ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಕ್ರಿಕೆಟ್‌ನಲ್ಲಿ ಬೆಳಗಾವಿಯ ನರೇಂದ್ರ ಮಿಂಚು

ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೂರ್ನಿಗೆ ಆಯ್ಕೆ
Last Updated 18 ಜೂನ್ 2019, 19:45 IST
ಅಕ್ಷರ ಗಾತ್ರ

ನಿಪ್ಪಾಣಿ: ಇಲ್ಲಿನ ಕ್ರಿಕೆಟ್ ಪ್ರತಿಭೆ 30 ವರ್ಷದ ನರೇಂದ್ರ ಮಾಂಗೊರೆ, ಮುಂಬರುವ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಅಂಗವಿಕಲರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬಾಳಕೃಷ್ಣ–ಶೋಭಾ ಮಾಂಗೊರೆ ದಂಪತಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್‌ ತಾಲ್ಲೂಕಿನ ಜೈನ್ಯಾಳ ಗ್ರಾಮದವರು. ಪುತ್ರನ ಶಿಕ್ಷಣಕ್ಕಾಗಿ ಬಂದು ಇಲ್ಲಿನ ನಿವಾಸಿಗಳಾದರು. ಸದ್ಯ ಶಿವಾಜಿನಗರದ ಬಡಮಂಜಿ ಪ್ಲಾಟ್‌ನಲ್ಲಿದ್ದಾರೆ. ನಿವೃತ್ತ ಸೈನಿಕರಾದ ತಂದೆ ಈಗ ಕಿರಾಣಿ ಅಂಗಡಿ ನಡೆಸುತ್ತಿದ್ದು ಇದೇ ಅವರ ಬದುಕಿಗೆ ಆಸರೆಯಾಗಿದೆ. ನರೇಂದ್ರ ಕೆಎಲ್ಇ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ, ನಂತರ ದೇವಚಂದ್‌ ಕಾಲೇಜಿನಲ್ಲಿ ಪಿಯುಸಿ, ಬಿಎಸ್ಸಿ ಪದವಿ ಪೂರೈಸಿದ್ದಾರೆ.

4 ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ನರೆಂದ್ರ ಉತ್ತಮ ಪ್ರದರ್ಶನ ನೀಡಿದ್ದರು. ಈಚೆಗೆ ಎಐಸಿಎಪಿಸಿ (ಅಂಗವಿಕಲರ ಅಖಿಲ ಭಾರತ ಕ್ರಿಕೆಟ್ ಒಕ್ಕೂಟ) ಮುಂಬೈನಲ್ಲಿ ಅಜಿತ್ ವಾಡೇಕರ್ ಸ್ಮಾರಕ ಟ್ರೋಫಿ ಕ್ರಿಕೆಟ್ ಟೂರ್ನಿ ಏರ್ಪಡಿಸುವ ಮೂಲಕ ಅಂತಿಮ ಹಂತದ ತಂಡದ ಆಯ್ಕೆ ಪ್ರಕ್ರಿಯೆ ನಡೆಸಿದೆ. ವಿಕ್ರಾನ್ ಕೆನಿ ನಾಯಕತ್ವದಲ್ಲಿ 16 ಜನರ ತಂಡ ಪ್ರಕಟಿಸಲಾಗಿದೆ.

‘ಇಲ್ಲಿನ ಟಾಪ್‌–ಸ್ಟಾರ್‌ ಕ್ಲಬ್‌ ನನ್ನ ಗುರು. ಇದು ನನಗೆ ಕ್ರಿಕೆಟ್‌ನ ಪಾಠ ಕಲಿಸಿದೆ. ಈ ವಿಶ್ವಕಪ್‌ನಲ್ಲಿ ನನ್ನ ಸಾಮರ್ಥ್ಯ ತೋರಿಸಿ ಭಾರತಕ್ಕೆ ಪ್ರಶಸ್ತಿ ತರುವುದಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ’ ಎಂದು ನರೇಂದ್ರ ತಿಳಿಸಿದರು. ಅವರಿಗೆ ಭಾರತದ ಮುಖ್ಯ ತಂಡಕ್ಕೆ ಆಯ್ಕೆಯಾಗಬೇಕು ಎನ್ನುವ ಬಯಕೆಯೂ ಇದೆ.

ಪೋಷಕರು ಅವರಿಗೆ ಬೆನ್ನೆಲುಬಾಗಿದ್ದಾರೆ. ‘ಮನೆಯಲ್ಲಿರುವ ಕೆಲ ವಸ್ತುಗಳು ಕ್ರಕೆಟ್‌ ಆಟದಿಂದಲೇ ಬಂದಿದ್ದು’ ಎಂದು ತಂದೆ ಅಭಿಮಾನದಿಂದ ಹೇಳುತ್ತಾರೆ. ಬೆಳಗಾವಿಯಲ್ಲಿ ನಡೆದ ಪಂದ್ಯಗಳಲ್ಲಿ ಉತ್ತಮ ಆಟದಿಂದಾಗಿ ಮ್ಯಾನ್‌ ಆಫ್‌ ದಿ ಸೀರಿಸ್, ಮ್ಯಾನ್‌ ಆಫ್‌ ದಿ ಮ್ಯಾಚ್‌, ಬೆಸ್ಟ್‌ ಬ್ಯಾಟ್ಸ್‌ಮನ್‌, ಬೆಸ್ಟ್ ಬೌಲರ್ ಮೊದಲಾದ ಪ್ರಶಸ್ತಿಗಳೊಂದಿಗೆ 2 ದ್ವಿಚಕ್ರವಾಹನಗಳು, 3 ಬೈಸಿಕಲ್‌ಗಳು, ಟಿ.ವಿ. ಮೊದಲಾದವುಗಳನ್ನು ನರೇಂದ್ರ ಗೆದ್ದಿದ್ದಾರೆ.

‘ಓದಿನ ನಂತರ ಮೆಡಿಕಲ್ ರೆಪ್ರಸೆಂಟೇಟಿವ್ ಆಗಿದ್ದೆ. ಅಭ್ಯಾಸ ಮಾಡಲು ಸಮಯ ಬೇಕಾಗಿರುವುದರಿಂದ ಕೆಲಸ ಬಿಟ್ಟಿದ್ದೇನೆ. ವಿಶ್ವಕಪ್‌ ಪಂದ್ಯದ ನಂತರ ಯಾವುದಾರೂ ಕೆಲಸಕ್ಕೆ ಸೇರಬೇಕು ಎಂದುಕೊಂಡಿದ್ದೇನೆ’ ಎಂದು ತಿಳಿಸಿದ ಅವರು ದೇಶದ ತಂಡಕ್ಕಾಗಿ ಆಡುವ ತವಕದಲ್ಲಿದ್ದಾರೆ.

2016–17ರಲ್ಲಿ ಕೆಪಿಎಲ್‌ನಲ್ಲೂ ಇವರು ಆಡಿದ್ದಾರೆ. ಡಿಸೆಂಬರ್‌ನಲ್ಲಿ ಅಪ್ಘಾನಿಸ್ತಾನ್ ತಂಡದ ವಿರುದ್ಧ ನಡೆದ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ 3–0ಯಿಂದ ಭಾರತ ಗೆದ್ದಿತ್ತು. ಆಗ ನರೇಂದ್ರ ಸರಣಿ ಶ್ರೇಷ್ಠ ಹಾಗೂ 3ನೇ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. ಅವರು ದಕ್ಷಿಣ ವಲಯ ತಂಡದ ನಾಯಕರೂ ಆಗಿದ್ದರು. ರಾಜ್ಯ ತಂಡ ಪ್ರತಿನಿಧಿಸಿ ಅಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ.

‘2012ರಲ್ಲಿ ಬೆಳಗಾವಿಯಲ್ಲಿ ವಲಯಮಟ್ಟದ ಟೂರ್ನಿಯಲ್ಲಿ 40 ಓವರ್‌ಗಳ ಪಂದ್ಯದಲ್ಲಿ 234 ರನ್‌ಗಳನ್ನು ಬಾರಿಸಿದ್ದೆ. ಅದು ನನ್ನ ಇಲ್ಲಿವರೆಗಿನ ಉತ್ತಮ ಇನ್ನಿಂಗ್ಸ್‌ ಆಗಿದೆ. ದೇಶದ ತಂಡದಲ್ಲಿ ಆಡುವ ನನಗೆ ಸರ್ಕಾರದಿಂದ ನೌಕರಿ ಸಿಕ್ಕರೆ ಸಾಕು’ ಎಂದು ಪ್ರತಿಕ್ರಿಯಿಸಿದರು. ಸಂಪರ್ಕಕ್ಕೆ ಮೊ: 8147814742.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT