ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಂತ್ರಿಕ’ ಬದಲಾವಣೆ ಪೃಥ್ವಿ ಶಾ ಯಶಸ್ಸಿನ ಗುಟ್ಟು

Last Updated 19 ಏಪ್ರಿಲ್ 2021, 9:27 IST
ಅಕ್ಷರ ಗಾತ್ರ

ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿ ವೇಳೆ ತಂಡದಿಂದ ಕೈಬಿಟ್ಟ ಕಾರಣ ಗಾಭರಿಗೊಂಡು ತಂತ್ರಗಳಲ್ಲಿ ಮಾಡಿದ ಬದಲಾವಣೆ ಐಪಿಎಲ್‌ನಲ್ಲಿ ಯಶಸ್ಸು ಸಾಧಿಸಲು ಕಾರಣವಾಯಿತು ಎಂದು ಡೆಲ್ಲಿ ಕ್ಯಾಪಿಲಟ್ಸ್ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅಭಿಪ್ರಾಯಪಟ್ಟರು.

ಡಿಸೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡ ಕಾರಣ ಮುಂದಿನ ಪಂದ್ಯಗಳಿಂದ ಪೃಥ್ವಿ ಶಾ ಅವರನ್ನು ಕೈಬಿಡಲಾಗಿತ್ತು. ತಂಡದಿಂದ ಹೊರಬಿದ್ದಾಗ ತಾವು ಬಳಸುವ ತಂತ್ರಗಳ ಬಗ್ಗೆ ಆತಂಕ ಮೂಡಿತ್ತು. ಈಗ ಅವುಗಳನ್ನು ಸುಧಾರಿಸಿಕೊಂಡಿರುವುದಾಗಿ ಅವರು ಹೇಳಿದರು.

ಆಸ್ಟ್ರೇಲಿಯಾದಿಂದ ಮರಳಿದ ನಂತರ ಶಾ ಅವರು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರು. ಎಂಟು ಪಂದ್ಯಗಳಲ್ಲಿ 827 ರನ್ ಗಳಿಸಿ ದಾಖಲೆ ಸೃಷ್ಟಿಸಿದ್ದರು. ಐಪಿಎಲ್‌ನ ಈ ಬಾರಿಯ ಡೆಲ್ಲಿ ತಂಡದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಎದುರು 38 ಎಸೆತಗಳಲ್ಲಿ 72 ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 17 ಎಸೆತಗಳಲ್ಲಿ 32 ರನ್‌ ಗಳಿಸಿದ್ದರು.

ಕಿಂಗ್ಸ್ ಎದುರಿನ ಪಂದ್ಯದ ನಂತರ ಮಾತನಾಡಿದ ಅವರು ‘ಸಣ್ಣ ತಪ್ಪುಗಳಿಂದಾಗಿ ಔಟಾಗುತ್ತಿರುವುದು ನನ್ನನ್ನು ಚಿಂತೆಗೀಡು ಮಾಡಿತ್ತು. ತ‍ಪ್ಪುಗಳನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಿದೆ. ಬೌಲರನ್ನು ಎದುರಿಸುವಾಗ ಆರಂಭದ ಹಂತಗಳಲ್ಲಿ ಆಗುತ್ತಿದ್ದ ಲೋಪಗಳನ್ನು ಸರಿಪಡಿಸಿಕೊಂಡೆ. ಎದುರಾಳಿ ಬೌಲಿಂಗ್ ಮಾಡುವ ಮೊದಲೇ ಕ್ರೀಸ್‌ನಲ್ಲಿ ಭದ್ರವಾಗಿ ಮತ್ತು ಎಲ್ಲದಕ್ಕೂ ಸಿದ್ಧನಾಗಿ ಇರಲು ಪ್ರಯತ್ನಿಸಿದೆ. ಇದು ಫಲ ನೀಡಿತು’ ಎಂದರು.

‘ಆಸ್ಟ್ರೇಲಿಯಾದಿಂದ ಮರಳಿದ ನಂತರ ಕೋಚ್‌ಗಳಾದ ಪ್ರಶಾಂತ್ ಶೆಟ್ಟಿ ಮತ್ತು ಪ್ರವೀಣ್ ಆಮ್ರೆ ಅವರೊಂದಿಗೆ ಚರ್ಚಿಸಿ ಲೋಪಗಳನ್ನು ಸರಿಪಡಿಸಲು ಯೋಜನೆ ಹಾಕಿಕೊಂಡೆ. ವಿಜಯ್ ಹಜಾರೆ ಟ್ರೋಫಿಗೆ ಚೆನ್ನಾಗಿ ಸಿದ್ಧತೆ ಮಾಡಿಕೊಂಡೆ. ಆ ಟೂರ್ನಿಯಲ್ಲಿ ಸಣ್ಣ ತಾಂತ್ರಿಕ ಬದಲಾವಣೆಗಳೊಂದಿಗೆ ನನ್ನ ಸಹಜ ಆಟ ಆಡಿದೆ. ಅದು ಕೈ ಹಿಡಿಯಿತು. ಐಪಿಎಲ್‌ಗಾಗಿ ಹೆಚ್ಚು ಅಭ್ಯಾಸ ಮಾಡಿರಲಿಲ್ಲ. ಆದರೆ ಕೆಲ ಕಾಲ ರಿಕಿ ಪಾಂಟಿಂಗ್, ಪ್ರವೀಣ್ ಆಮ್ರೆ ಮತ್ತು ಪ್ರಶಾಂತ್ ಶೆಟ್ಟಿ ಸಲಹೆಯಂತೆ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದೆ’ ಎಂದು ಮುಂಬೈ ಬ್ಯಾಟ್ಸ್‌ಮನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT