ತವರಿನಲ್ಲಿ ಅಶ್ವಿನ್‌ ಪಡೆ ಜಯಭೇರಿ

ಶುಕ್ರವಾರ, ಏಪ್ರಿಲ್ 26, 2019
21 °C
ಸ್ಟುವರ್ಟ್‌ ಬಿನ್ನಿ ಸ್ಫೋಟಕ ಆಟಕ್ಕೆ ಸಿಗದ ಯಶಸ್ಸು: ಕೆ.ಎಲ್‌.ರಾಹುಲ್‌ ಅರ್ಧಶತಕ

ತವರಿನಲ್ಲಿ ಅಶ್ವಿನ್‌ ಪಡೆ ಜಯಭೇರಿ

Published:
Updated:

ಮೊಹಾಲಿ: ಕನ್ನಡಿಗ ಕೆ.ಎಲ್‌.ರಾಹುಲ್‌ (52; 47ಎ, 3ಬೌಂ, 2ಸಿ) ಅರ್ಧಶತಕ ಮತ್ತು ನಾಯಕ ಆರ್‌.ಅಶ್ವಿನ್‌ ಆಲ್‌ರೌಂಡ್‌ ಆಟದಿಂದಾಗಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಮಂಗಳವಾರ ಐ.ಎಸ್‌.ಬಿಂದ್ರಾ ಕ್ರೀಡಾಂಗಣದಲ್ಲಿ ಸೇರಿದ್ದ ತವರಿನ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿತು.

ಆತಿಥೇಯರು 12 ರನ್‌ಗಳಿಂದ ರಾಜಸ್ಥಾನ್ ರಾಯಲ್ಸ್‌ ತಂಡವನ್ನು ಪರಾಭವಗೊಳಿಸಿದರು. ಇದರೊಂದಿಗೆ ಅಶ್ವಿನ್‌ ಬಳಗ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು. ಒಂಬತ್ತು ಪಂದ್ಯಗಳನ್ನು ಆಡಿರುವ ಈ ತಂಡ ಐದರಲ್ಲಿ ಗೆದ್ದು 10 ಪಾಯಿಂಟ್ಸ್‌ ಕಲೆಹಾಕಿದೆ.

ಮೊದಲು ಬ್ಯಾಟ್‌ ಮಾಡಿದ ಕಿಂಗ್ಸ್‌ ಇಲೆವನ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182ರನ್‌ ಕಲೆಹಾಕಿತು. ಸವಾಲಿನ ಗುರಿ ಬೆನ್ನಟ್ಟಿದ ರಾಯಲ್ಸ್‌ 7 ವಿಕೆಟ್‌ಗೆ 170ರನ್‌ ಗಳಿಸಲಷ್ಟೇ ಶಕ್ತವಾಯಿತು.

ರಾಯಲ್ಸ್‌ ಪರ ರಾಹುಲ್‌ ತ್ರಿಪಾಠಿ (50; 45ಎ, 4ಬೌಂ) ಅರ್ಧಶತಕ ಸಿಡಿಸಿ ಗಮನ ಸೆಳೆದರು. ಕೊನೆಯಲ್ಲಿ ಸ್ಟುವರ್ಟ್‌ ಬಿನ್ನಿ ಗರ್ಜಿಸಿದರು. ಕರ್ನಾಟಕದ ಬಿನ್ನಿ 11 ಎಸೆತಗಳಲ್ಲಿ ಅಜೇಯ 33ರನ್‌ ಬಾರಿಸಿದರು. 19 ನಿಮಿಷ ಕ್ರೀಸ್‌ನಲ್ಲಿದ್ದ ಅವರು ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ ಸಿಡಿಸಿದರು. ಹೀಗಿದ್ದರೂ ತಂಡ ಗೆಲುವಿನ ದಡ ಸೇರಲಿಲ್ಲ.

ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್‌ (30; 22ಎ, 2ಬೌಂ, 3ಸಿ) ವಿಕೆಟ್ ಬೇಗನೆ ಕಳೆದುಕೊಂಡಿತು. ನಂತರ ಕನ್ನಡಿಗರಾದ ರಾಹುಲ್ ಮತ್ತು ಮಯಂಕ್ ಅಗರವಾಲ್‌ (26; 12ಎ, 1ಬೌಂ, 2ಸಿ) ತಂಡದ ಮೊತ್ತ ಹೆಚ್ಚಿಸಿದರು.

ಅಗರವಾಲ್‌ ಔಟಾದ ನಂತರ ರಾಹುಲ್ ಜೊತೆಗೂಡಿದ ಡೇವಿಡ್ ಮಿಲ್ಲರ್ (40; 27ಎ, 2ಬೌಂ, 2ಸಿ) ಮೂರನೇ ವಿಕೆಟ್‌ಗೆ 85 ರನ್‌ ಸೇರಿಸಿದರು. 

ಕೊನೆಯಲ್ಲಿ ನಾಯಕ ಅಶ್ವಿನ್‌ ಅಬ್ಬರಿಸಿದರು. ನಾಲ್ಕು ಎಸೆತಗಳನ್ನು ಆಡಿದ ಅವರು ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಿತ 17ರನ್‌ ಗಳಿಸಿ ಅಜೇಯವಾಗುಳಿದರು. ಬೌಲಿಂಗ್‌ನಲ್ಲೂ ಅಶ್ವಿನ್‌ ಮಿಂಚಿದರು. ಎರಡು ವಿಕೆಟ್‌ ಪಡೆದು ತಂಡದ ಗೆಲುವಿನ ಹಾದಿ ಸುಗಮ ಮಾಡಿದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !