ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ಟ್ರೋಫಿ ಗೆಲ್ಲುವ ವಿಶ್ವಾಸ

ಕೆಪಿಎಲ್‌ ಟೂರ್ನಿ: ಮೈಸೂರು ವಾರಿಯರ್ಸ್‌ ತಂಡದ ಆಟಗಾರರ ಪರಿಚಯ
Last Updated 9 ಆಗಸ್ಟ್ 2018, 12:11 IST
ಅಕ್ಷರ ಗಾತ್ರ

ಮೈಸೂರು: ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿರುವ ಮೈಸೂರು ವಾರಿಯರ್ಸ್‌ ತಂಡ ಈ ಬಾರಿಯ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲಿದೆ ಎಂದು ನಾಯಕ ಜೆ.ಸುಚಿತ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಕೆಪಿಎಲ್‌ ಏಳನೇ ಆವೃತ್ತಿಯ ಟೂರ್ನಿಗೆ ತಂಡದ ಆಟಗಾರರ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ‘ಮ್ಯಾಚ್‌ ವಿನ್ನರ್‌’ಗಳನ್ನು ಹೊಂದಿರುವ ತಂಡ ಸಮತೋಲನದಿಂದ ಕೂಡಿದೆ. ಈ ಹಿಂದಿನ ವರ್ಷಗಳಲ್ಲಿ ಟ್ರೋಫಿ ಗೆದ್ದ ತಂಡದಲ್ಲಿದ್ದ 5–6 ಆಟಗಾರರು ಈ ಬಾರಿ ವಾರಿಯರ್ಸ್‌ ತಂಡದಲ್ಲಿದ್ದಾರೆ. ಸಂಘಟಿತ ಹೋರಾಟ ನೀಡುವಲ್ಲಿ ಯಶಸ್ವಿಯಾದರೆ ಕಪ್‌ ಜಯಿಸುವುದು ಕಷ್ಟವಲ್ಲ ಎಂದರು.

ವಾರಿಯರ್ಸ್‌ ತಂಡವನ್ನು ಈ ಬಾರಿ ಸುಚಿತ್‌ ಮುನ್ನಡೆಸಲಿದ್ದಾರೆ. ಆಲ್‌ರೌಂಡರ್‌ ಆಗಿರುವ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪರ ಆಡುತ್ತಿದ್ದಾರೆ.

ಅನುಭವ ಹಂಚಿಕೊಳ್ಳುವೆ: ‘ಭಾರತ ತಂಡ ಮತ್ತು ಐಪಿಎಲ್‌ನ ಕೆಲವು ತಂಡಗಳಿಗೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದೇನೆ. ಆ ವೇಳೆ ಪಡೆದಿರುವ ಅನುಭವವನ್ನು ತಂಡದ ಕೋಚ್‌ ಹಾಗೂ ಆಟಗಾರರ ಜತೆ ಹಂಚಿಕೊಳ್ಳುವೆ’ ಎಂದು ತಂಡದ ಸಲಹೆಗಾರ ವೆಂಕಟೇಶ್ ಪ್ರಸಾದ್ ಹೇಳಿದರು.

ವಾರಿಯರ್ಸ್‌ ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರಿದ್ದಾರೆ. ಐಪಿಎಲ್‌ನಲ್ಲಿ ಮತ್ತು ಕಳೆದ ಕೆಲ ವರ್ಷಗಳಿಂದ ಕೆಪಿಎಲ್‌ನಲ್ಲಿ ಆಡುತ್ತಿರುವವರು ತಂಡದಲ್ಲಿದ್ದಾರೆ. ಆಟಗಾರರು ಕಳೆದ ಕೆಲ ದಿನಗಳಿಂದ ಕಠಿಣ ಅಭ್ಯಾಸ ನಡೆಸುತ್ತಿದ್ದು, ಟೂರ್ನಿಗೆ ಸಜ್ಜಾಗುತ್ತಿದ್ದಾರೆ ಎಂದರು.

ಕೋಚ್‌ ಆರ್.ಎಕ್ಸ್‌.ಮುರಳೀಧರ ಮಾತನಾಡಿ, ವೆಂಕಟೇಶ್‌ ಪ್ರಸಾದ್‌ ಅವರು ತಂಡವನ್ನು ಸೇರಿಕೊಂಡಿರುವುದರಿಂದ ಹೆಚ್ಚಿನ ಬಲ ಬಂದಿದೆ. ಅವರ ಅಪಾರ ಅನುಭವ ಆಟಗಾರರ ನೆರವಿಗೆ ಬರಲಿದೆ. ಉತ್ತಮ ಆಲ್‌ರೌಂಡರ್‌ಗಳನ್ನು ಹೊಂದಿರುವುದು ಸಕಾರಾತ್ಮಕ ಅಂಶ ಎಂದು ಹೇಳಿದರು.

ತಂಡದ ಮಾಲೀಕ ಅರ್ಜುನ್‌ ರಂಗ ಮಾತನಾಡಿ, ವೆಂಕಟೇಶ್ ಪ್ರಸಾದ್ ಅವರು ಸಲಹೆಗಾರರಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆಟಗಾರರು ಟೂರ್ನಿಗೆ ಸಜ್ಜಾಗುತ್ತಿದ್ದಾರೆ ಎಂದು ತಿಳಿಸಿದರು.

ಕಳೆದ ಬಾರಿ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಬಲ ಇರಲಿಲ್ಲ. ಈ ಸಲ ಶೋಯಬ್‌ ಮ್ಯಾನೇಜರ್‌, ಕೆ.ವಿ.ಸಿದ್ಧಾರ್ಥ್‌ ಅವರು ತಂಡಕ್ಕೆ ಬಂದಿದ್ದಾರೆ. ಅರ್ಜುನ್‌ ಹೊಯ್ಸಳ, ರಾಜೂ ಭಟ್ಕಳ್‌, ಅಮಿತ್‌ ವರ್ಮಾ ಅವರಂತಹ ಅನುಭವಿಗಳು ಇದ್ದಾರೆ ಎಂದು ಹೇಳಿದರು.

ವಾರಿಯರ್ಸ್‌ ತಂಡ 2014 ರಲ್ಲಿ ಕೆಪಿಎಲ್‌ನಲ್ಲಿ ಮೊದಲ ಬಾರಿ ಪಾಲ್ಗೊಂಡಿತ್ತು. ಅದೇ ವರ್ಷ ಚಾಂಪಿಯನ್‌ ಆಗಿ ಸ್ಮರಣೀಯ ಸಾಧನೆ ತನ್ನದಾಗಿಸಿಕೊಂಡಿತ್ತು.

ತಂಡದ ಸಹಮಾಲೀಕ ಪವನ್ ರಂಗ, ಮ್ಯಾನೇಜರ್ ಎಂ.ಆರ್‌.ಸುರೇಶ್, ಎನ್‌.ಆರ್‌.ಸಮೂಹದ ಪಾಲುದಾರರಾದ ಕಿರಣ್‌ ರಂಗ, ಅನಿರುದ್ಧ್ ರಂಗ, ಕೆಎಸ್‌ಸಿಎ ವ್ಯವಸ್ಥಾಪಕ ಸಮಿತಿ ಸದಸ್ಯ ಎ.ವಿ.ಶಶಿಧರ್‌, ಮೈಸೂರು ವಲಯ ನಿಮಂತ್ರಕ ಬಾಲಚಂದರ್, ತಂಡದ ಸಹಾಯಕ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT