ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

WPL: ಯುಪಿ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ 42 ರನ್‌ ಜಯ

Published 7 ಮಾರ್ಚ್ 2024, 19:43 IST
Last Updated 7 ಮಾರ್ಚ್ 2024, 19:43 IST
ಅಕ್ಷರ ಗಾತ್ರ

ನವದೆಹಲಿ: ನಥಾಲಿಯಾ ಶಿವರ್‌ ಬ್ರಂಟ್‌ (45 ಮತ್ತು 14ಕ್ಕೆ2) ಅವರ ಆಲ್‌ರೌಂಡ್ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಗುರುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 42 ರನ್‌ಗಳ ಸುಲಭ ಜಯಪಡೆಯಿತು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗೆ 160 ರನ್‌ಗಳ ಸವಾಲಿನ ಮೊತ್ತ ಗಳಿಸಿತು. ನಂತರ ಶಿಸ್ತುಬದ್ಧ ದಾಳಿಯ ಮೂಲಕ ಯುಪಿ ವಾರಿಯರ್ಸ್ ತಂಡವನ್ನು 9 ವಿಕೆಟ್‌ಗೆ 120 ರನ್‌ಗಳಿಗೆ ಕಟ್ಟಿಹಾಕಿ ನಾಲ್ಕನೇ ಜಯ ದಾಖಲಿಸಿತು. ವಾರಿಯರ್ಸ್‌ಗೆ ಇದು ನಾಲ್ಕನೇ ಸೋಲು.

ವಾರಿಯರ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡದ ಆಟಗಾರ್ತಿ ದೀಪ್ತಿ ಶರ್ಮಾ (ಔಟಾಗದೇ 53, 36ಎ, 4x6, 6x2) ಮಾತ್ರ ಹೋರಾಟ ತೋರಿದರು. ಉಳಿದವರಾರೂ 20ರ ಗಡಿ ದಾಟಲಿಲ್ಲ. 15 ರನ್‌ಗಳಾಗುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ವಾರಿಯರ್ಸ್ ನಂತರ ಚೇತರಿಸಲಿಲ್ಲ. ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಸೈಕಾ ಇಶಾಖ್ ಮೂರು ವಿಕೆಟ್‌ಗಳನ್ನು ಪಡೆದರು.

ಮೊದಲು ಆಡಿದ್ದ ಮುಂಬೈ ತಂಡ 17 ರನ್‌ಗಳಾಗುವಷ್ಟರಲ್ಲಿ ಆರಂಭ ಆಟಗಾರ್ತಿಯರಾದ ಯಷ್ಟಿಕಾ ಭಾಟಿಯಾ ಮತ್ತು ಹೇಯ್ಲಿ ಮ್ಯಾಥ್ಯೂಸ್‌ ಅವರನ್ನು ಕಳೆದುಕೊಂಡಿತ್ತು. ಆಫ್ ಸ್ಪಿನ್ನರ್‌ ಚಮರಿ ಅಟಪಟ್ಟು ಈ ಎರಡೂ ವಿಕೆಟ್‌ಗಳನ್ನು ಪಡೆದಿದ್ದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರ್ತಿಯರು ತಂಡದ ನೆರವಿಗೆ ಬಂದರು.

ನಥಾಲಿಯಾ ಶಿವರ್ ಬ್ರಂಟ್‌  ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (33, 30ಎ, 4x4, 6x1) ಅವರು ಮೂರನೇ ವಿಕೆಟ್‌ಗೆ 59 ರನ್ ಸೇರಿಸಿ ಕುಸಿತ ತಡೆಗಟ್ಟಿದರು. ಆಕ್ರಮಣಕಾರಿಯಾಗಿ ಆಡಿದ ಶಿವರ್ ಬ್ರಂಟ್‌ ಎಂಟು ಬೌಂಡರಿಗಳನ್ನು ಬಾರಿಸಿದರು. 15ನೇ ಓವರ್‌ನಲ್ಲಿ ಹರ್ಮನ್‌ಪ್ರೀತ್ ಸ್ವೀಪ್‌ಮಾಡುವ ಯತ್ನದಲ್ಲಿ ಸೈಮಾ ಠಾಕೂರ್ ಅವರಿಗೆ ಬೌಲ್ಡ್‌ ಆದರು. ಅಮೇಲಿಯಾ ಕೆರ್‌ (23 ಎಸೆತಗಳಲ್ಲಿ 39) ಮತ್ತು ಉದಯೋನ್ಮುಖ ಆಟಗಾರ್ತಿ ಸಜೀವನ್ ಸಜನಾ (ಅಜೇಯ 22, 14 ಎಸೆತ) ಅವರು ತಂಡದ ಮೊತ್ತವನ್ನು ಮತ್ತಷ್ಟು ಏರಿಸಿದರು. ಕೊನೆಯ 26 ಎಸೆತಗಳಲ್ಲಿ 43 ರನ್‌ಗಳು ಬಂದವು.

ಸ್ಕೋರುಗಳು: ಮುಂಬೈ ಇಂಡಿಯನ್ಸ್‌: 20 ಓವರುಗಳಲ್ಲಿ 6 ವಿಕೆಟ್‌ಗೆ 160 (ನಥಾಲಿ ಶಿವರ್‌ ಬ್ರಂಟ್‌ 45, ಹರ್ಮನ್‌ ಪ್ರೀತ್ ಕೌರ್‌ 33, ಅಮೇಲಿಯಾ ಕೆರ್ 39, ಸಜೀವನ್ ಸಜನಾ ಔಟಾಗದೇ 22; ಚಮರಿ ಅಟಪಟ್ಟು 27ಕ್ಕೆ2); ಯುಪಿ ವಾರಿಯರ್ಸ್‌: 20 ಓವರುಗಳಲ್ಲಿ 9 ವಿಕೆಟ್‌ಗೆ 118 (ದೀಪ್ತಿ ಶರ್ಮಾ ಔಟಾಗದೇ 53, ಸೈಕಾ ಇಶಾಖ್ 27ಕ್ಕೆ3, ನಥಾಲಿಯಾ ಶಿವರ್ ಬ್ರಂಟ್ 14ಕ್ಕೆ2).

ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್‌ ನಥಾಲಿಯಾ ಶಿವರ್ ಬ್ರಂಟ್‌. ಪಿಟಿಐ ಚಿತ್ರ 
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್‌ ನಥಾಲಿಯಾ ಶಿವರ್ ಬ್ರಂಟ್‌. ಪಿಟಿಐ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT