ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್ ಹುದ್ದೆಗೆ ಆಸ್ಟ್ರೇಲಿಯಾ ಆಟಗಾರರನ್ನು ಸಂಪರ್ಕಿಸಿಲ್ಲ: ಶಾ

Published 24 ಮೇ 2024, 12:43 IST
Last Updated 24 ಮೇ 2024, 12:43 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್  ನೇಮಕಕ್ಕೆ ಆಸ್ಟ್ರೇಲಿಯಾದ ಮಾಜಿ ಆಟಗಾರರನ್ನು ಸಂಪರ್ಕಿಸಿಲ್ಲ. ಈ ಕುರಿತು ಕೇಳಿಬರುತ್ತಿರುವ ಮಾತುಗಳು ಸತ್ಯಕ್ಕೆ ದೂರವಾಗಿವೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಧಾನ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ನಂತರ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿಯು ಮುಕ್ತಾಯವಾಗಲಿದೆ.  ಹೊಸ ಕೋಚ್ ನೇಮಕ ಮಾಡಲು ಬಿಸಿಸಿಐ ಈಚೆಗೆ ಅರ್ಜಿಯನ್ನೂ ಆಹ್ವಾನಿಸಿದೆ. ರಾಹುಲ್ ದ್ರಾವಿಡ್ ಅವರು ಕೂಡ ಪುನರಾಯ್ಕೆ ಬಯಸಿದರೆ  ಅರ್ಜಿ ಸಲ್ಲಿಸಬಹುದು ಎಂದೂ ಈಚೆಗೆ ಶಾ ಹೇಳಿದ್ದರು. 

ಆದರೆ ತಂಡಕ್ಕೆ ವಿದೇಶಿ ಕೋಚ್ ನೇಮಕ ಮಾಡುವ ಒಲವು ಹೆಚ್ಚಿದ್ದು ಆಸ್ಟ್ರೇಲಿಯಾದ ಕೆಲ ಆಟಗಾರರನ್ನು   ಬಿಸಿಸಿಐ ಸಂಪರ್ಕಿಸಿದೆ ಎಂಬ ಮಾತುಗಳೂ ಕೇಳೀಬಂದಿದ್ದವು. 

ಇದನ್ನು ತಳ್ಳಿ ಹಾಕಿರುವ ಜಯ್ ಶಾ, ‘ನಾನು ಅಥವಾ ಬಿಸಿಸಿಐನಿಂದ ಯಾರೂ ಆಸ್ಟ್ರೇಲಿಯಾ ಕ್ರಿಕೆಟಿಗರೊಂದಿಗೆ ಕೋಚ್ ಹುದ್ದೆಗೆ ಆಹ್ವಾನಿಸಿಲ್ಲ. ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ಈ ರೀತಿಯ ಸುದ್ದಿಗಳು ಸರಿಯಲ್ಲ’ ಎಂದು ಸ್ಪಷ್ಟಪಡಿಸಿದರು.

ಆಸ್ಟ್ರೇಲಿಯಾದ ಜಸ್ಟೀನ್ ಲ್ಯಾಂಗರ್ ಹಾಗೂ ರಿಕಿ ಪಾಂಟಿಂಗ್ ಅವರು ಈಗಾಗಲೇ ತಾವು ಭಾರತ ತಂಡದ ಕೋಚ್ ಹುದ್ದೆಯ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಐಪಿಎಲ್‌ನಲ್ಲಿ ಪಾಂಟಿಂಗ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲ್ಯಾಂಗರ್ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಕೋಚ್ ಆಗಿದ್ದಾರೆ. 

‘ಭಾರತ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸುವವರಿಗೆ ಇಲ್ಲಿಯ ಕ್ರಿಕೆಟ್‌ ಕುರಿತು ಸಂಪೂರ್ಣ ಅರಿವು ಇರಬೇಕು. ದೇಶಿ ಕ್ರಿಕೆಟ್‌ ಬಗ್ಗೆ ಆಳವಾದ ಜ್ಞಾನ ಅಗತ್ಯ. ಭಾರತದ ಕ್ರಿಕೆಟ್ ವ್ಯವಸ್ಥೆಯನ್ನು ಸರಿಯಾಗಿ ತಿಳಿದುಕೊಂಡವರನ್ನು ಆಯ್ಕೆ ಮಾಡುವುದರತ್ತ ನಮ್ಮ ಗಮನ ಕೇಂದ್ರಿತವಾಗಿದೆ’ ಎಂದು ಶಾ ಸ್ಪಷ್ಟಪಡಿಸಿದ್ಧಾರೆ. 

ತಮಗೆ ಕೋಚ್ ಆಗಲು ಬಂದ ಆಹ್ವಾನವನ್ನು ತಿರಸ್ಕರಿಸಿರುವುದಾಗಿ ಪಾಂಟಿಂಗ್ ಹೇಳಿದ್ದರು. 

‘ನನ್ನ ಜೀವನಶೈಲಿಗೆ ಭಾರತ ತಂಡದ ಮುಖ್ಯ ಕೋಚ್ ಕಾರ್ಯನಿರ್ವಹಣೆ ಹೊಂದುವುದಿಲ್ಲ. ದೀರ್ಘ ಸಮಯದವರೆಗೆ ಕುಟುಂಬದಿಂದ ದೂರ ಇರುವುದು ಕಷ್ಟ‘ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT