ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ನಲ್ಲೂ ಅಭ್ಯಾಸ: ಭಾರತ ತಂಡಕ್ಕೆ ಅನುಮತಿ

Last Updated 22 ಅಕ್ಟೋಬರ್ 2020, 14:34 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಕಡ್ಡಾಯ ಕ್ವಾರಂಟೈನ್ ಅವಧಿಯಲ್ಲೂ ಅಭ್ಯಾಸ ಮಾಡಲು ನ್ಯೂ ಸೌತ್ ವೇಲ್ಸ್ ಸರ್ಕಾರ ಗುರುವಾರ ಅನುಮತಿ ನೀಡಿದೆ. ಹೀಗಾಗಿ ಏಕದಿನ ಮತ್ತು ಟ್ವೆಂಟಿ ಕ್ರಿಕೆಟ್ ಸರಣಿಗೆ ಆತಿಥ್ಯ ವಹಿಸಲು ಸಿಡ್ನಿ ಮತ್ತು ಕ್ಯಾನ್‌ಬೆರಾ ಸಜ್ಜಾಗಿವೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಆಟಗಾರರು ಕೂಡ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಅವರಿಗೂ ಈ ಅವಧಿಯಲ್ಲಿ ಅಭ್ಯಾಸ ಮಾಡಲು ಅನಮತಿ ನೀಡುವ ಕುರಿತು ನ್ಯೂ ಸೌತ್‌ವೇಲ್ಸ್ ಸರ್ಕಾರ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿವೆ ಎಂದು ಎಎಸ್‌ಪಿಎನ್ ಕ್ರಿಕ್ ಇನ್ಫೊ ವೆಬ್‌ಸೈಟ್ ವರದಿ ಮಾಡಿದೆ.

ಭಾರತ ತಂಡವು ಬ್ರಿಸ್ಬೇನ್‌ನಲ್ಲಿ ವಿಮಾನ ಇಳಿದು ಆ ನಗರದಲ್ಲೇ ಕ್ವಾರಂಟೈನ್‌ಗೆ ಒಳಗಾಗುವ ಯೋಜನೆ ಇತ್ತು. ಆದರೆ 14 ದಿನಗಳ ಕ್ವಾರಂಟೈನ್ ನಿಯಮಗಳಲ್ಲಿ ಯಾವುದೇ ಸಡಿಲಿಕೆ ಸಾಧ್ಯವಿಲ್ಲ ಮತ್ತು ಆ ಸಂದರ್ಭದಲ್ಲಿ ಅಭ್ಯಾಸಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಕ್ವೀನ್ಸ್‌ಲ್ಯಾಂಡ್‌ನ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರಿಂದ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿತ್ತು. ‌

ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಭಾರತ ತಂಡ ತಲಾ ಮೂರು ಏಕದಿನ ಮತ್ತು ಟ್ವೆಂಟಿ–20, ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮೊದಲ ಎರಡು ಏಕದಿನ ಪಂದ್ಯಗಳು ನವೆಂಬರ್ 27 ಮತ್ತು 29ರಂದು ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹಾಗೂ ಮೂರನೇ ಪಂದ್ಯ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಡೆಯಲಿದೆ. ಮೊದಲ ಟ್ವೆಂಟಿ–20 ಪಂದ್ಯವನ್ನೂ ಅದೇ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು. ಮುಂದಿನ ಎರಡು ಪಂದ್ಯಗಳಿಗೆ ಸಿಡ್ನಿ ಆತಿಥ್ಯ ವಹಿಸಲಿದೆ.

ಪಿಂಕ್ ಬಾಲ್ ಟೆಸ್ಟ್‌ ಡಿಸೆಂಬರ್ 17ರಿಂದ ಅಡಿಲೇಡ್‌ನಲ್ಲಿ ನಡೆಯಲಿದೆ. ಡಿಸೆಂಬರ್ 26ರಿಂದ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ ಮೆಲ್ಬರ್ನ್‌ನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆಯಾದರೂ ಕೋವಿಡ್‌–19 ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಈ ಪಂದ್ಯವೂ ಅಡಿಲೇಡ್‌ನಲ್ಲೇ ನಡೆಯಲಿದೆ. ಹೊಸವರ್ಷದ ಟೆಸ್ಟ್ ಪಂದ್ಯವನ್ನು ಜನವರಿ ಏಳರಿಂದಸಿಡ್ನಿಯಲ್ಲಿ ನಡೆಸಲು ನಿರ್ಧರಿಸಲಾಗಿದ್ದು ಕೊನೆಯ ಪಂದ್ಯ ಜನವರಿ 15ರಿಂದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಬಿಸಿಸಿಐ ಅನುಮತಿ ನೀಡಿದ ನಂತರವಷ್ಟೇ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT