ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಫೈನಲ್: ವಿದರ್ಭಕ್ಕೆ ಕಠಿಣ ಗುರಿ ಒಡ್ಡಿದ ಮುಂಬೈ

Published 12 ಮಾರ್ಚ್ 2024, 13:36 IST
Last Updated 12 ಮಾರ್ಚ್ 2024, 13:36 IST
ಅಕ್ಷರ ಗಾತ್ರ

ಮುಂಬೈ: ಮುಂಬೈನ ಯುವ ಕ್ರಿಕೆಟಿಗ ಮುಷೀರ್ ಖಾನ್ ತಾಳ್ಮೆಯ ಶತಕ ಮತ್ತು ಅನುಭವಿ ಶ್ರೇಯಸ್ ಅಯ್ಯರ್ ಮಿಂಚಿನ ಬ್ಯಾಟಿಂಗ್‌ ಮುಂದೆ ವಿದರ್ಭ ತಂಡವು ಬಸವಳಿಯಿತು. 

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದ ಮೂರನೇ ದಿನದಾಟದಲ್ಲಿ ಮುಂಬೈ ತಂಡವು ವಿದರ್ಭಕ್ಕೆ 538 ರನ್‌ಗಳ ಗೆಲುವಿನ ಗುರಿಯೊಡ್ಡಿತು. ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿ ಇವೆ. ಆದರೆ ಅತ್ಯಂತ ತಾಳ್ಮೆ ಮತ್ತು ಕುಶಲತೆಯಿಂದ ಬ್ಯಾಟಿಂಗ್ ಮಾಡಿದರೆ ಮಾತ್ರ ವಿದರ್ಭ ತಂಡವು ಈ ಬೆಟ್ಟದಂತಹ ಸವಾಲು ಮೀರಿ ನಿಲ್ಲಬಹುದು. 

ಆದರೆ, 42ನೇ ಬಾರಿ ಚಾಂಪಿಯನ್ ಆಗುವ ತವಕದಲ್ಲಿರುವ ಮುಂಬೈ ಬೌಲಿಂಗ್ ಪಡೆಯು ಮೊದಲ ಇನಿಂಗ್ಸ್‌ನಲ್ಲಿ ವಿದರ್ಭ ತಂಡವನ್ನು 105 ರನ್‌ಗಳಿಗೆ ನಿಯಂತ್ರಿಸಿತ್ತು. ಅದೇ ಲಯವನ್ನು ಎರಡನೇ ಇನಿಂಗ್ಸ್‌ನಲ್ಲಿಯೂ ತೋರಿಸಿದರೆ ವಿದರ್ಭದ ಪ್ರಶಸ್ತಿ ಕನಸು ನುಚ್ಚುನೂರಾಗುವುದು ಖಚಿತ. ಪ್ರಥಮ ಇನಿಂಗ್ಸ್‌ನಲ್ಲಿ 224 ರನ್‌ ಗಳಿಸಿದ್ದ ಮುಂಬೈ ತಂಡವು  119 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ 418 ರನ್‌ ಗಳಿಸಿತು. 

ಗುರಿ ಬೆನ್ನಟ್ಟಿರುವ ವಿದರ್ಭ ತಂಡವು ಮೂರನೇ ದಿನದಾಟದ ಮುಕ್ತಾಯಕ್ಕೆ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 10 ರನ್ ಗಳಿಸಿದೆ. ಅಥರ್ವ ತೈಡೆ ಮತ್ತು ಧ್ರುವ ಶೋರೆ ಕ್ರೀಸ್‌ನಲ್ಲಿದ್ದಾರೆ.

ಸೋಮವಾರ ಸಂಜೆ ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಮುಷೀರ್ ಖಾನ್ (136; 326ಎ, 4X10) ಮತ್ತು  ಶ್ರೇಯಸ್ (95; 111ಎ, 4X10, 6X3)  ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 168 ರನ್ ಸೇರಿಸಿದರು. ಮುಷೀರ್ ಬ್ಯಾಟಿಂಗ್ ತಾಳ್ಮೆ ಮತ್ತು ಏಕಾಗ್ರತೆಯಿಂದ ಕೂಡಿತ್ತು. 94ನೇ ಓವರ್‌ನಲ್ಲಿ ತಮಗೆ ಸಿಕ್ಕ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡರು.  19 ವರ್ಷದ ಮುಷೀರ್ ಶತಕ ಗಳಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಅವರ ಎರಡನೇ ಶತಕ. ಮುಷೀರ್, ಈಚೆಗೆ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಅವರ ತಮ್ಮ.

ಇನ್ನೊಂದೆಡೆ ಶ್ರೇಯಸ್ ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. 80 ರನ್ ಗಳಿಸಿದ ನಂತರ ಅವರು ಶ್ರೇಯಸ್ ಸ್ವಲ್ಪ ನಿಧಾನವಾಗಿ ಆಡತೊಡಗಿದರು. ಅವರ ಓಟದ ವೇಗವೂ ಕಡಿಮೆಯಾಗಿತ್ತು. ತಂಡದ ಫಿಸಿಯೊ ಬಂದು ಅವರಿಗೆ ಸ್ನಾಯುಸೆಳೆತ ನಿವಾರಿಸುವ ಕೆಲವು ವ್ಯಾಯಾಮಗಳನ್ನು ಮಾಡಿಸಿ ಮರಳಿದರು. 

ಆದರೆ ಶ್ರೇಯಸ್ ತಮ್ಮ ಶತಕಕ್ಕೆ ಐದು ರನ್‌ಗಳ ಅಗತ್ಯವಿದ್ದಾಗ  ಆದಿತ್ಯ ಠಾಕರೆ ಎಸೆತವನ್ನು ಸಿಕ್ಸರ್‌ಗೆತ್ತುವ ಪ್ರಯತ್ನ ಮಾಡಿದರು. ಆದರೆ ಲಾಂಗ್‌ ಆನ್‌ನಲ್ಲಿದ್ದ ಅಮನ್ ಮೋಖಡೆ ಕ್ಯಾಚ್ ಪಡೆಯುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ. 

ಮುಷೀರ್ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿಯೂ ಮಿಂಚಿದ್ದರು. ನಾಯಕ ಅಜಿಂಕ್ಯ  (73; 143ಎ, 4X5, 6X1) ಅವರೊಂದಿಗೆ 130 ರನ್ ಗಳಿಸಿದ್ದರು. ಮುಷೀರ್ ಔಟಾದ ನಂತರ ಕೊನೆಯ ಹಂತದಲ್ಲಿ ಶಮ್ಸ್ ಮುಲಾನಿ (ಔಟಾಗದೆ 50; 85ಎ, 4X6) ಕೂಡ ಮಿಂಚಿದರು. 

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಮುಂಬೈ: 64.3 ಓವರ್‌ಗಳಲ್ಲಿ 224. ವಿದರ್ಭ: 45.3 ಓವರ್‌ಗಳಲ್ಲಿ 105. ಎರಡನೇ ಇನಿಂಗ್ಸ್: ಮುಂಬೈ: 130.2 ಓವರ್‌ಗಳಲ್ಲಿ 418 (ಮುಷೀರ್ ಖಾನ್ 136, ಅಜಿಂಕ್ಯ ರಹಾನೆ 73, ಶ್ರೇಯಸ್ ಅಯ್ಯರ್ 95, ಶಮ್ಸ್ ಮುಲಾನಿ ಔಟಾಗದೆ 50, ಯಶ್ ಠಾಕೂರ್ 79ಕ್ಕೆ3, ಹರ್ಷ ದುಬೆ 144ಕ್ಕೆ5) ವಿದರ್ಭ: 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 10 (ಅಥರ್ವ ತೈಡೆ ಬ್ಯಾಟಿಂಗ್ 3, ಧ್ರುವ ಶೋರೆ ಬ್ಯಾಟಿಂಗ್ 7) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT