ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಗಳು

Last Updated 17 ಡಿಸೆಂಬರ್ 2020, 5:36 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ತಿಂಗಳು ಸೈಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಎಲೀಟ್ ಎ ಗುಂಪಿನ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.

ಜನವರಿ 10ರಿಂದ 31ರವರೆಗೆ ನಡೆಯಲಿರುವ ಟೂರ್ನಿಯ ಪಂದ್ಯಗಳು ಆರು ತಾಣಗಳಲ್ಲಿ ನಡೆಯಲಿವೆ. ಈ ಕುರಿತು ಮಾಹಿತಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಬಿಡುಗಡೆ ಮಾಡಿದ್ದಾರೆ.

ಎಲೀಟ್ ಎ ಗುಂಪಿನಲ್ಲಿ ಆತಿಥೇಯ ಕರ್ನಾಟಕ, ಜಮ್ಮು–ಕಾಶ್ಮೀರ, ಪಂಜಾಬ್, ಉತ್ತರಪ್ರದೇಶ, ರೈಲ್ವೆಸ್ ಮತ್ತು ತ್ರಿಪುರ ತಂಡಗಳು ಆಡಲಿವೆ. ಕೋಲ್ಕತ್ತದಲ್ಲಿ ಎಲೀಟ್ ಬಿ, ವಡೋದರಾದಲ್ಲಿ ಎಲೀಟ್ ಸಿ, ಇಂದೋರ್‌ನಲ್ಲಿ ಎಲೀಟ್ ಡಿ, ಮುಂಬೈನಲ್ಲಿ ಇಲೀಟ್ ಇ ಮತ್ತು ಚೆನ್ನೈನಲ್ಲಿ ಪ್ಲೇಟ್ ಗುಂಪಿನ ಪಂದ್ಯಗಳು ನಡೆಯಲಿವೆ. ತಂಡಗಳು ಜನವರಿ 2ರಂದು ಪಂದ್ಯದ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳಬೇಕು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ.

’ಇವತ್ತು ಬೆಳಿಗ್ಗೆ ಬಿಸಿಸಿಐ ಸೂಚನೆ ಲಭಿಸಿದೆ. ಎಲೀಟ್ ಎ ಗುಂಪಿನ ಪಂದ್ಯಗಳನ್ನು ಆಯೋಜಿಸಲು ನಮಗೆ ಹೊಣೆ ವಹಿಸಲಾಗಿದೆ. ಇದು ನಿರೀಕ್ಷಿತವೂ ಆಗಿತ್ತು. ನಾವು ಸಂಪೂರ್ಣ ಸಿದ್ಧರಾಗಿದ್ದೇವೆ. ಸುಸಜ್ಜಿತ ವ್ಯವಸ್ಥೆಗಳು ನಮ್ಮಲ್ಲಿವೆ. ಇಂದು ಸಭೆ ನಡೆಯಲಿದ್ದು, ಮೈದಾನಗಳು ಮತ್ತಿತರ ವಿಷಯಗಳನ್ನು ನಿಗದಿಪಡಿಸಲಾಗುವುದು‘ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ’ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ಫೆಬ್ರುವರಿಯಲ್ಲಿ ನಡೆಸಲು ಉದ್ದೇಶಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೇಗಾ ಹರಾಜು ಪ್ರಕ್ರಿಯೆಯ ಹಿನ್ನೆಲೆಯಲ್ಲಿ ದೇಶಿ ಟಿ20 ಟೂರ್ನಿಯನ್ನು ಮೊದಲು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಕೊರೊನಾ ವೈರಸ್‌ ಸೃಷ್ಟಿಸಿದ್ದ ಬಿಕ್ಕಟ್ಟಿನ ಕಾರಣದಿಂದಾಗಿ ಕಳೆದ ಮಾರ್ಚ್‌ನಿಂದ ದೇಶದಲ್ಲಿ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತವಾಗಿದ್ದವು. ಇದೀಗ ದೇಶಿ ಋತುವನ್ನು ಆರಂಭಿಸಲು ಮಂಡಳಿ ಮುಂದಡಿ ಇಟ್ಟಿದೆ. ಟೂರ್ನಿಯಲ್ಲಿ 38 ತಂಡಗಳು ಸ್ಪರ್ಧಿಸಲಿವೆ.

ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿ ಮತ್ತು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗಳ ಆಯೋಜನೆ ಕುರಿತು ಮಂಡಳಿಯು ಇನ್ನೂ ನಿರ್ಧರಿಸಿಲ್ಲ. ಆದರೆ, ಮುಷ್ತಾಕ್ ಅಲಿ ಟೂರ್ನಿಯ ಗುಂಪು ಹಂತದ ಪಂದ್ಯಗಳು ಮುಗಿಯುವ ವೇಳೆಗೆ ಉಳಿದ ಟೂರ್ನಿಗಳ ಕುರಿತು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ವಿಜಯ್ ಹಜಾರೆ ಮತ್ತು ರಣಜಿ ಟೂರ್ನಿಗಳನ್ನು ಸಂಘಟಿಸುವ ಕುರಿತು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ಮಂಡಳಿಯು ಅಭಿಪ್ರಾಯ ಸಂಗ್ರಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT