ಶನಿವಾರ, ಫೆಬ್ರವರಿ 27, 2021
23 °C
ಕರ್ನಾಟಕ–ಸೌರಾಷ್ಟ್ರ ಹಣಾಹಣಿ ಇಂದಿನಿಂದ; ರಾಜ್ಯ ತಂಡ ಈ ಬಾರಿ ಅಜೇಯವಾಗಿದೆ

ರಣಜಿ ಕ್ರಿಕೆಟ್: ರಾಜ್‌ಕೋಟ್‌ನಲ್ಲಿ ‘ರಾಜ’ ಯಾರು?

ಪಿಟಿಐ Updated:

ಅಕ್ಷರ ಗಾತ್ರ : | |

ರಾಜ್‌ಕೋಟ್: ಕೆ.ಎಲ್. ರಾಹುಲ್ ಮತ್ತು ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರು ಇರದ ಕರ್ನಾಟಕ, ಚೇತೇಶ್ವರ್ ಪೂಜಾರ ಹಾಗೂ ರವೀಂದ್ರ ಜಡೇಜ ಅವರಿಲ್ಲದ ಸೌರಾಷ್ಟ್ರ ತಂಡಗಳು ಗುರುವಾರದಿಂದ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಇಲ್ಲಿ ಮುಖಾಮುಖಿಯಾಗಲಿವೆ.

ರಣಜಿ ಟ್ರೋಫಿ ಟೂರ್ನಿಯ ’ಎ’ ಮತ್ತು ’ಬಿ’ ಜಂಟಿ ಗುಂಪಿನಲ್ಲಿರುವ ಈ ಎರಡು ತಂಡಗಳ ಹಣಾಹಣಿಗೆ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣ ವೇದಿಕೆಯಾಗಲಿದೆ. ಈ ಟೂರ್ನಿಯಲ್ಲಿ ಸೌರಾಷ್ಟ್ರ ತಂಡವು ಜಂಟಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನಾಲ್ಕು ಪಂದ್ಯಗಳನ್ನು ಆಡಿರುವ ಜಯದೇವ್ ಶಾ ನಾಯಕತ್ವದ ತಂಡವು ಮೂರರಲ್ಲಿ ಡ್ರಾ ಸಾಧಿಸಿ, ಒಂದರಲ್ಲಿ ಜಯಿಸಿದೆ. ಒಟ್ಟು 13 ಅಂಕಗಳು ತಂಡದ ಖಾತೆಯಲ್ಲಿವೆ. ಕರ್ನಾಟಕ ತಂಡವು ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿಯೂ ಸೋತಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಡ್ರಾ ಮತ್ತು ಹೋದ ವಾರ ಮೈಸೂರಿನಲ್ಲಿ ಮಹಾರಾಷ್ಟ್ರದ ಎದುರು ಏಳು ವಿಕೆಟ್‌ಗಳ ಭರ್ಜರಿ ಜಯವನ್ನು ತಂಡವು ದಾಖಲಿಸಿದೆ. ಇದರಿಂದಾಗಿ ಒಟ್ಟು 12 ಪಾಯಿಂಟ್ಸ್‌ಗಳು ತಂಡಕ್ಕೆ ಲಭಿಸಿವೆ.  ತಲಾ ನಾಲ್ಕು ಪಂದ್ಯಗಳನ್ನು ಆಡಿರುವ ವಿದರ್ಭ ಮತ್ತು ಬಂಗಾಳ ತಂಡಗಳು ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಕರ್ನಾಟಕ ಆರನೇ ಸ್ಥಾನದಲ್ಲಿದೆ.

ಹೋದ ಪಂದ್ಯದಲ್ಲಿ ಪ್ರಮುಖ ಆಟಗಾರರಾದ ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್. ಮನೀಷ್ ಪಾಂಡೆ, ಆರ್. ಸಮರ್ಥ್, ಕರುಣ್ ನಾಯರ್, ಕೃಷ್ಣಪ್ಪ ಗೌತಮ್ ಅವರು ಕರ್ನಾಟಕ ತಂಡದಲ್ಲಿ ಇರಲಿಲ್ಲ. ಅನುಭವಿ ಆಟಗಾರರಾದ ಸಿ.ಎಂ. ಗೌತಮ್ ಮತ್ತು ಸ್ಟುವರ್ಟ್‌ ಬಿನ್ನಿ ಅವರನ್ನು ಕೈಬಿಡಲಾಗಿತ್ತು. ಆದರೆ ನವಪ್ರತಿಭೆಗಳಾದ ದೇವದತ್ತ ಪಡಿಕ್ಕಲ್, ಕೆ.ವಿ. ಸಿದ್ಧಾರ್ಥ್, ಮೀರ್ ಕೌನೇನ್ ಅಬ್ಬಾಸ್, ಜೆ. ಸುಚಿತ್ ಅವರ ಆಟವು ರಂಗೇರಿತ್ತು. ಅನುಭವಿ ನಾಯಕ ಆರ್. ವಿನಯಕುಮಾರ್ ಕೂಡ ಮಿಂಚಿದ್ದರು. ಅದರಿಂದಾಗಿ ಗೆಲುವು ಒಲಿದಿತ್ತು.  ‌

ರಾಜ್ ಕೋಟ್ ಪಂದ್ಯದಲ್ಲಿ ಕರುಣ್ ನಾಯರ್ ಮತ್ತು ಸಮರ್ಥ್ ಅವರು ತಂಡಕ್ಕೆ ಮರಳುವ ನಿರೀಕ್ಷೆ ಇದೆ. ಇದರಿಂದಾಗಿ ಅವರಿಗೆ ಯುವ ಆಟಗಾರರು ಸ್ಥಾನ ಕಲ್ಪಿಸಿಕೊಡುವ ಸಾಧ್ಯತೆ ಇದೆ. ಸೌರಾಷ್ಟ್ರ ತಂಡದ ನಾಯಕ ಜಯದೇವ್ ಮತ್ತು ಅರ್ಪಿತ್ ವಾಸವದಾ ಅವರು ಬರೋಡಾ ಎದುರಿನ ಪಂದ್ಯದಲ್ಲ ಶತಕ ಗಳಿಸಿದ್ದರು. ಈ ಪಂದ್ಯದಲ್ಲಿಯೂ ಅವರು ಬೌಲರ್‌ಗಳಿಗೆ ಸವಾಲೊಡ್ಡುವ ನಿರೀಕ್ಷೆ ಇದೆ. 

ತಂಡಗಳು ಇಂತಿವೆ
ಕರ್ನಾಟಕ: ಆರ್. ವಿನಯಕುಮಾರ್ (ನಾಯಕ), ಬಿ.ಆರ್. ಶರತ್ (ವಿಕೆಟ್‌ಕೀಪರ್), ದೇವದತ್ತ ಪಡಿಕ್ಕಲ್, ಡೇಗಾ ನಿಶ್ಚಲ್, ಮೀರ್ ಕೌನೇನ್ ಅಬ್ಬಾಸ್, ಕೆ.ವಿ. ಸಿದ್ಧಾರ್ಥ್, ಜೆ. ಸುಚಿತ್, ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್, ಆಭಿಮನ್ಯು ಮಿಥುನ್, ರೋನಿತ್ ಮೋರೆ, ಕರುಣ್ ನಾಯರ್, ಆರ್. ಸಮರ್ಥ್, ಪ್ರಸಿದ್ಧ ಕೃಷ್ಣ, ಶಿಶಿರ್ ಭವಾನೆ, ಶ್ರೀನಿವಾಸ್ ಶರತ್, ಲಿಯಾನ್ ಖಾನ್.

ಸೌರಾಷ್ಟ್ರ: ಜಯದೇವ್ ಶಾ (ನಾಯಕ), ಸ್ನೆಲ್ ಪಟೇಲ್ (ವಿಕೆಟ್ ಕೀಪರ್), ಅರ್ಪಿತ್ ವಾಸವದಾ. ಶೆಲ್ಡನ್ ಜ್ಯಾಕ್ಸನ್, ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಧರ್ಮೇಂದ್ರಸಿಂಗ್ ಜಡೇಜ, ಯುವಾಜ್ ಚೂಡಾಸಮಾ, ಅಗ್ನಿವೇಶ್ ಅಯಾಚಿ, ಚೇತನ್ ಸಕಾರಿಯಾ, ಹಾರ್ದಿಕ್ ರಾಥೋಡ್, ಅವಿ ಬಾರೊತ್, ಸಮರ್ಥ್ ವ್ಯಾಸ್, ಕಿಶನ್ ಪರಮಾರ್, ಜೈ ಚೌಹಾಣ್, ಕಮಲೇಶ್ ಮಕ್ವಾನ, ಶೌರ್ಯ ಸಾನಂದಿಯಾ, ಜಯದೇವ್ ಉನದ್ಕತ್.

ಪಂದ್ಯ ಆರಂಭ: ಬೆಳಿಗ್ಗೆ 9.30 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು