ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive- ಆಟದ ಮನೆ: ಪಂತ್ ರಿವರ್ಸ್ ಸ್ವೀಪ್‌ ನೆಪದಲ್ಲಿ...

Last Updated 17 ಮಾರ್ಚ್ 2021, 12:24 IST
ಅಕ್ಷರ ಗಾತ್ರ

ರಿಷಭ್ ಪಂತ್ ರಿವರ್ಸ್ ಸ್ವೀಪ್‌ಗಳು ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಕ್ರಿಕೆಟ್ ಇತಿಹಾಸದ ಅಂಥದ್ದೇ ಪ್ರಖ್ಯಾತ–ಕುಖ್ಯಾತ ಹೊಡೆತಗಳ ನೆನಪು...

***

1960ರ ದಶಕ. ನಾಥ್‌ಹ್ಯಾಂಪ್ಟನ್‌ಷೈರ್ ಕೌಂಟಿ ತಂಡದ ಪರವಾಗಿ ಪಾಕಿಸ್ತಾನದ ಆಲ್‌ರೌಂಡರ್ ಮುಷ್ತಾಕ್ ಮೊಹಮ್ಮದ್ ಬ್ಯಾಟಿಂಗ್ ಮಾಡುತ್ತಿದ್ದರು. ಮಿಡ್ಲ್‌ಸೆಕ್ಸ್ ತಂಡ ಎದುರಾಳಿ. ಫ್ರೆಡ್ಡಿ ಎಂಬ ಆಫ್‌ ಸ್ಪಿನ್ನರ್ ಕ್ಲೋಸ್‌–ಇನ್ ಫೀಲ್ಡರ್‌ಗಳನ್ನು ನಿಲ್ಲಿಸಿಕೊಂಡು ಆಡಿಸುತ್ತಿದ್ದರು. ಥರ್ಡ್‌ಮನ್ ಜಾಗದ ಕಡೆ ಬಿಟ್ಟರೆ ಬೇರೆಲ್ಲೂ ‘ಗ್ಯಾಪ್’ ಇರಲಿಲ್ಲ. ಅಲ್ಲಿಗೆ ಚೆಂಡನ್ನು ತಳ್ಳಿದರೆ ಸಿಗುವುದು ಒಂದೇ ರನ್. ಬಲಗೈ ಬ್ಯಾಟ್ಸ್‌ಮನ್‌ ಮುಷ್ತಾಕ್ ಆಗ ಸರಕ್ಕನೆ ಎಡಗೈ ಬ್ಯಾಟ್ಸ್‌ಮನ್ ಆಡುವಂತೆ ತಿರುಗಿ ರಿವರ್ಸ್ ಸ್ವೀಪ್ ಮಾಡಿದರು. ಚೆಂಡು ಬೌಂಡರಿಗೆ ಹೋದದ್ದೇ ಬೌಲರ್‌ಗೆ ತಲೆಬಿಸಿ. ಕೋಪದಲ್ಲಿ ಒಂದಿಷ್ಟು ಕೂದಲು ಹೊರಬರುವಂತೆ ಕಿತ್ತುಕೊಂಡು, ಅಂಪೈರ್‌ ಬಳಿಗೆ ಹೋಗಿ ಅದು ತಪ್ಪಲ್ಲವೇ ಎಂದು ಪ್ರಶ್ನೆ ಹಾಕಿದರು. ‘ನಿನ್ನ ಕೈಲಿ ಬಾಲ್ ಇದೆ. ಅವನ ಕೈಲಿ ಬ್ಯಾಟ್ ಇದೆ. ಅವನು ಹೊಡೆದ. ಅದು ತಂತ್ರ. ಅವನು ಹೇಗಾದರೂ ಹೊಡೆಯಲಿ? ನೀನು ಯಾವ ದಿಕ್ಕಿಗೆ ಬೇಕಾದರೂ ಸ್ಪಿನ್ ಮಾಡು’ ಎಂದು ಅಂಪೈರ್ ಖಡಕ್ಕಾಗಿ ಹೇಳಿದರು. ಕೌಂಟಿ ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವೀಪ್ ಸಂಚಲನ ಸೃಷ್ಟಿಸಿದ ಸಂದರ್ಭ ಅದು.

ಮುಷ್ತಾಕ್ ಮೊಹಮ್ಮದ್
ಮುಷ್ತಾಕ್ ಮೊಹಮ್ಮದ್

ಇಂಗ್ಲೆಂಡ್ ಎದುರಿನ ಕೊನೆಯ ಟೆಸ್ಟ್‌ನ ಎರಡನೇ ದಿನದಾಟದ ಭಾರತದ ಇನಿಂಗ್ಸ್‌ನ 83ನೇ ಓವರ್‌ನ ಮೊದಲ ಎಸೆತವನ್ನು ರಿಷಭ್ ಪಂತ್ ರಿವರ್ಸ್ ಸ್ವೀಪ್ ಮಾಡಿದಾಗ ‘ಅದು ಈ ವರ್ಷದ ಹೊಡೆತ’ ಎಂದು ಶ್ಲಾಘಿಸಿದವರೆಷ್ಟೋ? ಆಗ ನೆನಪಾದದ್ದು ಮುಷ್ತಾಕ್ ಮೊಹಮ್ಮದ್ ಆ ಕಾಲದಲ್ಲಿ ಮಾಡಿದ್ದ ರಿವರ್ಸ್ ಸ್ವೀಪ್. ಅಮೆರಿಕನ್ನರಿಗೆ ಇತ್ತೀಚಿನವರೆಗೆ ಕ್ರಿಕೆಟ್ ಕೋಚ್ ಆಗಿ ಕೆಲಸ ಮಾಡಿ ಬಂದು, ಈಗ ಪಾಕಿಸ್ತಾನದಲ್ಲೇ ವೀಕ್ಷಕ ವಿವರಣೆಗಾರರಾಗಿರುವ ಮುಷ್ತಾಕ್ ಮೊಹಮ್ಮದ್ ಜನಪ್ರಿಯತೆಯ ಪರಿಧಿಗೆ ಬಾರದ ವಿಶೇಷ ಪ್ರತಿಭಾವಂತ ಎನ್ನುವುದು ಕ್ರಿಕೆಟ್ ವಿಶ್ಲೇಷಕರ ಅನುಭವದ ನುಡಿ. 57 ಟೆಸ್ಟ್‌ಗಳಲ್ಲಿ 10 ಶತಕ, 19 ಅರ್ಧ ಶತಕ ದಾಖಲಿಸಿದ ಅವರ ರನ್‌ ಗಳಿಕೆಯ ಸರಾಸರಿ 39.17. ಗರಿಷ್ಠ ಸ್ಕೋರ್ 201. ಗೂಗ್ಲಿ ಹಾಕಿ ಎದುರಾಳಿಗಳ ತಬ್ಬಿಬ್ಬು ಮಾಡುತ್ತಿದ್ದ ಅವರು 79 ವಿಕೆಟ್‌ಗಳನ್ನೂ ಪಡೆದ ಲೆಗ್ ಸ್ಪಿನ್ನರ್. ಇಂತಿಪ್ಪ ಅವರಿಗೆ 10 ಏಕದಿನ ಪಂದ್ಯಗಳಲ್ಲಿ ಒಂದೂ ವಿಕೆಟ್ ಸಿಗಲಿಲ್ಲ. 42 ಎಸೆತಗಳನ್ನಷ್ಟೇ ಬೌಲ್ ಮಾಡಿದ್ದರು. ಒಂದು ಅರ್ಧ ಶತಕ ಗಳಿಸಿದ್ದಷ್ಟೆ ಸಾಧನೆ. ಯಾಕೆಂದರೆ, ಏಕದಿನ ಪಂದ್ಯ ಆಡುವಷ್ಟರಲ್ಲಿ ಅವರ ವಯಸ್ಸು 30 ದಾಟಿತ್ತು. ‘ಸ್ಟ್ರೀಟ್ ಫೈಟರ್’ ಎಂದು ಆಪ್ತೇಷ್ಟರಿಂದ ಬಿರುದು ಪಡೆದಿದ್ದ ಕ್ರಿಕೆಟ್ ಪ್ರತಿಭೆ ಅವರು.

ಮೈಕ್ ಗ್ಯಾಟಿಂಗ್ ಇಂಗ್ಲೆಂಡ್‌ನ ದಿಗ್ಗಜ ಬ್ಯಾಟ್ಸ್‌ಮನ್‌ ಆಗಿದ್ದವರು. 1987ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಬರೀ 45 ಎಸೆತಗಳಲ್ಲಿ 42 ರನ್ ಗಳಿಸಿ ಕಾಡುತ್ತಿದ್ದರು. ಆಸ್ಟ್ರೇಲಿಯಾದ ಪ್ರಮುಖ ಸ್ಪಿನ್ನರ್ ಟಿಮ್ ಮೇ 4 ಓವರ್‌ಗಳಲ್ಲಿ ಇಪ್ಪತ್ತು ಚಿಲ್ಲರೆ ರನ್‌ ನೀಡಿ ಲಯ ಕಳೆದುಕೊಳ್ಳುವಂತೆ ಆಡಿದ್ದವರು ಗ್ಯಾಟಿಂಗ್. ಆಗ ಆಸ್ಟ್ರೇಲಿಯಾ ನಾಯಕ ಅಲನ್ ಬಾರ್ಡರ್ ತಾವೇ ಚೆಂಡನ್ನು ಕೈಗೆತ್ತಿಕೊಂಡು, ಎಡಗೈ ಸ್ಪಿನ್ ಮಾಡಿದರು. ಅದೊಂದು ಕೆಟ್ಟ ಲೈನ್ ಎಸೆತ. ಲೆಗ್‌ಸ್ಟಂಪ್‌ನ ಆಚೆಗೆ ಚೆಂಡು ಇತ್ತು. ಗ್ಯಾಟಿಂಗ್ ಪೂರ್ವನಿರ್ಧಾರದಿಂದ ರಿವರ್ಸ್‌ ಸ್ವೀಪ್‌ಗೆ ಯತ್ನಿಸಿದರು. ಚೆಂಡು ಬ್ಯಾಟ್‌ನ ಅಂಚಿಗೆ ಬಡಿದು ಭುಜಕ್ಕೆ ತಾಗಿ ವಿಕೆಟ್‌ ಕೀಪರ್‌ ಸುಲಭದ ಕ್ಯಾಚ್ ಪಡೆಯುವಂತಾಯಿತು. ಅದುವರೆಗೆ ಗ್ಯಾಟಿಂಗ್ ಅನ್ನು ಕೊಂಡಾಡುತ್ತಿದ್ದವರೆಲ್ಲ ಆಮೇಲೆ ಟೀಕಾಪ್ರಹಾರ ಮಾಡಿದರು. ‘ಚರ್ಚ್‌ನಲ್ಲಿ ಪ್ರಾರ್ಥನೆ ನಡೆಯುವಾಗ ಕೆಮ್ಮಿದಂತೆ ಆ ಹೊಡೆತದ ಆಯ್ಕೆ’ ಎಂಬ ಟೀಕೆ ಕೇಳಿ ಗ್ಯಾಟಿಂಗ್ ಕಣ್ಣಂಚಲ್ಲಿ ನೀರು ಜಿನುಗಿತ್ತು. ರಿವರ್ಸ್ ಸ್ವೀಪ್ ವಿಶ್ವಕಪ್ ಅನ್ನೇ ಇಂಗ್ಲೆಂಡ್‌ನಿಂದ ಕಿತ್ತುಕೊಂಡಿತು ಎಂಬ ವಿಶ್ಲೇಷಣೆ ಆಗ ಪುಂಖಾನುಪುಂಖವಾಗಿ ಪ್ರಕಟವಾಗಿತ್ತು.

ಮೈಕ್ ಗ್ಯಾಟಿಂಗ್
ಮೈಕ್ ಗ್ಯಾಟಿಂಗ್

1930ರ ದಶಕದಲ್ಲಿ ದುಲೀಪ್‌ಸಿನ್ಹಜೀ ಸ್ಟೈಲಿಷ್ ಬ್ಯಾಟ್ಸ್‌ಮನ್ ಎಂದೇ ಗುರುತಾಗಿದ್ದವರು. 12 ಟೆಸ್ಟ್‌ಗಳಲ್ಲಿ 58.52ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದ ಅವರಿಗೆ ಕ್ಷಯ ರೋಗ ಬಾಧಿಸದೇ ಇದ್ದಿದ್ದರೆ ಇನ್ನಷ್ಟು ಕಾಲ ಆಡಿರುತ್ತಿದ್ದರು. ಚೊಚ್ಚಲ ಆ್ಯಷಸ್‌ನಲ್ಲಿ ಶತಕ ಗಳಿಸಿ ಬ್ರಿಟಿಷರೂ ಶಹಬ್ಬಾಸ್‌ ಎನ್ನುವಂತೆ ಮಾಡಿದ್ದವರು ದುಲೀಪ್. ಅವರ ಹೆಸರಿನಲ್ಲೇ ದುಲೀಪ್ ಟ್ರೋಫಿ ಪಂದ್ಯಗಳು ನಡೆಯುವುದನ್ನು ನಾವು ಕಂಡಿದ್ದೇವೆ.

ಮುಂಬೈ ಚತುಷ್ಕೋನ ಕ್ರಿಕೆಟ್ ಆಡಲು ಅವರು 1930ರ ದಶಕದಲ್ಲಿ ಬಂದಾಗ ಎಲ್ಲರಿಗೂ ಕುತೂಹಲ. ಪಾರ್ಸಿ ತಂಡದ ವಿರುದ್ಧ ಹಿಂದೂ ತಂಡದ ಪಂದ್ಯ ಅದು. ಜೈ ಎಂಬ ಭಾರತದ ಸ್ಟೈಲಿಷ್ ಬ್ಯಾಟ್ಸ್‌ಮನ್ ಹಾಗೂ ದುಲೀಪ್ ನಡುವಿನ ಜುಗಲ್‌ಬಂದಿ ಅದು. ಆ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದರಿಂದ ಹಿಂದೂ ತಂಡದ ಮೇಲೆ ಒತ್ತಡದ ನೊಗವಿತ್ತು. ಆಗ ದುಲೀಪ್ ಎರಡನೇ ಇನಿಂಗ್ಸ್‌ನಲ್ಲಿ ಪಟಪಟನೆ ರನ್‌ ಗಳಿಸಲು ಮೇಲಕ್ಕೆತ್ತಿ ಚೆಂಡನ್ನು ಹೊಡೆಯತೊಡಗಿದರು. ಒಂದು ಎಸೆತ ವೈಡ್ ಆಗಬೇಕಿತ್ತು. ಅದನ್ನು ದಿಢೀರನೆ ಗ್ರಿಪ್ ಬದಲಿಸದೆ ಬ್ಯಾಟನ್ನೇ ತಿರುಗಿಸಿ, ಅರೆ ರಿವರ್ಸ್ ಸ್ವೀಪ್ ಮಾಡಿದರು. ಆಗಲೂ ‘ಅದು ಅಕ್ರಮ ಹೊಡೆತ’ ಎಂದು ಎದುರಾಳಿ ತಂಡದವರು ಅಂಪೈರ್ ಬಳಿ ಮನವಿ ಸಲ್ಲಿಸಿದರು. ಅದು ನಿಯಮಬಾಹಿರ ಎನ್ನುವುದಕ್ಕೆ ಯಾವುದೇ ಆಧಾರ ಅಂಪೈರ್ ಬಳಿ ಇರಲಿಲ್ಲ.

ದುಲೀಪ್‌ಸಿನ್ಹಜೀ
ದುಲೀಪ್‌ಸಿನ್ಹಜೀ

ರಿವರ್ಸ್ ಸ್ವೀಪ್ ಎನ್ನುವುದು ಬೇರೆ ಬೇರೆ ಕಾಲಘಟ್ಟದಲ್ಲಿ ಹೇಗೆಲ್ಲ ಪರಿಣಾಮ ಬೀರಿದೆ ಎನ್ನುವುದಕ್ಕೆ ಈ ಮೂರು ಪ್ರಸಂಗಗಳು ಪ್ರಮುಖ ಉದಾಹರಣೆಗಳು.

ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ರಿವರ್ಸ್ ಸ್ವೀಪ್ ಮಾಡುವುದನ್ನು ನೋಡಿದ್ದೇವೆ. ಜಾವೆದ್ ಮಿಯಾಂದಾದ್ ಅವರಿಂದ ಹಿಡಿದು ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ವರೆಗೆ ಅದನ್ನು ಯಶಸ್ವಿಯಾಗಿ ಆಡಿದವರಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಬತ್ತಳಿಕೆಯಲ್ಲಿನ ಬಾಣಗಳಲ್ಲಿ ಅದೂ ಒಂದು. ಆದರೆ, ರಿಷಭ್ ಪಂತ್ ಇಂಗ್ಲೆಂಡ್‌ನ ಜೇಮ್ಸ್‌ ಆಂಡರ್‌ಸನ್‌ಗೆ ಟೆಸ್ಟ್‌ನಲ್ಲಿ ಹೊಸ ಚೆಂಡನ್ನು ಹಾಗೆ ಹೊಡೆದಾಗ ಅಚ್ಚರಿಯಾಗದೇ ಇರಲು ಸಾಧ್ಯವಿಲ್ಲ. ಅವರಿಗೆ ಅದರಿಂದ ಎಷ್ಟರಮಟ್ಟಿಗೆ ಆತ್ಮವಿಶ್ವಾಸ ದೊರೆಯಿತೆಂದರೆ, ಟ್ವೆಂಟಿ20 ಕ್ರಿಕೆಟ್‌ನಲ್ಲಿ ಜೋಫ್ರಾ ಆರ್ಚರ್‌ಗೂ ಅಂಥದ್ದೇ ಪೂರ್ವನಿರ್ಧರಿತ ರಿವರ್ಸ್ ಸ್ವೀಪ್ ಮಾಡಿ ದಂಗುಬಡಿಸಿದರು. ಅವರಿಂದ ಪ್ರೇರಣೆ ಪಡೆದಂತೆ ಆ ಹೊಡೆತಕ್ಕೆ ಯತ್ನಿಸಿ ಇಶಾನ್ ಕಿಶನ್ ವಿಕೆಟ್ ಕೊಟ್ಟಿದ್ದೂ ನಮ್ಮ ಕಣ್ಣೆದುರಲ್ಲೇ ಇದೆ.

ಬ್ಯಾಟ್ಸ್‌ಮನ್‌ಗಳ ತಮ್ಮತನದ ಇಂತಹ ತಂತ್ರಗಳಿಗೆ ಲಾಗಾಯ್ತಿನಿಂದ ಉದಾಹರಣೆಗಳು ಸಿಗುತ್ತಿವೆ. ಸಚಿನ್ ತೆಂಡೂಲ್ಕರ್ ಬ್ಯಾಕ್‌ಫೂಟ್ ಪಂಚ್, ಸೆಹ್ವಾಗ್ ಪಾಯಿಂಟ್ ತಲೆಮೇಲೆ ಹೊಡೆಯುತ್ತಿದ್ದ ರೀತಿ, ಸನತ್ ಜಯಸೂರ್ಯ ವಿಕೆಟ್‌ನ ಹಿಂಬದಿಯ ಸ್ಥಳವನ್ನೇ ಗುರಿಯಾಗಿಸಿ ವೇಗಿಗಳಿಗೆ ಮಾಡುತ್ತಿದ್ದ ಕಟ್‌ಗಳು, ಯುವರಾಜ್ ಸಿಂಗ್ ಮಿಡ್‌ವಿಕೆಟ್‌ ಅನ್ನೇ ಗುರಿಯಾಗಿಸಿ ಹೊಡೆಯುತ್ತಿದ್ದ ಲಾಫ್ಟೆಡ್ ಡ್ರೈವ್‌ಗಳು...ಹೀಗೆ. ರಿಷಭ್ ವೇಗಿಗಳಿಗೆ ರಿವರ್ಸ್ ಸ್ವೀಪ್ ಮಾಡುವ ಇನ್ನೊಂದು ದಾರಿಯನ್ನು ತೋರಿದ್ದಾರಷ್ಟೆ. ಅವರ ಈ ತಂತ್ರ ಸದ್ಯಕ್ಕೆ ಅಚ್ಚರಿಯನ್ನು ಒಡ್ಡುತ್ತಿದೆ. ಸದಾ ಕಾಲ ಹಾಗೆ ಆಡುವುದು ಸುಲಭವಲ್ಲ. ಬೌಲರ್‌ಗಳೂ ಪ್ರತಿತಂತ್ರ ಹೆಣೆಯಲು ಹೆಚ್ಚು ಕಾಲ ಬೇಕಿರುವುದಿಲ್ಲ.

ಆದರೂ, ‘ರಿಷಭ್ ಚೆಂಡನ್ನು ಹೇಗೆ ಹೇಗೆಯೋ ಹೊಡೆಯುತ್ತಾರೆ. ಅವರ ಪಾದಚಲನೆ, ಕೈ–ಕಣ್ಣಿನ ಹೊಂದಾಣಿಕೆ, ಕೊನೆಯ ಕ್ಷಣದಲ್ಲಿ ಹೊಡೆತ ಬದಲಿಸಬಲ್ಲ ಚುರುಕುತನವನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಾವು ನೋಡಿ ದಂಗಾಗಿದ್ದೆವು. ಬೌಲರ್‌ಗಳ ಆತ್ಮವಿಶ್ವಾಸ ಉಡುಗುವಂತೆ ಮಾಡುವ ಇಂತಹ ಬ್ಯಾಟ್ಸ್‌ಮನ್‌ಗಳ ಮನಸ್ಸು ಏನೇನನ್ನೋ ಕೊಡುತ್ತಿರುತ್ತದೆ’ ಎಂದು ವಿಜಯ್ ಭಾರದ್ವಾಜ್ ಒಮ್ಮೆ ಹೇಳಿದ್ದರು. ಅದು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT