ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಮ್ ಇಂಡಿಯಾ ಮುಖ್ಯ ಕೋಚ್‌ ಆಗಿ ದ್ರಾವಿಡ್‌ ಮುಂದುವರಿಕೆ

Published 29 ನವೆಂಬರ್ 2023, 9:26 IST
Last Updated 29 ನವೆಂಬರ್ 2023, 9:26 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅವರ ಗುತ್ತಿಗೆ ಅವಧಿಯನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಬುಧವಾರ ಮುಂದುವರಿಸಿದೆ. ಆದರೆ ಅವರ ಅವಧಿ ಎಲ್ಲಿಯವರೆಗೆ ಇದೆ ಎಂಬುದನ್ನು ತಿಳಿಸಿಲ್ಲ.

‌ದ್ರಾವಿಡ್‌ ತರಬೇತಿಯ ಭಾರತ ತಂಡ ಇತ್ತೀಚೆಗೆ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಅಹಮದಾಬಾದಿನಲ್ಲಿ ನ. 19ರಂದು ಫೈನಲ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಸೋಲುವ ಮೊದಲು ಸತತವಾಗಿ 10 ಪಂದ್ಯಗಳನ್ನು ಗೆದ್ದು ಅಜೇಯ ಸಾಧನೆ ಪ್ರದರ್ಶಿಸಿತ್ತು.

ದ್ರಾವಿಡ್‌ ಅವರೊಂದಿಗೆ ನೆರವು ಸಿಬ್ಬಂದಿ ಗುತ್ತಿಗೆಯನ್ನೂ ವಿಸ್ತರಿಸಲಾಗಿದೆ.

ರವಿ ಶಾಸ್ತ್ರಿ ಅವರ ಉತ್ತರಾಧಿಕಾರಿಯಾಗಿ 2021ರ ನವೆಂಬರ್‌ನಲ್ಲಿ (ಟಿ20 ವಿಶ್ವಕಪ್‌ ನಂತರ) ದ್ರಾವಿಡ್‌ ಎರಡು ವರ್ಷಗಳ ಅವಧಿಗೆ ಕೋಚ್‌ ಆಗಿ ನೇಮಕಗೊಂಡಿದ್ದರು. ವಿಶ್ವಕಪ್‌ವರೆಗೆ ಅವರ ಗುತ್ತಿಗೆ ಅವಧಿಯಿತ್ತು. ದ್ರಾವಿಡ್‌ ಅವಧಿಯಲ್ಲಿ ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲೂ ರನ್ನರ್ ಅಪ್ ಆಗಿತ್ತು. ಅಲ್ಲೂ ಆಸ್ಟ್ರೇಲಿಯಾ ಜಯಶಾಲಿಯಾಗಿತ್ತು.

‘ಐಸಿಸಿ ಟ್ರೋಫಿ ಗೆಲ್ಲಿಸಿಕೊಡಬೇಕೆಂಬ ದ್ರಾವಿಡ್‌ ಬೆನ್ನಿಗೆ ಬಿಸಿಸಿಐ ನಿಲ್ಲಲಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಥಿರವಾದ ಪ್ರದರ್ಶನ ನೀಡಲು ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನು ಅವರಿಗೆ ನೀಡಲಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಭಾರತ ಸುಮಾರು 12 ವರ್ಷಗಳಿಂದ ಐಸಿಸಿಯ ಯಾವುದೇ ಪ್ರಮುಖ ಟ್ರೋಫಿ ಗೆದ್ದುಕೊಂಡಿಲ್ಲ.

‘ಟೀಮ್ ಇಂಡಿಯಾ ಜೊತೆಗಿನ ಕಳೆದ ಎರಡು ವರ್ಷಗಳು ಸ್ಮರಣೀಯವಾಗಿದೆ. ಜೊತೆಯಾಗಿ ನಾವು ಏಳುಬೀಳುಗಳನ್ನು ಕಂಡೆವು. ಈ ಯಾನದಲ್ಲಿ ತಂಡದೊಳಗೆ ಸಿಕ್ಕ ಬೆಂಬಲ ಮತ್ತು ಅನ್ಯೋನ್ಯತೆ ಅದ್ಭುತ’ ಎಂದು ಅವರು ಹೇಳಿದರು.

ದ್ರಾವಿಡ್ ಅವರ ಅವಧಿ ಮುಂದಿನ ವರ್ಷದ ಜೂನ್– ಜುಲೈ ತಿಂಗಳಲ್ಲಿ ವೆಸ್ಟ್‌ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯುವ ಟಿ20 ವಿಶ್ವಕಪ್‌ವರೆಗೆ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ.

50 ವರ್ಷದ ದ್ರಾವಿಡ್ ಜತೆ ನೆರವು ಸಿಬ್ಬಂದಿಯಾಗಿದ್ದ ಬ್ಯಾಟಿಂಗ್ ಕೋಚ್‌ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್‌ ಪರಾಸ್ ಮಹಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್‌ ಟಿ. ದಿಲೀಪ್ ಅವರ ಗುತ್ತಿಗೆ ಅವಧಿಯನ್ನೂ ಮುಂದುವರಿಸಲಾಗಿದೆ.

ವಿಶ್ವಕಪ್‌ ನಂತರ ದ್ರಾವಿಡ್‌ ಜೊತೆ ಬಿಸಿಸಿಐ ಮಾತುಕತೆ ನಡೆಸಿತ್ತು. ‘ಭಾರತ ತಂಡವನ್ನು ಸಶಕ್ತವಾಗಿ ರೂಪಿಸುವಲ್ಲಿ ದ್ರಾವಿಡ್ ವಹಿಸಿದ ಪಾತ್ರವನ್ನು ಬಿಸಿಸಿಐ ಗುರುತಿಸಿದೆ. ಅವರ ವೃತ್ತಿಪರತೆಯನ್ನು ಶ್ಲಾಘಿಸುತ್ತಿದೆ’ ಎಂದು ಹೇಳಿಕೆ ತಿಳಿಸಿದೆ.

2012ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ದ್ರಾವಿಡ್‌ 164 ಟೆಸ್ಟ್‌ಗಳಿಂದ 13,288 ರನ್ ಗಳಿಸಿದ್ದಾರೆ. ಭಾರತದಲ್ಲಿ ಸಚಿನ್ ತೆಂಡೂಲ್ಕರ್‌ ನಂತರ ಎರಡನೇ ಸ್ಥಾನದ ಸಾಧನೆಯಿದು. ವಿಶ್ವದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ವಿ.ವಿ.ಎಸ್‌. ಮುಂದುವರಿಕೆ

ವಿ.ವಿ.ಎಸ್‌. ಲಕ್ಷ್ಮಣ್ ಅವರನ್ನು ಎನ್‌ಸಿಎ ಮುಖ್ಯಸ್ಥರನ್ನಾಗಿ ಮುಂದುವರಿಸಲಾಗಿದೆ. ದ್ರಾವಿಡ್
ಅವರು ಅಲ್ಪಾವಧಿಯ ಕೆಲವು ಸರಣಿಗಳಿಗೆ ಬಿಡುವು ಪಡೆದುಕೊಂಡಿದ್ದಾಗ ಲಕ್ಷ್ಮಣ್ ಅವರು
ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT