ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರನ್ನೂ ವೈಯಕ್ತಿಕವಾಗಿ ನಿಂದಿಸಿಲ್ಲ: ವೆಂಕಟೇಶ್ ಪ್ರಸಾದ್

Published 10 ಸೆಪ್ಟೆಂಬರ್ 2023, 14:18 IST
Last Updated 10 ಸೆಪ್ಟೆಂಬರ್ 2023, 14:18 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಟಿಕೆಟ್ ಮಾರಾಟ ಮತ್ತು ವೇಳಾಪಟ್ಟಿಯನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸುವ ಅಗತ್ಯವಿತ್ತು ಎಂದಷ್ಟೇ ಹೇಳಿದ್ದೆ. ಈ ವಿಷಯದಲ್ಲಿ ಯಾರನ್ನೂ ವೈಯಕ್ತಿಕವಾಗಿ ನಿಂದಿಸಿಲ್ಲ’ ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಮುಂದಿನ ತಿಂಗಳು ಆರಂಭವಾಗುವ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದ ಕೆಲವು ದಿನಗಳ ನಂತರ ಪರಿಷ್ಕರಿಸಲಾಗಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಣ ಹಣಾಹಣಿ ಸೇರಿದಂತೆ ಒಂಬತ್ತು ಪಂದ್ಯಗಳ ದಿನಾಂಕ ಬದಲಿಸಲಾಗಿತ್ತು. ಅಹಮದಾಬಾದಿನಲ್ಲಿ ನಡೆಯುವ ಭಾರತ ಮತ್ತು ಪಾಕ್ ಪಂದ್ಯವು ಮೊದಲು ಅಕ್ಟೋಬರ್ 15ರಂದು ಆಯೋಜನೆಯಾಗಿತ್ತು. ಆ ಸಂದರ್ಭದಲ್ಲಿ ನವರಾತ್ರಿ ಆರಂಭವಾಗುವ ಕಾರಣದಿಂದ ಅ.14ಕ್ಕೆ ಹಿಂದೂಡಲಾಯಿತು.

ಭಾರತ ತಂಡದ ಮಾಜಿ ಮಧ್ಯಮವೇಗಿ ಪ್ರಸಾದ್, ಶನಿವಾರ ಎಕ್ಸ್‌ (ಟ್ವಿಟರ್) ಖಾತೆಯಲ್ಲಿ  ಸರಣಿ ಸಂದೇಶಗಳನ್ನು ಹಾಕಿದ್ದರು. ಅದರಲ್ಲಿ ಬಿಸಿಸಿಐ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಒಬ್ಬ ಭ್ರಷ್ಟ ಹಾಗೂ ಅಹಂಕಾರದ ವ್ಯಕ್ತಿಯಿಂದಾಗಿ ಹಲವರು ಅಪಾರ ಪರಿಶ್ರಮ ಹಾಗೂ ಪ್ರಾಮಾಣಿಕವಾಗಿ ಕಟ್ಟಿದ ಸಂಸ್ಥೆಯ ವ‌ರ್ಚಸ್ಸು ನಾಶವಾಗುತ್ತದೆ. ಇದರ ಪರಿಣಾಮ ದೊಡ್ಡ ಮಟ್ಟದವರೆಗೂ ಆಗುತ್ತದೆ. ರಾಜಕೀಯ, ಕ್ರೀಡೆ, ಪತ್ರಿಕೋದ್ಯಮ, ಕಾರ್ಪೋರೆಟ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಇದೇ ರೀತಿ ಇರುವುದು ಸತ್ಯ‘ ಎಂದು  ಉಲ್ಲೇಖಿಸಿದ್ದರು.

ಆದರೆ ಅವರ ಸಂದೇಶದಲ್ಲಿ ಯಾರ ಹೆಸರೂ ಇರಲಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ಸಂದೇಶಗಳು ಹರಿದಾಡಿದ್ದವು.

ಈ ಕುರಿತು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಪ್ರಸಾದ್, 'ವೈಯಕ್ತಿಕವೇನಿಲ್ಲ. ಅವಲೋಕನ ಮಾತ್ರ‘ ಎಂದರು.

‘ಜೀವನದ ವಿವಿಧ ಹಂತಗಳಲ್ಲಿ ಇರುವ ಭ್ರಷ್ಟತೆಯ ಬಗ್ಗೆ ಹೇಳಿದ್ದೆ. ಅದು ವಿಮಾನಯಾನ ಉದ್ಯಮ, ಬ್ಯಾಂಕಿಂಗ್, ಮತ್ತು ಐಪಿಎಲ್ ಫ್ರ್ಯಾಂಚೈಸಿ ಕೂಡ ನಿಷೇಧವಾಗಿದ್ದಿರಬಹುದು. ಇನ್ನುಳಿದ ಟ್ವೀಟ್‌ಗಳಲ್ಲಿ ನಾನು ಟಿಕೆಟ್‌ ಮಾರಾಟದ ಕುರಿತಾಗಿತ್ತು. ಬಿಸಿಸಿಐ  ಟಿಕೆಟ್‌ ಮತ್ತು ವೇಳಾಪಟ್ಟಿ ನಿರ್ವಹಣೆ ಕುರಿತು ಟೀಕಿಸಿದ್ದೆ‘ ಎಂದು ಹೇಳಿದರು.

ತಮಗೆ ಬಿಸಿಸಿಐನಲ್ಲಿ ಯಾವುದೇ ಸ್ಥಾನಗಳು ಸಿಕ್ಕಿಲ್ಲವೆಂಬ ಕಾರಣಕ್ಕೆ ಈ ರೀತಿ ಟೀಕಿಸುತ್ತಿದ್ದೀರಾ ಎಂಬುದನ್ನು ಪ್ರಸಾದ್ ಅಲ್ಲಗಳೆದರು. 

‘ನನ್ನ ವೈಯಕ್ತಿಕವೇನೂ ಇಲ್ಲ. ಜನರು ವ್ಯವಸ್ಥೆಯ ಕುರಿತು ಮಾತನಾಡುತ್ತಿರುವುದನ್ನು ನಾನು ಉಲ್ಲೇಖಿಸಿದ್ದೇನೆ ಅಷ್ಟೇ‘ ಎಂದಿದ್ದಾರೆ.

ಅವರು ಈ ಹಿಂದೆ ಭಾರತ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಅಲ್ಲದೇ ರಾಷ್ಟ್ರೀಯ ಜೂನಿಯರ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು.

1996 ಮತ್ತು 1999ರ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡದ ವಿರುದ್ಧದ ಗೆಲುವುಗಳಲ್ಲಿ ಪ್ರಸಾದ್ ಮಹತ್ವದ ಕಾಣಿಕೆ ನೀಡಿದ್ದರು.

ತಮ್ಮ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದ ಫ್ಯಾಕ್ಟ್‌ ಚೆಕ್ಕರ್  ಮೊಹಮ್ಮದ್ ಜುಬೇರ್ ಅವರು ಕೀಳು ಭಾಷೆ ಬಳಸಿದ್ದಾರೆಂದೂ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT