ಬುಧವಾರ, ಆಗಸ್ಟ್ 4, 2021
23 °C

ಕೆರಿಬಿಯನ್‌ ಲೀಗ್‌ನಲ್ಲಿ ಪ್ರವೀಣ್‌ ತಾಂಬೆ ಕಣಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರತದ ಹಿರಿಯ ಕ್ರಿಕೆಟಿಗ ಪ್ರವೀಣ್‌ ತಾಂಬೆ ಅವರು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಆಯೋಜಿಸುವ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌) ಟ್ವೆಂಟಿ–20 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

48 ವರ್ಷ ವಯಸ್ಸಿನ ಲೆಗ್‌ ಸ್ಪಿನ್ನರ್‌ ತಾಂಬೆ, ಟ್ರಿಬಾಗೊ ನೈಟ್‌ ರೈಡರ್ಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಈ ಲೀಗ್‌ನಲ್ಲಿ ಆಡಲು ತಾಂಬೆ ಅವರು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ನಿರಾಪೇಕ್ಷಣ ಪತ್ರ ಪಡೆಯಬೇಕಿದೆ. 

ಅಂತರರಾಷ್ಟ್ರೀಯ ಮತ್ತು ದೇಶಿಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಆಟಗಾರರು ಕೌಂಟಿ ಕ್ರಿಕೆಟ್‌ ಬಿಟ್ಟು ಇತರೆ ಯಾವುದೇ ವಿದೇಶಿ ಲೀಗ್‌ಗಳಲ್ಲಿ ಆಡುವಂತಿಲ್ಲ ಎಂದು ಬಿಸಿಸಿಐ ಆಜ್ಞೆ ಮಾಡಿದೆ.

ವಿದೇಶಿ ಲೀಗ್‌ಗಳಲ್ಲಿ ಆಡಲಿಚ್ಛಿಸುವವರು ಕ್ರಿಕೆಟ್‌ ಬದುಕಿಗೆ ನಿವೃತ್ತಿ ಪ್ರಕಟಿಸುವುದು ಅನಿವಾರ್ಯ. ಅನುಭವಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರು ಕೆನಡಾದಲ್ಲಿ ಆಯೋಜನೆಯಾಗಿದ್ದ ಗ್ಲೋಬಲ್‌ ಟ್ವೆಂಟಿ–20 ಟೂರ್ನಿಯಲ್ಲಿ ಆಡುವ ಸಲುವಾಗಿಯೇ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದರು.

ತಾಂಬೆ ಅವರು ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೊ ಇಲ್ಲವೊ ಎಂಬುದು ಸ್ಪಷ್ಟವಾಗಿಲ್ಲ. ತಾಂಬೆ ಅವರು ಇತ್ತೀಚೆಗೆ ವಿದಾಯ ಪ್ರಕಟಿಸಿದ್ದಾರೆ ಎಂದು ಬಿಸಿಸಿಐ ಹೇಳಿದೆ.  

‘ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದ ತಾಂಬೆ ಬಳಿಕ ಈ ನಿರ್ಧಾರದಿಂದ ಹಿಂದೆ ಸರಿದಿದ್ದರು. ಕೆಲ ದಿನಗಳ ಹಿಂದೆ ಅವರು ಮುಂಬೈ ಕ್ರಿಕೆಟ್‌ ಸಂಸ್ಥೆಗೆ (ಎಂಸಿಎ) ಇ–ಮೇಲ್‌ವೊಂದನ್ನು‌ ಕಳುಹಿಸಿದ್ದರು. ಅದರಲ್ಲಿ ನಿವೃತ್ತಿಯ ವಿಷಯವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ’ ಎಂದು ಎಂಸಿಎ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. 

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) 33 ಪಂದ್ಯಗಳನ್ನು ಆಡಿರುವ ತಾಂಬೆ, 30.5ರ ಸರಾಸರಿಯಲ್ಲಿ 28 ವಿಕೆಟ್‌ ಉರುಳಿಸಿದ್ದಾರೆ. ಕೆರಿಬಿಯನ್‌ ಲೀಗ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಮೊದಲ ಕ್ರಿಕೆಟಿಗ ಎಂಬ ಹಿರಿಮೆಗೆ ಅವರು ಭಾಜನರಾಗಿದ್ದಾರೆ.

ಈ ಬಾರಿಯ ಸಿಪಿಎಲ್ ಅನ್ನು‌ ಆಗಸ್ಟ್‌ 18ರಿಂದ ಸೆಪ್ಟೆಂಬರ್‌ 10ರವರೆಗೆ ಖಾಲಿ ಕ್ರೀಡಾಂಗಣದಲ್ಲಿ ಆಯೋಜಿಸಲು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ತೀರ್ಮಾನಿಸಿದೆ. 

ಭಾರತ ಸರ್ಕಾರವು ಜುಲೈ 31ರವರೆಗೆ ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ನಿರ್ಬಂಧ ಹೇರಿದೆ. ಇದು ಮುಂದುವರಿದರೆ ಸಿಪಿಎಲ್‌ನಲ್ಲಿ ಆಡುವ ತಾಂಬೆ ಕನಸು ಭಗ್ನವಾಗಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು