕೆ ಕುದುರಿಕೊಳ್ಳಲುಪೂನಂ ಸ್ವಲ್ಪ ಸಮಯ ತೆಗೆದುಕೊಂಡರೆ, ಸ್ಮೃತಿ ಬೌಂಡರಿಗಳನ್ನು ಸಿಡಿಸತೊಡಗಿದರು. 20ನೇ ಓವರ್‌ನಲ್ಲಿ ಸ್ಮೃತಿ ಅರ್ಧಶತಕ ಪೂರೈಸಿದರು. ಅದೇ ಲಯದಲ್ಲಿ ಮುಂದುವರಿದು 29ನೇ ಓವರ್‌ನಲ್ಲಿ ಗೆಲುವಿನ ರನ್‌ ಗಳಿಸಿದರು.

ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ಪರ ಲಾರಾ ಗೂಡಾಲ್‌ (49) ಹಾಗೂ ನಾಯಕಿ ಸ್ಯೂನ್ ಲೂಸ್‌ (36) ಉತ್ತಮವಾಗಿ ಬ್ಯಾಟ್ ಬೀಸಿದರು. ಆದರೆ ಉಳಿದವರ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು.

ಸಂಕ್ಷಿಪ್ತ ಸ್ಕೋರು–

ದಕ್ಷಿಣ ಆಫ್ರಿಕಾ: 41 ಓವರ್‌ಗಳಲ್ಲಿ 157 (ಲಾರಾ ಗೂಡಾಲ್‌ 49, ಸ್ಯೂನ್ ಲೂಸ್ 36, ತ್ರಿಶಾ ಚೆಟ್ಟಿ 12, ಮಿಗ್ನನ್ ಡು ಪ್ರೀಜ್‌ 11; ಜೂಲನ್ ಗೋಸ್ವಾಮಿ 42ಕ್ಕೆ 4, ಮಾನಸಿ ಜೋಷಿ 23ಕ್ಕೆ 2, ರಾಜೇಶ್ವರಿ ಗಾಯಕವಾಡ್‌ 37ಕ್ಕೆ 3, ಹರ್ಮನ್‌ ಪ್ರೀತ್ ಕೌರ್ 1ಕ್ಕೆ 1).

ಭಾರತ: 28.4 ಓವರ್‌ಗಳಲ್ಲಿ 1 ವಿಕೆಟ್‌ಗೆ 160 (ಸ್ಮೃತಿ ಮಂದಾನ ಔಟಾಗದೆ 80, ಪೂನಂ ರಾವತ್‌ ಔಟಾಗದೆ 62; ಶಬ್ನಿಮ್ ಇಸ್ಮಾಯಿಲ್ 46ಕ್ಕೆ 1). ಫಲಿತಾಂಶ: ಭಾರತಕ್ಕೆ ಒಂಬತ್ತು ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ ಆಟಗಾರ್ತಿ: ಜೂಲನ್ ಗೋಸ್ವಾಮಿ.

ಮುಂದಿನ ಪಂದ್ಯ: ಮಾರ್ಚ್‌ 12, ಲಖನೌನದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT