ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದ್ರಾವಿಡ್ ಶಾಲೆ’ಯ ವಿದ್ಯಾರ್ಥಿ ಶುಭಮನ್

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟದಲ್ಲಿ ವಿಜಯಶಂಕರ್‌ಗೆ ಅವಕಾಶ
Last Updated 13 ಜನವರಿ 2019, 17:26 IST
ಅಕ್ಷರ ಗಾತ್ರ

ಬೆಂಗಳೂರು:ಒಂದು ವರ್ಷದ ಹಿಂದಿನ ಮಾತು. ನ್ಯೂಜಿಲೆಂಡ್‌ನಲ್ಲಿ 19 ವರ್ಷದೊಳಗಿನವರ ಕ್ರಿಕೆಟ್‌ ವಿಶ್ವಕಪ್ ಗೆದ್ದಿದ್ದ ಭಾರತ ತಂಡ ತವರಿಗೆ ಮರಳಿತ್ತು. ಆ ಟೂರ್ನಿಯಲ್ಲಿ ಶ್ರೇಷ್ಠ ಆಟಗಾರ ಗೌರವ ಪಡೆದಿದ್ದ ಶುಭಮನ್ ಗಿಲ್ ತಮ್ಮ ಮನೆಗೆ ತೆರಳಿರಲಿಲ್ಲ.

ಅವರು ನೇರವಾಗಿ ಬೆಂಗಳೂರಿಗೆ ಬಂದಿಳಿದಿದ್ದರು. ಇಲ್ಲಿ ನಡೆಯುತ್ತಿದ್ದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡುತ್ತಿದ್ದ ಪಂಜಾಬ್ ತಂಡವನ್ನು ಸೇರಿಕೊಂಡಿದ್ದರು. ಆಲೂರು ಕ್ರೀಡಾಂಗಣದಲ್ಲಿ ಕರ್ನಾಟಕ ತಂಡದ ಎದುರು ಪಂಜಾಬ್‌ ನಾಲ್ಕು ರನ್‌ಗಳ ರೋಚಕ ಜಯ ಸಾಧಿಸಲು ಅವರ ಶತಕ ಕಾರಣವಾಗಿತ್ತು. ಬಲಗೈ ಬ್ಯಾಟ್ಸ್‌ಮನ್ ಶುಭಮನ್ ಆಟವನ್ನು ಅವರ ತಂದೆ ಲಖ್ವಿಂದರ್ ಸಿಂಗ್ ಕಣ್ತುಂಬಿಕೊಂಡಿದ್ದರು. ಸುಮಾರು ಎರಡು ತಿಂಗಳುಗಳಿಂದ ಮನೆಗೆ ಹೋಗದ ಮಗನನ್ನು ನೋಡಲು ಲಖ್ವಿಂದರ್ ಮತ್ತು ಅವರ ಬಂಧುಗಳು ಬೆಂಗಳೂರಿಗೆ ಬಂದಿದ್ದರು. ಅದೇ ಪಂದ್ಯದಲ್ಲಿ ಕರ್ನಾಟಕದ ಕೆ.ಎಲ್. ರಾಹುಲ್ ಕೂಡ ಶತಕ ಬಾರಿಸಿದ್ದರು.

‘ಶುಭಮನ್ ಪ್ರತಿಭಾವಂತ ನಿಜ. ಆದರೆ, ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಬದ್ಧತೆ, ಶಿಸ್ತು ಮತ್ತು ಏಕಾಗ್ರತೆಗಳನ್ನು ಕಲಿತಿದ್ದಾನೆ. ಅದು ಅವನ ಯಶಸ್ಸಿಗೆ ಕಾರಣವಾಗುತ್ತಿದೆ’ ಎಂದು ಹೇಳಿದ್ದ ಲಖ್ವಿಂದರ್ ಗದ್ಗದಿತರಾಗಿದ್ದರು.

ಇದೀಗ ಅದೇ ನ್ಯೂಜಿಲೆಂಡ್‌ನಲ್ಲಿ ಜ. 23ರಿಂದ ನಡೆಯಲಿರುವ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಶುಭಮನ್ ಆಯ್ಕೆಯಾಗಿದ್ದಾರೆ. ದ್ರಾವಿಡ್ ಶಾಲೆಯ ಮತ್ತೊಬ್ಬ ಪ್ರತಿಭಾವಂತ ವಿದ್ಯಾರ್ಥಿಗೆ ದೊಡ್ಡ ಅವಕಾಶ ಒಲಿದುಬಂದಿದೆ. ವಿವಾದದಲ್ಲಿ ಸಿಲುಕಿ ತಂಡದಿಂದ ಆಮಾನತು ಆಗಿರುವ ಕೆ.ಎಲ್. ರಾಹುಲ್ ಬದಲಿಗೆ ಅವರು ಅವಕಾಶ ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರು ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತವಾಗಿದೆ.

‘ನ್ಯೂಜಿಲೆಂಡ್‌ನಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಕ್ಕರೆ ಅದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೊಂದಿಲ್ಲ. ನನ್ನ ಕ್ರಿಕೆಟ್ ಜೀವನದ ದಿಕ್ಕು ಬದಲಾಗಿದ್ದು ಅಲ್ಲಿಯೇ. ಈ ಆಯ್ಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಶನಿವಾರ ಮಧ್ಯರಾತ್ರಿಯಿಂದಲೂ ಸಂದೇಶಗಳ ಮಹಾರಪೂರವೇ ಹರಿದುಬರುತ್ತಿದೆ. ಪಂಜಾಬ್‌ನ ಹಿರಿಯ ಆಟಗಾರ ಯುವಿ ಪಾಜಿ (ಯುವರಾಜ್ ಸಿಂಗ್), ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ನಾಯಕ ದಿನೇಶ್ ಕಾರ್ತಿಕ್ ಕೂಡ ಅಭಿನಂದಿಸಿದ್ದಾರೆ. ಇದು ನನ್ನ ಮೇಲೆ ಎಲ್ಲರೂ ಇಟ್ಟಿರುವ ನಿರೀಕ್ಷೆಗಳ ಪ್ರತೀಕವಾಗಿವೆ. ಉತ್ತಮವಾಗಿ ಆಡುವ ಛಲ ಮೂಡಿದೆ’ ಎಂದು ಶುಭಮನ್ ಹೇಳಿದ್ದಾರೆ.

ಒಂಬತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಶುಭಮನ್ ಅವರು 1089 ರನ್‌ ಗಳಿಸಿದ್ದಾರೆ. ಅದರಲ್ಲಿ ಮೂರು ಶತ, ಏಳು ಅರ್ಧಶತಕಗಳು ಇವೆ. 36 ಲಿಸ್ಟ್‌ ’ಎ’ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 1529 ರನ್ ಗಳಿಸಿದ್ದಾರೆ. ನಾಲ್ಕು ಶತಕ ಮತ್ತು ಅರ್ಧಶತಕಗಳನ್ನು ಗಳಿಸಿದ್ದಾರೆ.

19 ವರ್ಷದ ಬಲಗೈ ಬ್ಯಾಟ್ಸ್‌ಮನ್ ಈ ಬಾರಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಹೈದರಾಬಾದ್ ಎದುರು ಶಕತ ಬಾರಿಸಿದ್ದರು. ಕೇರಳ ಮತ್ತು ಬಂಗಾಳ ತಂಡಗಳ ಎದುರಿನ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದರು. ‌ಭಾರತ ಎ ತಂಡದಲ್ಲಿಯೂ ಅವರು ಉತ್ತಮ ಸಾಧನೆ ಮಾಡಿದ್ದರು.

‘ರಾಹುಲ್ ಸರ್ ನನ್ನ ಆಟವನ್ನು ಮತ್ತಷ್ಟು ಉತ್ಕೃಷ್ಠಗೊಳಿಸಿದವರು. ಅವರೊಂದಿಗೆ ಇದ್ದಷ್ಟು ಸಮಯವೂ ನನ್ನ ಬ್ಯಾಟಿಂಗ್ ಮತ್ತು ವ್ಯಕ್ತಿತ್ವವನ್ನು ತಿದ್ದಿ ತೀಡಿದರು. ಒತ್ತಡ ನಿರ್ವಹಣೆಯ ಕಲೆಯನ್ನು ಅವರಿಂದಲೇ ಕಲಿತೆ’ ಎಂದು ಗಿಲ್ ಹೇಳುತ್ತಾರೆ.

ವಿಜಯಶಂಕರ್‌ಗೆ ಅವಕಾಶ: ತಮಿಳುನಾಡಿನ ಆಲ್‌ರೌಂಡರ್ ವಿಜಯ ಶಂಕರ್ ಅವರನ್ನು ಹಾರ್ದಿಕ್ ಪಾಂಡ್ಯ ಬದಲಿಗೆ ತಂಡಕ್ಕೆ ಆಯ್ಕೆ ಮಾಡಲಾಗಿದೆ.

27 ವರ್ಷದ ವಿಜಯಶಂಕರ್ ಬಲಗೈ ಮಧ್ಯಮವೇಗಿಯಾಗಿದ್ದಾರೆ. ಅವರು ಹೋದ ವರ್ಷ ಕೊಲಂಬೊದಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಟ್ವೆಂಟಿ–20 ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಒಟ್ಟು ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಿ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಲಭಿಸಿರಲಿಲ್ಲ. ಕಿವೀಸ್ ತಂಡದ ಎದುರಿನ ಸರಣಿಯಲ್ಲಿ ಅವರು ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ.

ಧೋನಿ ವಿಕೆಟ್ ವಿವಾದ

ಶನಿವಾರ ಸಿಡ್ನಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಪಂದ್ಯದಲ್ಲಿ ಮಹೇಂದ್ರಸಿಂಗ್ ಧೋನಿ ಅವರಿಗೆ ನೀಡಿದ ಎಲ್‌ಬಿಡಬ್ಲ್ಯು ತೀರ್ಪು ಈಗ ವಿವಾದಕ್ಕೆ ತಿರುಗಿದೆ. ಆಂಪೈರ್ ನೀಡಿದ ತಪ್ಪು ನಿರ್ಣಯದಿಂದ ಧೋನಿ ಔಟಾದರು. ಅದರಿಂದಾಗಿ ಭಾರತದ ಗೆಲುವು ತಪ್ಪಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.

ಧೋನಿ ಅವರು 51 ರನ್ ಗಳಿಸಿದ್ದಾಗ ಬೆಹ್ರಂಡಾರ್ಫ್ ಎಸೆತವು ಅವರ ಪ್ಯಾಡ್‌ಗೆ ಅಪ್ಪಳಿಸಿತು. ಆಗ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ಯುಡಿಆರ್‌ಎಸ್ (ಅಂಪೈರ್ ತೀರ್ಪು ಮರುಪರಿಶೀಲನೆ ವ್ಯವಸ್ಥೆ) ಅವಕಾಶಗಳು ಮುಗಿದ್ದಿದ್ದರಿಂದ ಧೋನಿ ಪೆವಿಲಿಯನ್‌ಗೆ ನಡೆದರು. ಆದರೆ, ಟಿ.ವಿ. ರಿಪ್ಲೆಗಳಲ್ಲಿ ಚೆಂಡು ಸ್ಟಂಪ್‌ನ ವ್ಯಾಪ್ತಿಯಿಂದ ಹೊರಗಿತ್ತು. ಧೋನಿ 96 ಎಸೆತಗಳಲ್ಲಿ 51 ರನ್‌ ಗಳಿಸಿದರು. ಇದರಿಂದಾಗಿ ಇನ್ನೂ ಕೆಲವರು ಅವರನ್ನು ಟೀಕಸಿದ್ದಾರೆ. ಅವರು ನಿಧಾನವಾಗಿ ಆಡಿದ್ದರಿಂದಲೇ ಭಾರತ ಸೋತಿತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT