ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಲಾಬಿ ಬಟ್ಟಲು’ ಕನಸಿನ ತೊಟ್ಟಿಲು: ಭಾರತ–ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಇಂದು

ಸೌತಾಂಪ್ಟನ್‌ನ ‘ದ ರೋಸ್ ಬಾಲ್’ ಕ್ರೀಡಾಂಗಣದಲ್ಲಿ ಹಣಾಹಣಿ
Last Updated 5 ಜೂನ್ 2019, 8:34 IST
ಅಕ್ಷರ ಗಾತ್ರ

ಸೌತಾಂಪ್ಟನ್, ಇಂಗ್ಲೆಂಡ್: ಇಲ್ಲಿಯ ‘ದ ರೋಸ್ ಬಾಲ್‌’ ಕ್ರೀಡಾಂಗಣ (ಗುಲಾಬಿ ತೊಟ್ಟಿಲು) ಕನಸುಗಳು ತುಂಬಿರುವ ಬಟ್ಟಲಿನಂತೆ ಕಂಗೊಳಿಸುತ್ತಿದೆ. ಸಂಜೆಯ ಸೂರ್ಯನ ಕಿರಣಗಳಲ್ಲಿ ಕೆಂಗುಲಾಬಿಯಂತೆ ಕಂಗೊಳಿಸುತ್ತಿದೆ.

ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಬುಧವಾರ ಇಲ್ಲಿ ಕಣಕ್ಕಿಳಿಯಲಿದೆ. ಭಾರತದ ಕ್ರಿಕೆಟ್‌ಪ್ರೇಮಿಗಳು ಕಾಯುತ್ತಿದ್ದ ಕ್ಷಣ ಬಂದೇಬಿಟ್ಟಿದೆ. ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಬಳಗದ ಆಟವನ್ನು ಕಣ್ತುಂಬಿಕೊಳ್ಳುವ ಅಭಿಮಾನಿಗಳ ಆಸೆ ಇದೀಗ ಈಡೇರಲಿದೆ.

ಮೇ 30ರಿಂದ ಆರಂಭವಾಗಿರುವ ಟೂರ್ನಿಯ ರೌಂಡ್‌ರಾಬಿನ್ ಲೀಗ್‌ನಲ್ಲಿ ಉಳಿದ ಒಂಬತ್ತು ತಂಡಗಳೂ ಒಂದು ಸುತ್ತಿನ ಪಂದ್ಯಗಳನ್ನು ಆಡಿವೆ. ಆದರೆ, ಭಾರತ ಇದೀಗ ತನ್ನ ಮೊದಲ ಪಂದ್ಯವನ್ನು ಆಡಲು ಸಿದ್ಧವಾಗಿದೆ. ಇಂಗ್ಲೆಂಡ್ ಮತ್ತು ಬಾಂಗ್ಲಾದೇಶಗಳ ಎದುರು ಆಡಿರುವ ಪಂದ್ಯಗಳಲ್ಲಿ ಸೋತು ಒತ್ತಡದಲ್ಲಿರುವ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಟೂರ್ನಿಯ ಆರಂಭಕ್ಕೂ ಮುನ್ನ ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಿದ ನಂತರ ತಂಡಕ್ಕೆ ಸುಮಾರು ಆರು ದಿನಗಳ ಬಿಡುವು ಲಭಿಸಿದೆ. ಈ ಅವಧಿಯಲ್ಲಿ ಸೌತಾಂಪ್ಟನ್ ವಾತಾವರಣಕ್ಕೆ ಹೊಂದಿಕೊಳ್ಳುವ, ಫಿಟ್‌ನೆಸ್ ನಿರ್ವಹಣೆ ಮತ್ತು ಆಟದ ಕೌಶಲಗಳನ್ನು ಉತ್ತಮಪಡಿಸಿ ಕೊಳ್ಳುವ ಅಭ್ಯಾಸವನ್ನು ಆಟಗಾರರು ಮಾಡಿ ದ್ದಾರೆ. ಜೊತೆಗೆ ಮನೋಲ್ಲಾಸಕ್ಕಾಗಿ ಒಂದಿಷ್ಟು ಮನರಂಜನೆ ಚಟುವಟಿಕೆಗಳಲ್ಲಿಯೂ ಭಾಗಹಿ ಸಿದ್ದರು. ಬೇರೆ ತಂಡಗಳ ಆಟವನ್ನು ನೋಡಿ ಅವಲೋಕಿಸುವ ಅವಕಾಶ ಕೂಡ ವಿರಾಟ್ ಬಳಗಕ್ಕೆ ಲಭಿಸಿದೆ. ಅದರಿಂದಾಗಿ ತಂಡ ಉತ್ತಮ ಯೋಜನೆಯೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ.

ತಂಡ ಸಂಯೋಜನೆ: 2015ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ ನಂತರ ಬಿಸಿಸಿಐ ಈ ವಿಶ್ವಕಪ್‌ ಟೂರ್ನಿಗಾಗಿ ಸಿದ್ಧತೆಯನ್ನು ಆರಂಭಿಸಿತ್ತು. ಅದಕ್ಕಾಗಿ ಹಲವಾರು ಪ್ರಯೋಗಗಳಿಗೆ ಕೈಹಾಕಿತ್ತು. ಅದರ ಫಲವಾಗಿ ಅನುಭವಿ ಮತ್ತು ಯುವ ಆಟಗಾರರು ಇರುವ ತಂಡವು ಸಿದ್ಧವಾಗಿದೆ.

ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಶಿಖರ್ ಧವನ್ ಮತ್ರು ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸುವುದು ಖಚಿತ. ಮೂರನೇ ಕ್ರಮಾಂಕದಲ್ಲಿ ವಿರಾಟ್, ನಾಲ್ಕರಲ್ಲಿ ಕೆ.ಎಲ್. ರಾಹುಲ್ ಆಡುವುದು ಬಹುತೇಕ ಖಚಿತ. ಐದನೇ ಕ್ರಮಾಂಕದಲ್ಲಿ ವಿಜಯಶಂಕರ್ ಅಥವಾ ಕೇದಾರ್ ಜಾಧವ್‌ ಅವರಲ್ಲಿ ಒಬ್ಬರಿಗೆ ಸ್ಥಾನ ಲಭಿಸಬಹುದು. ನಂತರ ಮಹೇಂದ್ರಸಿಂಗ್ ಧೋನಿ, ಹಾರ್ದಿಕ್ ಪಾಂಡ್, ರವೀಂದ್ರ ಜಡೇಜ ಬ್ಯಾಟಿಂಗ್‌ಗೆ ಬರುವ ಸಾಧ್ಯತೆ ಹೆಚ್ಚು. ಟಾಸ್ ಗೆಲ್ಲುವ ತಂಡದ ನಾಯಕ ತೆಗೆದುಕೊಳ್ಳುವ ನಿರ್ಧಾರವೂ ಇಲ್ಲಿ ಪ್ರಮುಖ ಪಾತ್ರ ವಹಿಸುವುದು.

ಡೆತ್ ಓವರ್ ಪರಿಣತ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಮೇಲೆ ಹೆಚ್ಚು ನಿರೀಕ್ಷೆಗಳು ಇವೆ. ಫೀಲ್ಡಿಂಗ್‌ನಲ್ಲಿ ಲೋಪಗಳಾಗದಂತೆ ತಡೆದರೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಬಹುದು.

ಫಾಫ್‌ ಮೇಲೆ ಒತ್ತಡ: ಆದರೆ, ಫಾಫ್ ಡುಪ್ಲೆಸಿ ಬಳಗದ ಕತೆ ಬೇರೆಯೆ ಇದೆ. ನಾಯಕ ಸೇರಿದಂತೆ ಯಾವ ಆಟಗಾರರೂ ಸ್ಥಿರವಾದ ಪ್ರದರ್ಶನ ತೋರುತ್ತಿಲ್ಲ. ಇದು ಚಿಂತೆಗೀಡು ಮಾಡಿರುವ ವಿಷಯ. ಅನುಭವಿ ವೇಗದ ಬೌಲರ್ ಡೇಲ್ ಸ್ಟೇಯ್ನ್ ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವರು ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ತಂಡದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕ್ವಿಂಟನ್ ಡಿ ಕಾಕ್, ಜೆ.ಪಿ. ಡುಮಿನಿ, ಡುಪ್ಲೆಸಿ ಅವರು ಆಡಿದರೆ ತಂಡಕ್ಕೆ ಲಾಭ. ಹಾಶೀಂ ಆಮ್ಲಾ ಚೇತರಿಸಿಕೊಂಡು ಬಂದರೆ ತಂಡಕ್ಕೆ ಆತ್ಮವಿಶ್ವಾಸ ಮರುಕಳಿಸಬಹುದು. ಆದರೆ ಬೌಲಿಂಗ್ ವಿಭಾಗದಲ್ಲಿ ಇಮ್ರಾನ್ ತಾಹೀರ್ ಅವರನ್ನು ಬಿಟ್ಟರೆ ಉಳಿದವರಿಂದ ಸ್ಥಿರವಾದ ಆಟ ಮೂಡಿಬರುತ್ತಿಲ್ಲ. ಇದು ಕೂಡ ತಂಡಕ್ಕೆ ಹಿನ್ನಡೆ ತಂದುಕೊಡಬಲ್ಲ ಅಂಶ.

ದಕ್ಷಿಣ ಆಫ್ರಿಕಾ ತಂಡ: ಸ್ಟೇಯ್ನ್ ಅಲಭ್ಯ

ಫಾಫ್ ಡುಪ್ಲೆಸಿ (ನಾಯಕ), ಕ್ವಿಂಟನ್ ಡಿಕಾಕ್ (ವಿಕೆಟ್‌ಕೀಪರ್), ಏಡನ್ ಮರ್ಕರಮ್, ಹಾಶೀಂ ಆಮ್ಲಾ, ಜೆಪಿ ಡುಮಿನಿ, ಡೇವಿಡ್ ಮಿಲ್ಲರ್, ಬೇರನ್ ಹೆನ್ರಿಕ್ಸ್‌, ಕಗಿಸೊ ರಬಾಡ, ಡ್ವೇನ್ ಪೆರ್ಟೊರಿಯಸ್, ಆ್ಯಂಡಿಲೆ, ಪಿಶುವಾಯೊ, ತಬ್ರೇಜ್, ಶಂಸಿ, ಇಮ್ರಾನ್ ತಾಹೀರ್, ಲುಂಗಿ ಗಿಡಿ, ಕ್ರಿಸ್ ಮಾರಿಸ್, ರಸಿ ವ್ಯಾನ್ ಡರ್ ಡಸೆನ್, ಕೋಚ್: ಒಟ್ಟಿಸ್ ಗಿಬ್ಸನ್.

ಅಂಪೈರ್: ರಿಚರ್ಡ್ ಕೆಟಲ್‌ಬರೊ, ಮಿಚೆಲ್ ಗಾಫ್. ಮೂರನೇ ಅಂಪೈರ್: ರಿಚರ್ಡ್ ಇಲ್ಲಿಂಗ್‌ವರ್ಥ್, ರೆಫರಿ: ರಂಜನ್ ಮದುಗಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT