ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟಿ20| ಮಲೇಷ್ಯಾ ಎದುರು ಭಾರತ ಜಯಭೇರಿ: ಮೇಘನಾ, ಶಫಾಲಿ ಮಿಂಚು

ಮಹಿಳಾ ಟಿ20: ಮಲೇಷ್ಯಾ ಎದುರು ಭಾರತ ಜಯಭೇರಿ
Last Updated 3 ಅಕ್ಟೋಬರ್ 2022, 14:04 IST
ಅಕ್ಷರ ಗಾತ್ರ

ಸಿಲ್ಹೆಟ್‌, ಬಾಂಗ್ಲಾದೇಶ: ಆರಂಭಿಕ ಬ್ಯಾಟರ್‌ ಎಸ್‌.ಮೇಘನಾ(69 ರನ್‌, 53 ಎ., 4X11, 6X1) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ತಂಡದವರು ಏಷ್ಯಾ ಕಪ್‌ ಮಹಿಳಾ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದರು.

ಸಿಲ್ಜೆಟ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಡಕ್ವರ್ಥ್‌ ಲೂಯಿಸ್‌ ನಿಯಮದ ಆಧಾರದಲ್ಲಿ ಮಲೇಷ್ಯಾ ತಂಡವನ್ನು 30 ರನ್‌ಗಳಿಂದ ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 181 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಮಲೇಷ್ಯಾ 5.2 ಓವರ್‌ಗಳಲ್ಲಿ 2 ವಿಕೆಟ್‌ಗೆ 16 ರನ್‌ ಗಳಿಸಿದ್ದಾಗ ಮಳೆ ಬಂದು ಆಟ ನಿಂತಿತು. ಆ ಬಳಿಕ ಆಟ ಮುಂದುವರಿಯದ ಕಾರಣ ಡಕ್ವರ್ಥ್‌ ಲೂಯಿಸ್‌ ನಿಯಮದಂತೆ ಭಾರತವನ್ನು ವಿಜಯಿ ಎಂದು ಘೋಷಿಸಲಾಯಿತು.

ಈ ಗೆಲುವಿನ ಮೂಲಕ ಭಾರತ ತಂಡ ನಾಲ್ಕು ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಇಷ್ಟೇ ಪಾಯಿಂಟ್‌ ಹೊಂದಿರುವ ಪಾಕಿಸ್ತಾನ ಉತ್ತಮ ರನ್‌ರೇಟ್‌ ಆಧಾರದಲ್ಲಿ ಅಗ್ರಸ್ಥಾನಲ್ಲಿದೆ.

ಶತಕದ ಜತೆಯಾಟ: ಟಾಸ್‌ ಗೆದ್ದ ಮಲೇಷ್ಯಾ ತಂಡ, ಭಾರತವನ್ನು ಬ್ಯಾಟಿಂಗ್‌ಗೆ ಕಳುಹಿಸಿತು. ಮೇಘನಾ ಮತ್ತು ಶಫಾಲಿ ವರ್ಮಾ (46 ರನ್‌, 39 ಎ.) ಮೊದಲ ವಿಕೆಟ್‌ಗೆ 116 ರನ್‌ ಸೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಫಾರ್ಮ್‌ ಕಂಡುಕೊಳ್ಳಲು ಪರದಾಡುತ್ತಿದ್ದ ಶಫಾಲಿ ಕೊನೆಗೂ ಲಯ ಕಂಡುಕೊಂಡರು.

14 ರನ್‌ ಗಳಿಸಿದ್ದಾಗ ಜೀವದಾನ ಪಡೆದಿದ್ದ ಮೇಘನಾ, ಮಲೇಷ್ಯಾದ ಅನನುಭವಿ ಬೌಲಿಂಗ್‌ ದಾಳಿಯನ್ನು ಲೀಲಾಜಾಲವಾಗಿ ಎದುರಿಸಿದರು. ಮೊದಲ ಆರು ಓವರ್‌ಗಳಲ್ಲಿ ತಂಡ 47 ರನ್‌ ಪೇರಿಸಿತು. ಮಲೇಷ್ಯಾ ತಂಡದ ಕಳಪೆ ಫೀಲ್ಡಿಂಗ್‌ ಕೂಡಾ ಭಾರತದ ಮೊತ್ತ ಹೆಚ್ಚಲು ಕಾರಣವಾಯಿತು.

ಮೇಘನಾ ಅವರ ವಿಕೆಟ್‌ ಪಡೆದ ಎದುರಾಳಿ ತಂಡದ ನಾಯಕಿ ವಿನಿಫ್ರೆಡ್‌ ದುರೈಸಿಂಗಂ ಈ ಜತೆಯಾಟ ಮುರಿದರು. ರಿಚಾ ಘೋಷ್‌ (33 ರನ್‌, 19 ಎ.) ಕೊನೆಯಲ್ಲಿ ಬಿರುಸಿನ ಆಟವಾಡಿ ತಂಡದ ಮೊತ್ತ ಹೆಚ್ಚಿಸಿದರು. ಇತರರಿಗೆ ಅವಕಾಶ ನೀಡುವ ಉದ್ದೇಶದಿಂದ ಹರ್ಮನ್‌ಪ್ರೀತ್‌ ಮತ್ತು ಜೆಮಿಮಾ ರಾಡ್ರಿಗಸ್‌ ಅವರು ಮೇಲಿನ ಕ್ರಮಾಂಕದಲ್ಲಿ ಆಡಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 181 (ಎಸ್‌.ಮೇಘನಾ 69, ಶಫಾಲಿ ವರ್ಮಾ 46, ರಿಚಾ ಘೋಷ್‌ ಔಟಾಗದೆ 33, ವಿನಿಫ್ರೆಡ್‌ ದುರೈಸಿಂಗಂ 36ಕ್ಕೆ 2) ಮಲೇಷ್ಯಾ 5.2 ಓವರ್‌ಗಳಲ್ಲಿ 2 ವಿಕೆಟ್‌ಗೆ 16 (ಮಾಸ್‌ ಎಲೀಸಾ ಔಟಾಗದೆ 14, ದೀಪ್ತಿ ಶರ್ಮಾ 10ಕ್ಕೆ 1, ರಾಜೇಶ್ವರಿ ಗಾಯಕವಾಡ್‌ 6ಕ್ಕೆ 1) ಫಲಿತಾಂಶ: ಭಾರತಕ್ಕೆ 30 ರನ್‌ಗ ಗೆಲುವು (ಡಕ್ವರ್ಥ್‌ ಲೂಯಿಸ್‌ ನಿಯಮದಂತೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT