ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಕರ್ನಾಟಕಕ್ಕೆ ಜಯದ ಸಂಭ್ರಮ

ಗೌತಮ್, ಪ್ರಸಿದ್ಧ ಮೋಡಿ; ದೇವ್ ಸಿಂಗ್, ಅಬ್ದುಲ್ ಸಮದ್ ವಿರೋಚಿತ ಹೋರಾಟ
Last Updated 27 ಫೆಬ್ರುವರಿ 2022, 14:06 IST
ಅಕ್ಷರ ಗಾತ್ರ

ಚೆನ್ನೈ: ದಿಟ್ಟ ಪ್ರತಿರೋಧವೊಡ್ಡಿದ ಜಮ್ಮು ಕಾಶ್ಮೀರ ತಂಡದ ನಾಯಕ ಇಯಾನ್ ದೇವ್ ಸಿಂಗ್ ಮತ್ತು ಅಬ್ದುಲ್ ಸಮದ್ ಅವರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಕರ್ನಾಟಕ ತಂಡಕ್ಕೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಜಯದ ಕಾಣಿಕೆ ನೀಡಿದರು.

ಐಐಟಿ ಕೆಮ್‌ಪ್ಲಾಸ್ಟ್ ಮೈದಾನದಲ್ಲಿ ಭಾನುವಾರ ಮುಕ್ತಾಯವಾದ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗವು 117 ರನ್‌ಗಳಿಂದ ಜಮ್ಮು ಕಾಶ್ಮೀರ ತಂಡವನ್ನು ಮಣಿಸಿತು. ಇದರೊಂದಿಗೆ ಆರು ಅಂಕಗಳನ್ನು ಜೇಬಿಗಿಳಿಸಿಕೊಂಡಿತು. ಮೊದಲ ಪಂದ್ಯದಲ್ಲಿ ರೈಲ್ವೆ ವಿರುದ್ಧ ಡ್ರಾ ಸಾಧಿಸಿದ್ದ ಕರ್ನಾಟಕ, ಈ ಬಾರಿಯ ಟೂರ್ನಿಯಲ್ಲಿ ಪ್ರಥಮ ಜಯದ ಸಂಭ್ರಮ ಆಚರಿಸಿತು. ಸಿ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಜಯಕ್ಕಾಗಿ 507 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕಾಶ್ಮೀರ ತಂಡವು 98.5 ಓವರ್‌ಗಳಲ್ಲಿ 390 ರನ್ ಗಳಿಸಿತು. ಶನಿವಾರ ಮೂರನೇ ದಿನದಾಟದ ಅಂತ್ಯಕ್ಕೆ 57.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 189 ರನ್‌ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಇಯಾನ್ ದೇವ್ ಮತ್ತು ಸಮದ್ ಕೊನೆಯ ದಿನ ಬೆಳಗಿನ ಅವಧಿಯಲ್ಲಿ ಚೆಂದದ ಬ್ಯಾಟಿಂಗ್ ಮಾಡಿದರು. ಕರ್ನಾಟಕದ ಬೌಲರ್‌ಗಳನ್ನು ಕಾಡಿದರು ತಮ್ಮ ತಂಡದ ಸೋಲು ತಪ್ಪಿಸಲು ಇಯಾನ್ ದೇವ್ (110; 188ಎ, 4X15, 2X6) ಮತ್ತು ಅಬ್ದುಲ್ ಸಮದ್ (70; 78ಎ) ವಿರೋಚಿತ ಹೋರಾಟ ನಡೆಸಿದರು. ಐದನೇ ವಿಕೆಟ್‌ ಜೊತೆಯಾಟದಲ್ಲಿ 143 ರನ್‌ ಸೇರಿಸಿದರು.

ಇನಿಂಗ್ಸ್‌ನ 76ನೇ ಓವರ್‌ನಲ್ಲಿ ಸಮದ್ ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದ ಗೌತಮ್ ಜೊತೆಯಾಟವನ್ನು ಮುರಿದರು. ಇದಾಗಿ ನಾಲ್ಕು ಓವರ್‌ಗಳ ನಂತರ ಗೌತಮ್ ಮತ್ತೊಂದು ಪೆಟ್ಟು ಕೊಟ್ಟರು. ಇಯಾನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ಆದರೂ ಛಲ ಬಿಡದ ಕಾಶ್ಮೀರದ ಪರ್ವೇಜ್ ರಸೂಲ್ (46; 63ಎ, 4X6) ಮತ್ತು ಅಬಿದ್ ಮುಷ್ತಾಕ್ (43; 35ಎ, 4X5, 6X3) ಪ್ರತಿರೋಧವೊಡ್ಡಿದರು. ದಿನದಾಟದ ತಂಡವನ್ನು ಡ್ರಾದತ್ತ ಕೊಂಡೊಯ್ಯುವ ಸಾಹಸ ಮಾಡಿದರು.

ಆದರೆ, ಮಧ್ಯಮವೇಗಿ ಪ್ರಸಿದ್ಧಕೃಷ್ಣ ಇದಕ್ಕೆ ಅವಕಾಶ ಕೊಡಲಿಲ್ಲ. ರಸೂಲ್ ಮತ್ತು ಅಬಿದ್ ಅವರಿಬ್ಬರಿಗೂ ಪೆವಿಲಿಯನ್ ದಾರಿ ತೋರಿದರು. ಉಮ್ರನ್ ಮಲೀಕ್ ವಿಕೆಟ್ ಕೂಡ ಕಬಳಿಸಿದ ಪ್ರಸಿದ್ಧ ಈ ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳನ್ನು ಗಳಿಸಿದ ಸಾಧನೆ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು ಆರು ವಿಕೆಟ್‌ ಗಳಿಸಿದ್ದರು. ಅದರಿಂದಾಗಿ ಕಾಶ್ಮೀರ ತಂಡವು 93 ರನ್‌ಗಳಿಗೆ ಆಲೌಟ್ ಆಗಿತ್ತು.

ಮೊದಲ ಇನಿಂಗ್ಸ್‌ನಲ್ಲಿ 302 ರನ್ ಗಳಿಸಿದ್ದ ಕರ್ನಾಟಕವು 209 ರನ್‌ಗಳ ಭಾರಿ ಮುನ್ನಡೆ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ 71 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 298 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಎರಡೂ ಇನಿಂಗ್ಸ್‌ಗಳಲ್ಲಿ ಮಿಂಚಿದ್ದ ಕರುಣ್ ನಾಯರ್ (175 ಮತ್ತು ಔಟಾಗದೆ 71) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT