ಬುಧವಾರ, ಅಕ್ಟೋಬರ್ 28, 2020
17 °C
ಕೋಲ್ಕತ್ತ ನೈಟ್‌ ರೈಡರ್ಸ್‌–ರಾಜಸ್ಥಾನ ರಾಯಲ್ಸ್‌ ಪಂದ್ಯ ಇಂದು: ಸಂಜು, ತೆವಾಟಿಯಾ, ಗಿಲ್ ಆಕರ್ಷಣೆ

ದುಬೈ ಅಂಗಳದಲ್ಲಿ ರನ್‌ ಸುರಿಮಳೆಯ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ರಾಜಸ್ಥಾನ ರಾಯಲ್ಸ್‌ ತಂಡದ ರಾಹುಲ್ ತೆವಾಟಿಯಾ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಹೊಡೆದು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಗೆಲುವನ್ನು ಕಸಿದುಕೊಂಡ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅದೇ ಹುಮ್ಮಸ್ಸಿನಲ್ಲಿ ಅವರು ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.

ಮಂಗಳವಾರ ರಾಜಸ್ಥಾನ ರಾಯಲ್ಸ್‌ ತಂಡವನ್ನು ಎದುರಿಸಲಿರುವ ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಬೌಲರ್‌ಗಳು ತೆವಾಟಿಯಾ ವಿಕೆಟ್ ಹಾರಿಸಲು ವಿಶೇಷ ಯೋಜನೆ ರೂಪಿಸುವುದು ಖಚಿತ. ಮೂರು ದಿನಗಳ ಹಿಂದಿನವರೆಗೂ ಯಾವುದೇ ಎದುರಾಳಿ ತಂಡವೂ ರಾಹುಲ್ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಶೆಲ್ಡನ್‌ ಕಾಟ್ರೆಲ್ ಅವರ ಎಸೆತಗಳನ್ನು ಬೆನ್ನುಬೆನ್ನಿಗೆ ಸಿಕ್ಸರ್‌ಗೆ ಎತ್ತಿದ ಹುಡುಗ ರಾಯಲ್ಸ್‌ಗೆ ಜಯದ ಹಾರ ಹಾಕಿದ್ದರು.

ಇವರಷ್ಟೇ ಅಲ್ಲ ರಾಜಸ್ಥಾನ ತಂಡದ ನಾಯಕ ಸ್ಟೀವನ್ ಸ್ಮಿತ್, ಸಂಜು ಸ್ಯಾಮ್ಸನ್ ಕೂಡ ಅವತ್ತು ಗರ್ಜಿಸಿದ್ದರು. ಸಂಜು ಅಂತೂ ಇದುವರೆಗಿನ ಎರಡೂ ಪಂದ್ಯಗಳಲ್ಲಿ ಮಿಂಚಿದ್ದಾರೆ. ಕಿಂಗ್ಸ್‌ ತಂಡವು ಕೊಟ್ಟಿದ್ದ 224 ರನ್‌ಗಳ ಗೆಲುವಿನ ಗುರಿ ತಲುಪಲು ಸಂಜು ಮತ್ತು ತೆವಾಟಿಯಾ ಆಟವೇ ಪ್ರಧಾನವಾಗಿತ್ತು. ವಿಕೆಟ್‌ಕೀಪಿಂಗ್‌ನಲ್ಲಿಯೂ ಸಂಜು ಸ್ಯಾಮ್ಸನ್ ಮಿಂಚಿದ್ದಾರೆ. ಕನ್ನಡಿಗ ರಾಬಿನ್ ಉತ್ತಪ್ಪ, ಯುವ ಆಟಗಾರ ಯಶಸ್ವಿ ಜೈಸ್ವಾಲ್ ಇನ್ನೂ ಲಯಕ್ಕೆ ಮರಳಬೇಕಷ್ಟೇ.

ಆದರೆ ತಂಡದ ವೇಗಿ ಜೋಫ್ರಾ  ಆರ್ಚರ್‌ ಬೌಲಿಂಗ್‌ನಲ್ಲಿ ದುಬಾರಿಯಾದರೂ, ಕೆಳಕ್ರಮಾಂಕದ ಬ್ಯಾಟಿಂಗ್‌ಗೆ ಬಲ ತುಂಬಿದ್ದಾರೆ. ಎತ್ತರದ ಸಿಕ್ಸರ್‌ಗಳನ್ನು ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ.

ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಕೂಡ ಅನುಭವಿ ವಿಕೆಟ್‌ಕೀಪರ್.  ಈ ತಂಡದಲ್ಲಿಯೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಕಲಿಗಳಿದ್ದಾರೆ. ಆ್ಯಂಡ್ರೆ ರಸೆಲ್, ಶುಭಮನ್ ಗಿಲ್, ನಿತೀಶ್ ರಾಣಾ, ಏಯಾನ್ ಆರ್ಗನ್, ಆಲ್‌ರೌಂಡರ್ ಸುನಿಲ್ ನಾರಾಯಣ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಹೋದ ಪಂದ್ಯದಲ್ಲಿ ಶುಭಮನ್ ಗೆಲುವಿನ ರೂವಾರಿಯಾಗಿದ್ದರು. ಈ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರಿಗೆ ಅವಕಾಶ ನೀಡುವರೇ ಕಾದು ನೋಡಬೇಕು. ಕೋಲ್ಕತ್ತ ತಂಡವು ಈ ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಗೆದ್ದು, ಇನ್ನೊಂದನ್ನು ಸೋತಿದೆ. ಆದರೆ ರಾಜಸ್ಥಾನ ರಾಯಲ್ಸ್‌ ಆಡಿದ ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸಿದೆ.

ಉಭಯ ತಂಡಗಳಲ್ಲಿಯೂ ಅಬ್ಬರದ ಆಟವಾಡುವ ಬ್ಯಾಟಿಂಗ್‌ ಪಡೆ ಇರುವುದರಿಂದ  ರನ್‌ಗಳ ಮಳೆಯೇ ಸುರಿಯುವ ನಿರೀಕ್ಷೆ ಗರಿಗೆದರಿದೆ.

ಅಂಕಿ ಸಂಖ್ಯೆ

ಮುಖಾಮುಖಿ

ಪಂದ್ಯಗಳು: 21

ಕೆಕೆಆರ್ ಜಯ: 10

ಆರ್‌ಆರ್‌ ಜಯ: 10

ಫಲಿತಾಂಶವಿಲ್ಲ: 1

ಪಂದ್ಯ ಆರಂಭ: ಸಂಜೆ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು