ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಚಿಗುರಿದ ಕ್ರಿಕೆಟ್ ಅಂಗಣದ ಕನಸು

ಕೆಎಸ್‌ಸಿಎ ಎಲ್ಲ ರೀತಿಯಲ್ಲಿ ಸಜ್ಜಾಗಿದ್ದು ಜಾಗ ಗುರುತಿಸುವಿಕೆಗೆ ಅಡ್ಡಿಯಾಗಿದೆ: ಸಂತೋಷ್ ಮೆನನ್
Last Updated 4 ಆಗಸ್ಟ್ 2022, 5:19 IST
ಅಕ್ಷರ ಗಾತ್ರ

ಮಂಗಳೂರು: ಕ್ರಿಕೆಟ್‌ಗೆ ಸುಸಜ್ಜಿತ ಅಂಗಣದ ಕನಸು ಮಂಗಳೂರಿಗರಲ್ಲಿ ಮತ್ತೆ ಚಿಗುರೊಡೆದಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೆಲುವ ವರ್ಷಗಳಿಂದ ನಡೆಸುತ್ತಿರುವ ಪ್ರಯತ್ನಕ್ಕೆ ಈಗ ವೇಗ ತೊರೆತಿದ್ದು ಈ ಬಾರಿ ಕ್ರಿಕೆಟ್ ಅಂಗಣ ನಿರ್ಮಾಣಕ್ಕೆ ಶತಾಯಗತಾಯ ಪ್ರಯತ್ನ ನಡೆಸಲು ಮುಂದಾಗಿದೆ.

ಇದೇ 7ರಿಂದ ನಡೆಯಲಿರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟ್ವೆಂಟಿ20 ಕ್ರಿಕೆಟ್ ಟೂರ್ನಿಯ ಟ್ರೋಫಿ ಅನಾವರಣಕ್ಕಾಗಿ ಬುಧವಾರ ನಗರಕ್ಕೆ ಬಂದಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಗೌರವ ಕಾರ್ಯದರ್ಶಿ ಸಂತೋಷ್ ಮೆನನ್ ಅವರು ಕೆಎಸ್‌ಸಿಎ ಮಂಗಳೂರು ವಲಯದ ಪದಾಧಿಕಾರಿಗಳು ಮತ್ತು ಕ್ರಿಕೆಟ್ ಪ್ರೇಮಿಗಳ ಜೊತೆ ಚರ್ಚಿಸಿದ್ದಾರೆ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸ್ಥಳ ನೀಡಲು ಮನವಿ ಮಾಡಿದ್ದಾರೆ.

ಟ್ರೋಫಿ ಅನಾವರಣ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂತೋಷ್ ಮನೆನ್ ‘ಕ್ರೀಡಾಂಗಣ ನಿರ್ಮಿಸಲು ಕೆಎಸ್‌ಸಿಎ ಸಿದ್ಧವಾಗಿದೆ. ಆದರೆ ಜಾಗ ಗುರುತಿಸಲು ಅಥವಾ ಜಾಗದ ಲಭ್ಯತೆ ಕುರಿತು ತಿಳಿಯಲು ಈ ವರೆಗೆ ಸಾಧ್ಯವಾಗಲಿಲ್ಲ. ಈ ಬಾರಿ ಜಾಗವನ್ನು ನಿಗದಿ ಮಾಡಲಾಗುವುದು. ಎರಡು ವರ್ಷಗಳಲ್ಲಿ ಅಂಗಣ ಸಿದ್ಧವಾಗುವ ನಿರೀಕ್ಷೆ ಇದೆ’ ಎಂದರು.

ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಆಡುವ ಮಂಗಳೂರು ಯುನೈಟೆಡ್ ತಂಡವನ್ನು ಪ್ರಾಯೋಜಿಸುತ್ತಿರುವ ಫಿಜಾ ಸಮೂಹ ಸಂಸ್ಥೆಗಳ ಸ್ಥಾಪಕ ಎಂ.ಬಿ.ಫಾರೂಕ್ ಕೂಡ, ಒಂದೆರಡು ವರ್ಷಗಳಲ್ಲಿ ಕ್ರೀಡಾಂಗಣ ಸಜ್ಜಾಗಲಿದೆ ಎಂದರು.

ಮಂಗಳೂರು ವಲಯದ ಆಟಗಾರರಿಗೆ ಹೆಚ್ಚು ಪ್ರೋತ್ಸಾಹ ನೀಡಲು ಮಂಗಳೂರು ಯುನೈಟೆಡ್ ತಂಡದ ಆಡಳಿತ ಮುಂದಾಗಿದೆ. ಅದಕ್ಕೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದು ಅವರು ಹೇಳಿದರು.

ಮಹಾರಾಜ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ಮತ್ತು ಮೈಸೂರು ವಾರಿಯರ್ಸ್ ತಂಡಗಳು ಸೆಣಸಲಿವೆ. ಸ್ಟುವರ್ಟ್ ಬಿನ್ನಿ ಕೋಚ್ ಆಗಿರುವ ಮಂಗಳೂರು ಯುನೈಟೆಡ್‌ ಅನುಭವಿ ಆಟಗಾರರನ್ನು ಹೊಂದಿದೆ. ಆದ್ದರಿಂದ ನಿರೀಕ್ಷೆ ಗರಿಗೆದರಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಮೈಸೂರಿನಲ್ಲಿ ಇದೇ 7ರಂದು ಆರಂಭಗೊಳ್ಳಲಿರುವ ಟೂರ್ನಿಯನ್ನು ಸ್ಟಾರ್ ಸ್ಪೋರ್ಟ್ಸ್ ಚಾನಲ್ ನೇರ ಪ್ರಸಾರ ಮಾಡಲಿದೆ. ಮೊದಲ ಹಂತದ 18 ಪಂದ್ಯಗಳು ಮೈಸೂರಿನಲ್ಲೂ ಫೈನಲ್ ಸೇರಿದಂತೆ 16 ಪ‍ಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ನಡೆಯಲಿವೆ’ ಎಂದು ಸಂತೋಷ್ ಮೆನನ್ ವಿವರಿಸಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗೌರವ ಕಾರ್ಯದರ್ಶಿ ಸಂತೋಷ್ ಮೆನನ್, ಮಂಗಳೂರು ವಲಯ ಸಂಚಾಲಕ ಶೇಖರ್ ಶೆಟ್ಟಿ, ಮಂಗಳೂರು ಯುನೈಟೆಡ್ ವ್ಯವಸ್ಥಾಪಕ ಸೈಯದ್ ರಶೀದ್, ರತನ್‌, ಅರವಿಂದ್ ಮತ್ತಿತರರು ಇದ್ದರು.

ಕ್ರೀಡೆಯಿಂದ ಕೋಮು ಸಾಮರಸ್ಯ ಬೆಳೆಯಲಿ

ಕೋಮು ವೈಷಮ್ಯದಿಂದ ಕೊಲೆಗಳು ನಡೆಯುತ್ತಿರುವ ದಕ್ಷಿಣ ಕನ್ನಡದಲ್ಲಿ ಸಾಮರಸ್ಯ ಬೆಳೆಯಲು ಕ್ರೀಡ ನೆರವಾಗಲಿದೆ ಎಂದು ಎಂ.ಬಿ.ಫಾರೂಕ್ ಅಭಿಪ್ರಾಯಪಟ್ಟರು. ಮಂಗಳೂರು ತಂಡದ ಹೆಸರಿನಲ್ಲಿ ‘ಯುನೈಟೆಡ್‌’ ಇದೆ. ಎಲ್ಲರನ್ನೂ ಒಗ್ಗೂಡಿಸುವುದು ಇದರ ಆಶಯ. ಒಟ್ಟಾಗಿ ಆಟವಾಡಿ ಅಥವಾ ಆಟವನ್ನು ನೋಡಿ ಬೆಳೆದಾಗ ಸೌಹಾರ್ದವೂ ತುಂಬುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT