ಬೌಲಿಂಗ್ ಕೋಚ್ ಭರತ್ ಅರುಣ್‌ಗೆ ವಿದಾಯ ಪಂದ್ಯ

ದುಬೈ: ಭಾರತ ಮತ್ತು ನಮೀಬಿಯಾ ನಡುವಿನ ಸೋಮವಾರದ ಹಣಾಹಣಿ ವಿರಾಟ್ ಕೊಹ್ಲಿ ಬಳಗದ ಬೌಲಿಂಗ್ ಕೋಚ್ ಭರತ್ ಅರುಣ್ ಅವರಿಗೆ ವಿದಾಯ ಪಂದ್ಯ ಆಗಲಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ ಮಾತನಾಡಿದ ಅವರು ಟಾಸ್ ಸೋತಿರುವುದು ಮತ್ತು ತಿಂಗಳುಗಟ್ಟಲೆ ಬಯೊಬಬಲ್‌ನಲ್ಲಿ ಕಳೆದುದು ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.
‘ಐಪಿಎಲ್ ಮತ್ತು ಟ್ವೆಂಟಿ–20 ವಿಶ್ವಕಪ್ ಟೂರ್ನಿ ನಡುವೆ ಬಿಡುವು ಇರಲಿಲ್ಲ. ಆಟಗಾರರು ಆರು ತಿಂಗಳಿಂದ ತಮ್ಮ ಮನೆಗಳಿಗೆ ಹೋಗಿಲ್ಲ. ಇದು ಅವರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿರಬಹುದು. ಐಪಿಎಲ್ ನಂತರ ಒಂದಷ್ಟು ವಿಶ್ರಾಂತಿ ಸಿಕ್ಕಿದ್ದರೆ ಭಾರತದ ಆಟಗಾರರಿಗೆ ಅನುಕೂಲ ಆಗುತ್ತಿತ್ತು’ ಎಂದು ಅವರು ಹೇಳಿದರು.
ಯುಎಇಯ ಕ್ರೀಡಾಂಗಣಗಳಲ್ಲಿ ಟಾಸ್ ಕೂಡ ಮಹತ್ವ ಪಡೆಯುತ್ತದೆ. ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡುವುದಕ್ಕೂ ನಂತರ ಮಾಡುವುದಕ್ಕೂ ವ್ಯತ್ಯಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯಜುವೇಂದ್ರ ಚಾಹಲ್ ಅವರ ಅನುಪಸ್ಥಿತಿ ತಂಡದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭರತ್ ಅರುಣ್ ‘ಆ ಬಗ್ಗೆ ಏನನ್ನೂ ಹೇಳುವುದಿಲ್ಲ. ಅದು ಆಯ್ಕೆ ಸಮಿತಿಗೆ ಬಿಟ್ಟ ವಿಷಯ. ಆಡಳಿತದವರು ಕೊಟ್ಟ ತಂಡವನ್ನು ಬಳಸಿಕೊಂಡು ಆಡುವುದಷ್ಟೇ ನಮ್ಮ ಕೆಲಸ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.