ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಲಿಂಪಿಕ್ ಪದಕ ಜಯ ಊರನ್ನೇ ಬದಲಿಸಬಲ್ಲದು

ಕುಸ್ತಿಪಟು ಸಾಕ್ಷಿ ಮಲಿಕ್ ಅಭಿಮತ
Published 6 ಜುಲೈ 2024, 15:41 IST
Last Updated 6 ಜುಲೈ 2024, 15:41 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಯಾವುದೇ ಒಲಿಂಪಿಕ್ ಪದಕ ಜಯಿಸುವುದು ಕೇವಲ ಆ ಅಥ್ಲೀಟ್‌ ಕನಸಾಗಿರುವುದಿಲ್ಲ. ಅದು ಪೂರ್ಣ ಕುಟುಂಬದ ಕನಸಾಗಿರುತ್ತದೆ. ಆ ಗೆಲುವು ವಿಜೇತರ ಜೀವನವನ್ನಷ್ಟೇ ಅಲ್ಲ. ಆ ಕ್ರೀಡಾಪಟುವಿನ ಕುಟುಂಬ, ಸಮಾಜ ಮತ್ತು ಊರಿನ ಪರಿವರ್ತನೆಗೆ  ಪ್ರಭಾವ ಬೀರುತ್ತದೆ ಎಂದು ಒಲಿಂಪಿಯನ್ ಕುಸ್ತಿಪಟು ಸಾಕ್ಷಿ ಮಲಿಕ್ ಅಭಿಪ್ರಾಯಪಟ್ಟರು. 

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಜಯಿಸಿದ್ದರು. ಆ ಮೂಲಕ ಮಹಿಳೆಯರ ವಿಭಾಗದಲ್ಲಿ ಕುಸ್ತಿಯಲ್ಲಿ ಒಲಿಂಪಿಕ್ ಪದಕ ಗೆದ್ದ ಭಾರತೀಯ ಕುಸ್ತಿಪಟುವಾಗಿದ್ದರು. ಮುಂಬೈನಲ್ಲಿ ಶನಿವಾರ 'ಒಲಿಂಪಿಕ್ ಪದಕ, ಕನಸು‘ ಕಾರ್ಯಕ್ರಮವನ್ನು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ ಅಕಾಡೆಮಿ ಅಯೋಜಿತ್ತು. ಈ ಸಂದರ್ಭದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. 

‘ನಾನು ಒಲಿಂಪಿಕ್ ಪದಕ ಜಯಿಸಿದ ನಂತರ ನಮ್ಮ ಊರಿನಲ್ಲಿಯೂ ಗಮನಾರ್ಹ ಬದಲಾವಣೆಗಳಾದವು. ನಾನು ಅಭ್ಯಾಸ ಮಾಡುತ್ತಿದ್ದ ಚೋಟು ರಾಮ್ ಕ್ರೀಡಾಂಗಣದಲ ಕುಸ್ತಿ ಅಂಕಣಕ್ಕೆ ತಗಡಿನ  ಛಾವಣಿ ಇತ್ತು. ಇದೀಗ ಅದು ನವೀಕರಣಗೊಂಡಿದೆ. ವಾತಾನುಕೂಲಿತ ಸೌಲಭ್ಯವನ್ನು ಕಲ್ಪಿಸಲಾಗಿದೆ. ನನ್ನ ತವರು ಗ್ರಾಮದಲ್ಲಿಯೂ ಕ್ರೀಡಾಂಗಣ ಕಟ್ಟಿಸಲಾಗಿದೆ. ಅದಕ್ಕೆ ನನ್ನ ಹೆಸರನ್ನೇ ಇಡಲಾಗಿದೆ. ಒಂದು ಒಲಿಂಪಿಕ್ ಪದಕವು ಮಕ್ಕಳಿಗೆ ಬಹಳಷ್ಟು  ಅವಕಾಶಗಳನ್ನು ಸೃಷ್ಟಿಸುತ್ತದೆ‘ ಎಂದರು. 

‘ಹರಿಯಾಣದಲ್ಲಿ ಕುಸ್ತಿಯ ಬಗೆಗಿನ ಆಸಕ್ತಿ ದುಪ್ಪಟ್ಟಾಗಿದೆ. ಕುಸ್ತಿ ತರಬೇತಿ ಕ್ರೀಡಾಂಗಣಗಳೂ ಹೆಚ್ಚಾಗಿವೆ. ಹತ್ತು ನಿಮಿಷಗಳ ಪ್ರಯಾಣದ ಅಂತರದಲ್ಲಿ ಒಂದೊಂದು ತರಬೇತಿ ಕೇಂದ್ರಗಳು ಲಭ್ಯ ಇವೆ. ಬಹುತೇಕ ಎಲ್ಲ ಕೇಂದ್ರಗಳಲ್ಲಿಯೂ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಕುಸ್ತಿ ಕಲಿಕೆಯಲ್ಲಿ ನಿರತರಾಗಿರುವುದನ್ನು ಕಾಣಬಹುದು’ ಎಂದು ಸಾಕ್ಷಿ ಹೇಳಿದರು. 

‘ಹಿಂದಿನ ಕಾಲದಲ್ಲಿ ಮಹಿಳೆಯರು ಕುಸ್ತಿ ಆಡಬಾರದು. ಅವರು ಕುಸ್ತಿ ಕಲಿಕೆಗೆ ಅರ್ಹರಲ್ಲ ಎಂಬ ಭಾವನೆಯಿತ್ತು.  ಈಗ ಕಾಲ ಬದಲಾಗಿದೆ. ಮಹಿಳೆಯರು ಕುಸ್ತಿಯಲ್ಲಿಯೂ ಉನ್ನತ ಸಾಧನೆ ಮಾಡುತ್ತಿದ್ದಾರೆ. ದೇಶಕ್ಕೆ ಕೀರ್ತಿ ತರುತ್ತಿದ್ದಾರೆ’ ಎಂದು ಸಾಕ್ಷಿ ಅಭಿಪ್ರಾಯಪಟ್ಟರು. 

ಇದೇ ತಿಂಗಳು ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಕುಸ್ತಿ ತಂಡದಲ್ಲಿ 6 ಮಂದಿ ಸ್ಥಾನ ಪಡೆದಿದ್ದಾರೆ. ವಿನೇಶಾ ಫೋಗಾಟ್ (50 ಕೆ.ಜಿ), ಅಂತಿಮ ಪಂಘಾಲ್ (53 ಕೆ.ಜಿ), ಅನ್ಷು ಮಲಿಕ್ (57 ಕೆ.ಜಿ), ನಿಶಾ ದಹಿಯಾ (68 ಕೆ.ಜಿ) ಮತ್ತು ರೀತಿಕಾ ಹೂಡಾ (76 ಕೆ.ಜಿ)  ಈ ತಂಡದಲ್ಲಿದ್ದಾರೆ. 

‘ಇದೇ ಮೊದಲ ಬಾರಿಗೆ ನಮ್ಮ ದೇಶದಿಂದ ಐದಕ್ಕೂ  ಹೆಚ್ಚು ಮಹಿಳಾ ಕುಸ್ತಿಪಟುಗಳು  ಒಲಿಂಪಿಕ್ಸ್‌ಗೆ ತೆರಳುತ್ತಿದ್ಧಾರೆ. ಹುಡುಗಿಯರು ಈಗ ಕುಸ್ತಿ ಕೋಟಾದಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದರ ಬಗ್ಗೆ ಮಾತ್ರ ಯೋಚಿಸುತ್ತಿಲ್ಲ. ಅದಕ್ಕಿಂತಲೂ ಮುಂದೆ ಹೋಗಿ ಒಲಿಂಪಿಕ್ ಕೂಟಗಳಲ್ಲಿ ಪದಕ ಜಯಿಸುವುದರ ಗುರಿ ಇಟ್ಟುಕೊಳ್ಳುತ್ತಿದ್ದಾರೆ’ ಎಂಧೂ ಸಾಕ್ಷಿ ಹೇಳಿದರು. 

ಈ ಸಂದರ್ಭದಲ್ಲಿ ಹಾಜರಿದ್ದ ಒಲಿಂಪಿಯನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್, ‘ನಾನು ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಬಂದ ನಂತರ ನಮ್ಮ ತ್ರಿಪುರಾ ರಾಜ್ಯದಲ್ಲಿಯೂ ಜಿಮ್ನಾಸ್ಟಿಕ್ಸ್‌ ಕ್ರೀಡೆಯ ಆಕರ್ಷಣೆ ಹೆಚ್ಚಿದೆ. ಜಿಮ್ನಾಸ್ಟಿಕ್ಸ್‌ ಕ್ರೀಡೆಯ ಬಗ್ಗೆ ಇದ್ದ ಕೆಲವು ತಪ್ಪು ಕಲ್ಪನೆಗಳು ದೂರವಾಗಿ ಮಕ್ಕಳು ಈಗ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿದ್ದಾರೆ. ಬಹಳಷ್ಟು ತರಬೇತಿ ಕೇಂದ್ರಗಳೂ ಆರಂಭವಾಗಿವೆ’ ಎಂದರು.

2016ರಲ್ಲಿ ಅವರು ಮಹಿಳೆಯರ ಜಿಮ್ನಾಸ್ಟಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. 

ಕರ್ನಾಟಕದ ಅಥ್ಲೀಟ್ ಪ್ರಿಯಾ ಮೋಹನ್  ಅವರು ಈ ಕಾರ್ಯಕ್ರಮದಲ್ಲಿ ಮಾತನಾಡಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT