ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ವಿನಯ್ ಬಳಗಕ್ಕೆ ಇನಿಂಗ್ಸ್‌ ಹಿನ್ನಡೆ

ಸೌರಾಷ್ಟ್ರ ಎದುರಿನ ಕ್ರಿಕೆಟ್‌ ಪಂದ್ಯ: ಬ್ಯಾಟಿಂಗ್‌ ವೈಫಲ್ಯ ಕಂಡ ವಿನಯ್‌ ಪಡೆ
Last Updated 7 ಡಿಸೆಂಬರ್ 2018, 18:16 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಮಧ್ಯಮ ಮತ್ತು ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದ್ದರಿಂದ ಕರ್ನಾಟಕ ತಂಡ ಸೌರಾಷ್ಟ್ರ ಎದುರಿನ ರಣಜಿ ಟ್ರೋಫಿ ಎಲಿಟ್‌ ‘ಎ’ ಗುಂಪಿನ ಪಂದ್ಯದಲ್ಲಿ ಇನಿಂಗ್ಸ್‌ ಹಿನ್ನಡೆ ಕಂಡಿದೆ.

ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಅಂಗಳದಲ್ಲಿ 9 ವಿಕೆಟ್‌ಗೆ 288ರನ್‌ಗಳಿಂದ ಶುಕ್ರವಾರ ಆಟ ಮುಂದುವರಿಸಿದ ಜಯದೇವ್‌ ಶಾ ಬಳಗ ಮೊದಲ ಇನಿಂಗ್ಸ್‌ನಲ್ಲಿ 97.1 ಓವರ್‌ಗಳಲ್ಲಿ 316ರನ್‌ಗಳಿಗೆ ಆಲೌಟ್‌ ಆಯಿತು.

ಗುರುವಾರ 76 ಎಸೆತಗಳಲ್ಲಿ 31ರನ್‌ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಕಮಲೇಶ್‌ ಮಕ್ವಾನ ಈ ಮೊತ್ತಕ್ಕೆ 15ರನ್‌ ಸೇರಿಸಿ ವಿಕೆಟ್‌ ನೀಡಿದರು. 96 ಎಸೆತಗಳನ್ನು ಆಡಿದ ಅವರು ನಾಲ್ಕು ಬೌಂಡರಿ ಸಿಡಿಸಿದರು. 98ನೇ ಓವರ್‌ನ ಮೊದಲ ಎಸೆತದಲ್ಲಿ ಜೆ.ಸುಚಿತ್‌, ಮಕ್ವಾನ ಅವರನ್ನು ಬೌಲ್ಡ್‌ ಮಾಡಿ ಎದುರಾಳಿಗಳ ಇನಿಂಗ್ಸ್‌ಗೆ ತೆರೆ ಎಳೆದರು. ಯುವರಾಜ್‌ ಚೂಡಾಸಮಾ 29 ಎಸೆತಗಳಲ್ಲಿ ನಾಲ್ಕು ಬೌಂಡರಿ ಸಹಿತ 20ರನ್‌ ಗಳಿಸಿ ಅಜೇಯವಾಗುಳಿದರು.

ಆರ್‌.ವಿನಯ್‌ ಕುಮಾರ್‌ ಸಾರಥ್ಯದ ಕರ್ನಾಟಕ ತಂಡ 78.1 ಓವರ್‌ಗಳಲ್ಲಿ 217ರನ್‌ ಗಳಿಸಿ ಪ್ರಥಮ ಇನಿಂಗ್ಸ್‌ನ ಹೋರಾಟ ಮುಗಿಸಿತು.

ಪ್ರವಾಸಿ ತಂಡ 25ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತು. ಆರ್‌.ಸಮರ್ಥ್‌ (15; 37ಎ, 2ಬೌಂ) ಮತ್ತು ದೇವದತ್ತ ಪಡಿಕ್ಕಲ್‌ (3;9ಎ) ಬೇಗನೆ ಔಟಾದರು.

ಕರುಣ್‌–ನಿಶ್ಚಲ್‌ ಅರ್ಧಶತಕದ ಮಿಂಚು: ಈ ಹಂತದಲ್ಲಿ ಒಂದಾದ ಡಿ.ನಿಶ್ಚಲ್‌ (58; 179ಎ, 3ಬೌಂ, 1ಸಿ) ಮತ್ತು ಕರುಣ್‌ ನಾಯರ್‌ (63; 83ಎ, 11ಬೌಂ) ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾದರು.

ಆತಿಥೇಯ ಬೌಲರ್‌ಗಳನ್ನು ಕಾಡಿದ ಈ ಜೋಡಿ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 96ರನ್‌ ಗಳಿಸಿ ತಂಡವನ್ನು ಶತಕದ ಗಡಿ ದಾಟಿಸಿತು. 40ನೇ ಓವರ್‌ನಲ್ಲಿ ಕರುಣ್‌, ಕಮಲೇಶ್‌ ಮಕ್ವಾನಗೆ ವಿಕೆಟ್‌ ನೀಡಿದರು. ಇದರ ಬೆನ್ನಲ್ಲೇ ಕೆ.ವಿ.ಸಿದ್ದಾರ್ಥ್‌ (6; 28ಎ) ಔಟಾದರು.

ನಂತರ ತಂಡ ಕುಸಿತದ ಹಾದಿ ಹಿಡಿಯಿತು. ನಿಶ್ಚಲ್‌ ಮತ್ತು ಪವನ್‌ ದೇಶಪಾಂಡೆ (27; 48ಎ, 3ಬೌಂ) ಅವರ ವಿಕೆಟ್‌ ಉರುಳಿಸಿದ ಧರ್ಮೇಂದ್ರಸಿನ್ಹಾ ಜಡೇಜ ಸೌರಾಷ್ಟ್ರ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನೂ ಬೇಗನೆ ಕಟ್ಟಿಹಾಕಿದ ಆತಿಥೇಯ ಬೌಲರ್‌ಗಳು ಇನಿಂಗ್ಸ್‌ ಮುನ್ನಡೆ ಪಡೆದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT