ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಸಿಎಸ್‌ಕೆ: ಮುಂದಿನ ಪಂದ್ಯಕ್ಕೂ ಲುಂಗಿ ಗಿಡಿ, ಜೇಸನ್ ಅಲಭ್ಯ

Last Updated 11 ಏಪ್ರಿಲ್ 2021, 10:32 IST
ಅಕ್ಷರ ಗಾತ್ರ

ಮುಂಬೈ: ಜೋಶ್ ಹ್ಯಾಜಲ್‌ವುಡ್ ಅವರ ಅನುಪಸ್ಥಿತಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 14ನೇ ಆವೃತ್ತಿಯಲ್ಲಿ ತಂಡದ ಮೊದಲ ಪಂದ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್‌ ಸ್ಟೀಫನ್ ಫ್ಲೆಮಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ರಾತ್ರಿ ನಡೆದ ಟೂರ್ನಿಯ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಏಳು ವಿಕೆಟ್‌ಗಳಿಂದ ಮಣಿಸಿತ್ತು. ಜೋಶ್ ಹ್ಯಾಜಲ್‌ವುಡ್, ಜೇಸನ್ ಬೆಹ್ರಂಡರ್ಫ್‌ ಮತ್ತು ಲುಂಗಿ ಗಿಡಿ ಅವರಿಲ್ಲದ ಕಾರಣ ವಿದೇಶಿ ವೇಗಿಗಳ ಅನುಭವ ತಂಡಕ್ಕೆ ಲಭಿಸದೇ ಹೋಯಿತು ಎಂದು ಹೇಳಿದ ಫ್ಲೆಮಿಂಗ್‌ ಅವರು ಜೇಸನ್ ಮತ್ತು ಲುಂಗಿ ಗಿಡಿ ಮುಂದಿನ ಪಂದ್ಯಕ್ಕೂ ಲಭ್ಯ ಇಲ್ಲ ಎಂದರು.

ಮುಂಬರುವ ಅಂತರರಾಷ್ಟ್ರೀಯ ಟೂರ್ನಿಗಳಿಗೆ ಸಜ್ಜಾಗುವುದಕ್ಕಾಗಿ ಹ್ಯಾಜಲ್‌ವುಡ್ ದಿಢೀರ್ ಆಗಿ ಐಪಿಎಲ್‌ನಿಂದ ಹಿಂದೆ ಸರಿದಿದ್ದರು. ಅವರ ಬದಲಿಗೆ ಜೇಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಅವರು ಇನ್ನೂ ಭಾರತಕ್ಕೆ ಬಂದು ತಲುಪಲಿಲ್ಲ. ‍ಪಾಕಿಸ್ತಾನ ಎದುರಿನ ಏಕದಿನ ಸರಣಿ ಮುಗಿಸಿ ಬಂದಿರುವ ದಕ್ಷಿಣ ಆಫ್ರಿಕಾದ ಲುಂಗಿ ಗಿಡಿ ತಡವಾಗಿ ಬಂದು ಕ್ವಾರಂಟೈನ್‌ನಲ್ಲಿದ್ದಾರೆ.

ಶನಿವಾರ 189 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 19ನೇ ಓವರ್‌ನಲ್ಲಿ ಗೆಲುವಿನ ನಗೆಸೂಸಿತ್ತು. ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಆರಂಭಿಕ ಜೋಡಿ ಪೃಥ್ವಿ ಶಾ ಮತ್ತು ಶಿಖರ್ ಧವನ್ ಗೆಲುವಿನ ರೂವಾರಿಗಳಾಗಿದ್ದರು.

ಈ ಬಾರಿಯ ಟೂರ್ನಿಯಲ್ಲಿ ಯಾವುದೇ ತಂಡಕ್ಕೆ ತವರಿನಲ್ಲಿ ಪಂದ್ಯಗಳನ್ನು ಆಡುವ ಅವಕಾಶವಿಲ್ಲ. ಈ ಕುರಿತು ಮಾತನಾಡಿದ ಫ್ಲೆಮಿಂಗ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕೂಡ ತವರಿನಾಚೆಗಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪರದಾಡಿತ್ತು ಎಂದರು.

‘ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಎಲ್ಲ ತಂಡಗಳು ಪ್ರಯತ್ನಿಸಬೇಕು. ನಮ್ಮ ತಂಡ ಮುಂದಿನ ನಾಲ್ಕು ಪಂದ್ಯಗಳಿಗೆ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗಿದೆ. ಹಾಗೆಂದು ನಮ್ಮ ಸಾಮರ್ಥ್ಯ ಕುಗ್ಗಿದೆ ಎಂದರ್ಥವಲ್ಲ. ಯಾರೂ ಹಾಗೆ ತಿಳಿದುಕೊಳ್ಳುವುದು ಬೇಡ’ ಎಂದು ಅವರು ಎಚ್ಚರಿಕೆ ನೀಡಿದರು.

ಮೊದಲ ಪಂದ್ಯದಲ್ಲಿ 36 ಎಸೆತಗಳಲ್ಲಿ 54 ರನ್ ಗಳಿಸಿದ ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರನ್ನು ಶ್ಲಾಘಿಸಿದ ಫ್ಲೆಮಿಂಗ್ ‘ಅಮೋಘ ಇನಿಂಗ್ಸ್‌ ಆಡಿಸುರೇಶ್ ರೈನಾ ಭರವಸೆ ಮೂಡಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT