ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ವಿರಾಟ್ ಕೊಹ್ಲಿ, ಮೈಂಡ್‌ಗೇಮ್ ಮತ್ತು ಜನಪ್ರಿಯತೆ

Last Updated 2 ಮಾರ್ಚ್ 2021, 6:58 IST
ಅಕ್ಷರ ಗಾತ್ರ

’ವಾಟ್ ಅದರ್ ಪೀಪಲ್ ಸೇ...‘

ಹಾಲಿವುಡ್‌ ನಟಿ ಮತ್ತು ಗಾಯಕಿ ಡೆಮಿ ಲೊವೆಟೊ ಅವರು ಸ್ಯಾಮ್ ಫಿಷರ್ ಜೊತೆಗೆ ಹಾಡಿದ ಈ ಹಾಡು ಫೆಬ್ರುವರಿಯಲ್ಲಿ ಯೂಟ್ಯೂಬ್‌ನಲ್ಲಿ ಪ್ರೀಮಿಯರ್ ಆದಾಗ ಲಕ್ಷಾಂತರ ಜನರು ನೋಡಿದ್ದರು. ಈಗಲೂ ಈ ಹಾಡು ಜನಪ್ರಿಯ ಲೀಸ್ಟಿಂಗ್‌ನಲ್ಲಿ ಅಗ್ರಸ್ಥಾನದಲ್ಲಿಯೇ ಇದೆ.

28 ವರ್ಷದ ಡೆಮಿ ಲೊವೆಟೊ ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಗಾಯಕಿಯರಲ್ಲಿ ಒಬ್ಬರು. ಇದೀಗ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಇನ್ಸ್ಟಾಗ್ರಾಮ್‌ನಲ್ಲಿ ಡೆಮಿ ಅವರಿಗಿಂತಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ದಾಖಲೆ ಮಾಡಿದ್ದಾರೆ. 10 ಕೋಟಿಗೂ ಹೆಚ್ಚು ಫಾಲೋವರ್ಸ್‌ಗಳು ಕೊಹ್ಲಿಗೆ ಇದ್ದಾರೆ. ಸಾಮಾಜಿಕ ಜಾಲತಾಣವೊಂದರಲ್ಲಿ ಇಷ್ಟೊಂದು ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿರುವ ಮೊದಲ ಕ್ರಿಕೆಟಿಗ ಕೊಹ್ಲಿ. ಭಾರತ ತಂಡಕ್ಕೆ ಕಾಲಿಟ್ಟು 13 ವರ್ಷಗಳಲ್ಲಿ ಈ ಮಟ್ಟದ ಜನಪ್ರಿಯತೆ ಗಳಿಸಲು ಕೊಹ್ಲಿ ಮಾಡಿದ್ದೇನು? ಅವರ ಬ್ಯಾಟಿಂಗ್ ಮತ್ತು ಆಟದ ಯಶಸ್ಸಿನಿಂದ ಮಾತ್ರ ಇದು ಸಾಧ್ಯವಾಗಿದೆಯೇ ಅಥವಾ ಇನ್ನೇನಾದರೂ ಇದೆಯೇ?

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಅವರ ಜನ್ರಪಿಯತೆಗೆ ಅವರ ಆಟ ಮತ್ತು ರನ್‌ಗಳಿಕೆಯ ದಾಖಲೆಗಳು ಕಾರಣವೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅದರ ಜೊತೆಗೆ ಅವರ ಆಕ್ರಮಣಶೀಲ ಮನೋಭಾವ ಕೂಡ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅವರ ಮನೋದಾರ್ಢ್ಯ. 2014ರಲ್ಲಿ ತಾವು ಅನುಭವಿಸಿದ್ದ ಸತತ ವೈಫಲ್ಯದಿಂದಾಗಿ ಖಿನ್ನತೆಗೊಳಳಾಗಿದ್ದನ್ನು ಈಚೆಗೆ ಅವರೇ ಹೇಳಿಕೊಂಡಿದ್ದರು.

’ಇಂಗ್ಲೆಂಡ್ ಪ್ರವಾಸದ ವೇಳೆ ತೀವ್ರ ಹಿನ್ನಡೆ ಅನುಭವಿಸಿದ್ದೆ. ರನ್‌ ಗಳಿಸಲು ಪರದಾಡಿದ್ದೆ. ಆಗ ಅನುಭವಿಸಿದ ಮಾನಸಿಕ ಕಿರಿಕಿರಿ ಅಪಾರವಾಗಿತ್ತು. ಇಡೀ ಜಗತ್ತಿನಲ್ಲಿ ಒಬ್ಬಂಟಿಯಾಗಿ ನಿಂತಂತೆ ಭಾಸವಾಗಿತ್ತು. ಆದರೆ ನನ್ನ ಮಾನಸಿಕ ಸ್ಥಿತಿಗತಿಯನ್ನು ಮುಚ್ಚಿಡಲಿಲ್ಲ. ವೃತ್ತಿಪರ ಮನೋಚಿಕಿತ್ಸಕರಿಂದ ಸಲಹೆ ಪಡೆದೆ. ಅದನ್ನು ಪಾಲಿಸಿದೆ. ನನ್ನ ಜೀವನವೇ ಬದಲಾಯಿತು‘ ಎಂದಿದ್ದರು ವಿರಾಟ್.

ಅದೇ ಹೊತ್ತಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಭರ್ತಿ 692 ರನ್‌ಗಳನ್ನು ಪೇರಿಸುವುದರೊಂದಿಗೆ ಅಮೋಘ ಕಮ್‌ಬ್ಯಾಕ್ ಮಾಡಿದ್ದರು. ಅಲ್ಲಿಂದ ಈಚೆಗೆ ಅವರು ಹೊರಳಿ ನೋಡಿದ್ದೇ ಇಲ್ಲ. ಪಂದ್ಯದ ವೇಳೆ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಪಿಚ್‌ಗೆ ನುಗ್ಗಿ ಬಂದು ಕೊಹ್ಲಿ ಕಾಲಿಗೆ ನಮಸ್ಕರಿಸಿ ಹೋಗುವ ಅಭಿಮಾನಿಗಳನ್ನು ಗಳಿಸಿಕೊಳ್ಳುವ ಮಟ್ಟಕ್ಕೆ ಕೊಹ್ಲಿ ಬೆಳೆದಿದ್ದಾರೆ.

ಅವರು ಕೆಲವು ಪಂದ್ಯಗಳಲ್ಲಿ ಸೋತಿರಬಹುದು. ಯಾವುದೇ ಮಾದರಿಯ ವಿಶ್ವಕಪ್ ಜಯಿಸಲು ಅವರ ನಾಯಕತ್ವದ ತಂಡಕ್ಕೆ ಸಾಧ್ಯವಾಗಿಲ್ಲದಿರಬಹುದು. ಆದರೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ತಂಡ ಮತ್ತು ತಮ್ಮ ವೈಯಕ್ತಿಕ ಸ್ಥಾನವನ್ನು ಉನ್ನತ ಮಟ್ಟದಲ್ಲಿಯೇ ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಪಂದ್ಯದ ಸಂದರ್ಭದಲ್ಲಿ ತೋರುವ ಆಕ್ರಮಣಶೀಲ ನಡವಳಿಕೆಯಿಂದಾಗಿ ಎದುರಾಳಿಗಳಿಗೆ ಒತ್ತಡ ಹೆಚ್ಚುವುದು ನಿಜ. ಇದನ್ನು ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರರೇ ಒಪ್ಪಿಕೊಂಡಿದ್ದಾರೆ.

ಪಂದ್ಯದಲ್ಲಿ ಬೌಲರ್‌ಗಳಿಗೆ ಬ್ಯಾಟ್‌ನಿಂದ ಮತ್ತು ಕೀಟಲೆಗಳಿಗೆ ಪ್ರತಿ ಕೀಟಲೆಯಿಂದಲೇ ಉತ್ತರಿಸುವ ಕೊಹ್ಲಿ ಮೈದಾನದಿಂದ ಹೊರಗೆ ಬಂದರೆ ಎಲ್ಲರಿಗೂ ಆಪ್ತಮಿತ್ರ. ಅದು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌, ಇಂಗ್ಲೆಂಡ್‌ನ ಜೋ ರೂಟ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಆ್ಯರನ್ ಫಿಂಚ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಅವರೆಲ್ಲರೂ ಕೊಹ್ಲಿಯ ಗೆಳೆಯರೇ. ವಯಸ್ಸಿನ ಬೇಧ ಭಾವ ಇಲ್ಲದೇ ಬೆರೆಯುವ ಕೊಹ್ಲಿ ಸಹಜವಾಗಿಯೇ ತಮ್ಮ ವರ್ಚಸ್ಸು ಹೆ್ಚ್ಚಿಸಿಕೊಂಡಿದ್ದಾರೆ.

ಅವರು 19 ವರ್ಷದೊಳಗಿನವರ ವಿಶ್ವಕಪ್ ಗೆದ್ದು ಭಾರತ ತಂಡಕ್ಕೆ ಕಾಲಿಟ್ಟಾಗ ಹಲವಾರು ಗಾಸಿಪ್‌ಗಳಿಗೂ ಗ್ರಾಸವಾಗಿದ್ದರು. ತಮ್ಮ ಮುಂಗೋಪದ ಕಾರಣ ಮಾಧ್ಯಮಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಅವರು ಕೆಲವು ಜನ್ರಪಿಯ ನಟಿಯರೊಂದಿಗಿನ ಸುತ್ತಾಟಗಳೂ ಸುದ್ದಿಯಾಗಿದ್ದವು. ಆದರೆ ಆಗಿನ ಭಾರತ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಮತ್ತು ಅನುಭವಿ ಆಟಗಾರ ಸಚಿನ್ ತೆಂಡೂಲ್ಕರ್ ವಿರಾಟ್ ಕಿವಿ ಹಿಂಡಿದರು. ಆಟದ ಮೇಲೆ ಗಮನ ನೀಡುವಂತೆ ಹೇಳಿದರು.ಕೆಲವು ದಿನಗಳ ನಂತರ ಪರಿಚಯವಾದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಾಳಸಂಗಾತಿಯೂ ಆದರು. ಕೊಹ್ಲಿಯ ಒರಟು ಗುಣಗಳನ್ನು ತಿದ್ದುವಲ್ಲಿ ಸಫಲರಾದರು. ಹೊಣೆಗಾರಿಕೆ, ಬದ್ಧತೆಗಳನ್ನು ಮೇಳೈಸಿದ ಕ್ರಿಕೆಟ್ ಆಟಗಾರನಾಗಿ ಬೆಳೆದಿರುವ ಕೊಹ್ಲಿ ಈಗ ಹಲವಾರು ದಾಖಲೆಗಳ ಒಡೆಯ.

ಇದೀಗ ಅವರು ಬೆಳೆದಿರುವ ರೀತಿ ಯಾವ ತರಹ ಇದೆಯೆಂದರೆ, ಕೊ‌ಹ್ಲಿ ಬ್ಯಾಟಿಂಗ್‌ನಲ್ಲಿ ಸೋತರೂ, ತಂಡ ಪರಾಭವಗೊಂಡರೂ ಸುದ್ದಿಯಾಗುತ್ತಾರೆ. ಏನು ಮಾಡಿದರೂ ಅವರ ಫಾಲೋವರ್ಸ್‌ಗಳ ಸಂಖ್ಯೆ ಏರುಮುಖವಾಗುತ್ತದೆ.

ವಿರಾಟ್ ಕೊಹ್ಲಿಯ ಅಭಿಮಾನಿ
ವಿರಾಟ್ ಕೊಹ್ಲಿಯ ಅಭಿಮಾನಿ

ಕಳೆದ ಹದಿನೈದು ತಿಂಗಳುಗಳಲ್ಲಿ ಭಾರತವು ಅಡಿದ ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಒಂದೂ ಶತಕ ದಾಖಲಿಸಿಲ್ಲ. 2020ರಲ್ಲಿ ಕೊರೊನಾ ಕಾರಣದಿಂದ ಬಹಳಷ್ಟು ಕ್ರಿಕೆಟ್ ಸರಣಿಗಳು ರದ್ದಾಗಿದ್ದವು. ಭಾರತ ತಂಡವು ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಗೂ ಮುನ್ನ ಯಾವುದೇ ಪಂದ್ಯದಲ್ಲಿಯೂ ಆಡಿರಲಿಲ್ಲ. ಹೋದ ನವೆಂಬರ್–ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡವು ಇನಿಂಗ್ಸ್‌ನಲ್ಲಿ ಅತ್ಯಂತ ಕನಿಷ್ಠ ಸ್ಕೋರ್ 36 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು. ಆಗಲೂ ಅವರು ಪಿತೃತ್ವ ರಜೆ ತೆಗೆದುಕೊಂಡಾಗ ಹಲವರು ಟೀಕಿಸಿದ್ದರು. ಆದರೆ ಅವರ ಪರವಾಗಿ ನಿಂತವರ ಸಂಖ್ಯೆ ಅದಕ್ಕಿಂತಲೂ ಹೆಚ್ಚಿತ್ತು.

ಐಪಿಎಲ್‌ನಲ್ಲಿ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ಬಾರಿಯೂ ಪ್ರಶಸ್ತಿ ಜಯಿಸಿಲ್ಲ. ಆದರೂ ಕೊಹ್ಲಿಯ ಮತ್ತು ಆರ್‌ಸಿಬಿಯ ಬ್ರ್ಯಾಂಡ್ ಮೌಲ್ಯ ಒಂಚೂರೂ ಕುಸಿದಿಲ್ಲ. ಬದಲಿಗೆ; ವರ್ಷದಿಂದ ವರ್ಷಕ್ಕೆ ಅವರ ಬ್ರ್ಯಾಂಡ್ ಮೌಲ್ಯ ವರ್ಧಿಸುತ್ತಿದೆ. ಈಚೆಗೆ ಭಾರತೀಯ ಮಾನವ ಬ್ರ್ಯಾಂಡ್‌ ಸಂಸ್ಥೆ (ಐಐಎಚ್‌ಬಿ- The Indian Institute of Human Brands) ನಡೆಸಿದ ಸಮೀಕ್ಷಾ ವರದಿಯನ್ನೇ ನೋಡಿ. ಇವತ್ತು ಮಾರುಕಟ್ಟೆಯಲ್ಲಿ ಅತ್ಯಂತ ನಿರ್ಭೀತ ಮತ್ತು ಸ್ಪುರದ್ರೂಪಿ ಯುವನಾಯಕನೆಂದರೆ ವಿರಾಟ್ ಕೊಹ್ಲಿ. ದೇಶದ 23 ಪ್ರಮುಖ ನಗರಗಳಲ್ಲಿ 60 ಸಾವಿರ ಜನರಿಂದ ಸಂಗ್ರಹಿಸಿದ ಅಭಿಪ್ರಾಯಗಳ ಫಲಿತಾಂಶವಿದು.

ವಿರಾಟ್, ಪ್ರಮುಖ 17 ಕಂಪನಿಗಳಿಗೆ ಪ್ರಚಾರ ರಾಯಭಾರಿಯಾಗಿದ್ದಾರೆ. ಅತಿ ಹೆಚ್ಚು ಆದಾಯ ಗಳಿಸುವ ಕ್ರಿಕೆಟಿಗ (₹ 105 ಕೋಟಿ) ಎಂದು ಈಚೆಗಷ್ಟೇ ಫೋರ್ಬ್ಸ್‌ ನಿಯತಕಾಲಿಕೆಯೂ ಪ್ರಕಟಿಸಿತ್ತು. ಈ ವಿಷಯದಲ್ಲಿ ಕೊಹ್ಲಿ, ಫುಟ್‌ಬಾಲ್ ತಾರೆಯರನ್ನೂ ಮೀರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಿಗೂ ಕೊಹ್ಲಿಯೇ ಕಣ್ಮಣಿ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಮೂರು ಪೋಸ್ಟ್‌ಗಳಿಂದ ಬಂದ ಹಣ ₹ 3.65 ಕೋಟಿ.

ತಮ್ಮನ್ನು ಸದಾ ಫಿಟ್‌ ಆಗಿ ಇಟ್ಟುಕೊಳ್ಳಲು ಕೊಹ್ಲಿ ಅವರು ಜಿಮ್ನಾಷಿಯಂನಲ್ಲಿ ವ್ಯಯಿಸುವ ಸಮಯ ಮತ್ತು ಪಡುವಶ್ರಮ ಯುವ ಆಟಗಾರರಿಗೆ ಮಾದರಿಯೇ ಸರಿ. ಯಶಸ್ಸು, ಹೆಸರು, ಹಣ ಪದತಲಕ್ಕೆ ಬಂದು ಬಿದ್ದರೂ ಅಲ್ಪತೃಪ್ತನಾಗದೇ ದಿನದಿಂದ ದಿನಕ್ಕೆ ತಮ್ಮ ಆಟವನ್ನು ಮತ್ತಷ್ಟು ಉತ್ಕೃಷ್ಟ ಗೊಳಿಸಿಕೊಳ್ಳುವ, ಅದರೊಂದಿಗೆ ಮನಸ್ಸನ್ನು ಹುರಿಗೊಳಿಸಿಕೊಳ್ಳುತ್ತ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಅವರ ಪರಿಯಿಂದ ಪ್ರೇರಣೆಗೊಂಡಿರುವ ಯುವ ಅಟಗಾರರೂ ಎದುರಾಳಿ ತಂಡದ ಘಟಾನುಘಟಿಗಳಿಗೆ ನೀರು ಕುಡಿಸುತ್ತಿದ್ದಾರೆ. ತಂಡದ ಬೆಂಚ್ ಶಕ್ತಿ ಬಹಳಷ್ಟು ಬಲಿಷ್ಠವಾಗಿದೆ. ಇದು ಕೊಹ್ಲಿ ನಾಯಕತ್ವದ ಬ್ರ್ಯಾಂಡ್‌ನ ಪರಿಣಾಮ.

ಏಕೆಂದರೆ; ಅವರು ಡೆಮಿ ಲೊವೆಟ್ ಹಾಡಿನಲ್ಲಿ ಬರುವ ’ಜನ ಏನನ್ನುತ್ತಾರೋ ಎಂಬ ಹಿಂಜರಿಕೆ ಬೇಡ‘ ಎಂಬರ್ಥದಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಖಿನ್ನತೆಯಂತಹ ಸಮಸ್ಯೆಗಳು ಬಂದಾಗ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅದರಿಂದ ಹೊರಬಂದು ಯಶಸ್ಸಿನ ತುದಿಗೇರಿದ್ದಾರೆ. ಮನಸ್ಸು ಸದೃಢವಾಗಿದ್ದರೆ ದೇಹವೂ ಜೊತೆಗೂಡುತ್ತದೆಯಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT