ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ಸ್‌ಗೆ ರೋಚಕ ಗೆಲುವು

ಜೋಸ್ ಬಟ್ಲರ್‌, ಕ್ವಿಂಟನ್ ಡಿ ಕಾಕ್‌ ಬ್ಯಾಟಿಂಗ್ ಸೊಗಸು
Last Updated 13 ಏಪ್ರಿಲ್ 2019, 17:57 IST
ಅಕ್ಷರ ಗಾತ್ರ

ಮುಂಬೈ: ಸವಾಲಿನ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್‌ ಅಂತಿಮ ಓವರ್‌ಗಳಲ್ಲಿ ಆತಂಕಕ್ಕೆ ಒಳಗಾಯಿತು. ಆದರೆ ಪಟ್ಟು ಬಿಡದೆ ಹೋರಾಡಿದ ಬ್ಯಾಟ್ಸ್‌ಮನ್‌ಗಳು ಕೊನೆಗೂ ಗೆದ್ದು ಸಂಭ್ರಮಿಸಿದರು. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು ನಾಲ್ಕು ವಿಕೆಟ್‌ಗಳಿಂದ ಗೆದ್ದಿತು.

ಆರಂಭಿಕ ಜೋಡಿ ರೋಹಿತ್ ಶರ್ಮಾ (47; 32 ಎಸೆತ, 1 ಸಿಕ್ಸರ್‌, 6 ಬೌಂಡರಿ) ಮತ್ತು ಕ್ವಿಂಟನ್ ಡಿ ಕಾಕ್‌ (81; 52 ಎ, 4 ಸಿ, 6 ಬೌಂ) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ 187 ರನ್ ಗಳಿಸಿತ್ತು.

ಗುರಿ ಬೆನ್ನತ್ತಿದ ರಾಯಲ್ಸ್‌ಗೆ ನಾಯಕ ಅಜಿಂಕ್ಯ ರಹಾನೆ (37; 21 ಎ; 1 ಸಿಕ್ಸರ್‌, 6 ಬೌಂ) ಮತ್ತು ಜೋಸ್ ಬಟ್ಲರ್‌ (89; 43 ಎ, 7 ಸಿ, 8 ಬೌಂ) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಇವರು 60 ರನ್‌ ಸೇರಿಸಿದರು. ಅಜಿಂಕ್ಯ ರಹಾನೆ ಔಟಾದ ನಂತರ ಬಟ್ಲರ್ ಜೊತೆಗೂಡಿದ ಸಂಜು ಸ್ಯಾ‌ಮ್ಸನ್‌ ಕೂಡ ಮಿಂಚಿದರು. ಎರಡನೇ ವಿಕೆಟ್‌ಗೆ ಇವರು 87 ರನ್‌ಗಳ ಜೊತೆಯಾಟ ಆಡಿದರು.

ಬಟ್ಲರ್ ಔಟಾದ ನಂತರ ರನ್‌ ಗಳಿಕೆ ಪ್ರಮಾಣದಲ್ಲಿ ಇಳಿಕೆ ಕಂಡಿತು. ವಿಕೆಟ್‌ಗಳು ಕೂಡ ಉರುಳಿದವು. ಕೊನೆಯ ಓವರ್‌ಗಳಲ್ಲಿ ಜಸ್‌ಪ್ರೀತ್ ಬೂಮ್ರಾ ಮತ್ತು ಕೃಣಾಲ್ ಪಾಂಡ್ಯ ದಾಳಿಗೆ ರಾಯಲ್ಸ್ ಬಾಲಂಗೋಚಿಗಳು ಕಂಗೆಟ್ಟರು.

ಆದರೆ ಕನ್ನಡಿಗರಾದ ಶ್ರೇಯಸ್ ಗೋಪಾಲ್‌ ಮತ್ತು ಕೆ.ಗೌತಮ್‌ ಜೊತೆಗೂಡಿ ರೋಚಕ ಜಯ ತಂದುಕೊಟ್ಟರು. ಹಾರ್ದಿಕ್ ಪಾಂಡ್ಯ ಹಾಕಿದ ಕೊನೆಯ ಓವರ್‌ನ ಮೂರನೇ ಎಸೆತವನ್ನು ಬೌಂಡರಿಗೆ
ಅಟ್ಟಿದ ಗೋಪಾಲ್‌ ಸಂಭ್ರಮದಲ್ಲಿ ನಲಿದರು.

ರಂಜಿಸಿದ ಕ್ವಿಂಟನ್‌: ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ಆತಿಥೇಯರ ಪರ ಕ್ವಿಂಟನ್ ಡಿಕಾಕ್ ಮಿಂಚಿದರು. ಮೋಹಕ ಹೊಡೆತಗಳ ಮೂಲಕ ತವರಿನ ಪ್ರೇಕ್ಷಕರನ್ನು ರಂಜಿಸಿದರು. ನಾಯಕನ ಜೊತೆಗೂಡಿ ಮೊದಲ ವಿಕೆಟ್‌ಗೆ ಅವರು 96 ರನ್‌ಗಳನ್ನು ಸೇರಿಸಿದರು. ಈ ಜೊತೆಯಾಟ ಮುರಿದು ಬಿದ್ದ ನಂತರ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಉತ್ತಮ ಬ್ಯಾಟಿಂಗ್ ಮಾಡಿದರು. ಹೀಗಾಗಿ ತಂಡ ಸವಾಲಿನ ಮೊತ್ತ ಪೇರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT